Monday, Jun 1 2020 | Time 02:18 Hrs(IST)
Sports Share

ಆಗಸ್ಟ್ ನಲ್ಲಿ ಹೈದರಾಬಾದ್ ಓಪನ್

ನವದೆಹಲಿ, ಮೇ 22 (ಯುಎನ್ಐ)
ಮುಂಬರುವ ಆಗಸ್ಟ್ ನಲ್ಲಿ ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) ಶುಕ್ರವಾರ ಹೇಳಿದೆ. ಈ ಮೂಲಕ ಬ್ಯಾಡ್ಮಿಂಟನ್ ಚಟುವಟಿಕೆಗಳು ಪುನರಾರಂಭಕ್ಕೆ ವೇದಿಕೆ ಸಿದ್ದಗೊಂಡಿದೆ.
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಮಾರ್ಚ್ ನಿಂದಲೇ ಎಲ್ಲ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಅಮಾನತುಗೊಳಿಸಲಾಗಿತ್ತು.
ನಿಧಾನವಾಗಿ ಮತ್ತು ಸ್ಥಿರವಾಗಿ ಪ್ರಪಂಚದಾದ್ಯಂತದ ಕ್ರೀಡೆಗಳು ಪುನರಾರಂಭವಾಗಲು ಯತ್ನಿಸುತ್ತಿದ್ದು,ಬ್ಯಾಡ್ಮಿಂಟನ್ ಸಹ ತನ್ನ ಚಟುವಟಿಕೆ ಆರಂಭಸಲು ಮುಂದಾಗಿದೆ.
ಸದ್ಯದ ಬಿಕ್ಕಟ್ಟಿನಿಂದಾಗಿ ಒರ್ಲೀನ್ ಮಾಸ್ಟರ್ಸ್(ಮಾ.24ರಿಂದ 29), ಸಿಂಗಾಪುರ ಓಪನ್ (ಏ.7ರಿಂದ 12), ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಷಿಪ್ (ಏ.21ರಿಂದ 26), ಎಕ್ಸ್ ಎಕ್ಸ್ ಐವಿ ಪ್ಯಾನ್ ಆಮ್ ವೈಯಕ್ತಿಕ ಚಾಂಪಿಯನ್ ಷಿಪ್ (ಏ.23ರಿಂದ 26), ಯುಎಸ್ ಓಪನ್ (ಜೂ.23ರಿಂದ 28), ಕೆನಡಾ ಓಪನ್ (ಜೂ.30ರಿಂದ ಜು.5), ರಷ್ಯನ್ ಓಪನ್ (ಜು.7ರಿಂದ 12), ಅಕಿತಾ ಮಾಸ್ಟರ್ಸ್ (ಆ.18ರಿಂದ 23), ವಿಯೆಟ್ನಾಂ ಓಪನ್ (ಆ.25ರಿಂದ 30) ಮತ್ತು ಇಂಡೊನೇಷ್ಯಾ ಮಾಸ್ಟರ್ಸ್ (ಸೆ.29ರಿಂದ ಅ.4) ಸೇರಿದಂತೆ ಹತ್ತು ಟೂರ್ನಿಗಳನ್ನು ರದ್ದುಪಡಿಸಲಾಗಿದೆ. ಈ ಮಧ್ಯೆ, ಜರ್ಮನ್ ಓಪನ್ (ಮಾರ್ಚ್ 3-8), ಸ್ವಿಸ್ ಓಪನ್ (ಮಾರ್ಚ್ 17-22), ಯುರೋಪಿಯನ್ ಚಾಂಪಿಯನ್‌ಷಿಪ್ (ಏಪ್ರಿಲ್ 21-26) ಮತ್ತು ಆಸ್ಟ್ರೇಲಿಯನ್ ಓಪನ್ 2020 (ಜೂನ್ 2-7) ಅಮಾನತುಗೊಂಡ ನಾಲ್ಕು ಪಂದ್ಯಾವಳಿಗಳಿಗೆ ಸೂಕ್ತವಾದ ಬದಲಿ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ.
ಯುಎನ್ಐಆರ್ ಕೆ 2005