Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Sports Share

ಇಂಗ್ಲೆಂಡ್‌ ತಂಡದ ಆರಂಭಿಕ ಜೇಸನ್‌ ರಾಯ್‌ಗೆ ದಂಡ

ಬರ್ಮಿಂಗ್‌ಹ್ಯಾಮ್‌, ಜು 12 (ಯುಎನ್‌ಐ) ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದ ವೇಳೆ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್‌ಗೆ ಪಂದ್ಯದ ಶುಲ್ಕದ ಶೇಕಡಾ 30ರಷ್ಟು ದಂಡ ವಿಧಿಸಲಾಗಿದೆ.
"ಇಂಗ್ಲೆಂಡ್‌ ಆರಂಭಿಕ ಜೇಸನ್‌ ರಾಯ್ ಅವರು ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಆರ್ಟಿಕಲ್ 2.8 ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್‌ಗಳ ನಿರ್ಧಾರದಲ್ಲಿ ಭಿನ್ನಾಭಿಪ್ರಾಯವನ್ನು ತೋರಿಸುವುದಕ್ಕೆ ಸಂಬಂಧಿಸಿದೆ. ಶೇ.30 ರಷ್ಟು ದಂಡದ ಜೊತೆಗೆ, ರಾಯ್ ಅವರ ಶಿಸ್ತಿನ ದಾಖಲೆಗೆ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗಿದೆ" ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
224 ರನ್‌ ಗುರಿ ಮುಟ್ಟುವ ಹಾದಿಯಲ್ಲಿ ಇಂಗ್ಲೆಂಡ್‌ ಆರಂಭಿಕ ಜೇಸನ್‌ ರಾಯ್‌ ಅವರು ಆಸ್ಟ್ರೇಲಿಯಾ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ್ದರು. 65 ಎಸೆತಗಳಲ್ಲಿ 85 ರನ್‌ ಗಳಿಸಿ ಶತದಂಚಿನಲ್ಲಿದ್ದ ರಾಯ್‌ ಅವರು, ಪ್ಯಾಟ್‌ ಕಮಿನ್ಸ್ ಅವರ 20ನೇ ಓವರ್‌ನಲ್ಲಿ ಲೆಗ್‌ ಸ್ಟಂಪ್‌ ಹೊರಗಡೆ ಚೆಂಡು ಹೋಗುತ್ತಿತ್ತು. ಈ ವೇಳೆ ರಾಯ್‌ ಅನಗತ್ಯವಾಗಿ ಹೊಡೆಯಲು ಪ್ರಯತ್ನಿಸಿದರು. ಈ ವೇಳೆ ಚೆಂಡು ನೇರವಾಗಿ ಕೀಪರ್‌ ಕೈಗೆ ಸೇರಿತು. ಇಂಗ್ಲೆಂಡ್‌ ಬಲವಾದ ಅಫೀಲ್‌ಗೆ ಅಂಪೈರ್‌ ರಂಜನ್‌ ಮಡುಗಲ್ಲೆ ಗಲಿಬಿಲಿಗೊಂಡು ಔಟ್‌ ನೀಡಿದ್ದರು. ಇದರಿಂದ ರಾಯ್‌ ಅಂಪೈರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿವಿ ರೀಪ್ಲೆಯಲ್ಲಿ ಚೆಂಡು ಬ್ಯಾಟ್‌ಗೆ ತಾಗಿರುವುದು ಸ್ಪಷ್ಟವಾಗಲಿಲ್ಲ.
ಜೇಸನ್‌ ರಾಯ್‌ ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಔಪಚಾರಿಕ ವಿಚಾರಣೆ ಎದುರಿಸುವ ಅಗತ್ಯವಿಲ್ಲ ಎಂದು ಐಸಿಸಿ ಉಲ್ಲೇಖಿಸಿದೆ.
ಅಂತಿಮವಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್‌ ಐದು ಬಾರಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ಎಂಟು ವಿಕೆಟ್‌ ಗೆಲುವು ಸಾಧಿಸಿತು. ಇದೇ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಚೊಚ್ಚಲ ವಿಶ್ವಕಪ್‌ ಗೆಲುವಿಗಾಗಿ ಕಾದಾಟ ನಡೆಸಲಿದೆ.
ಯುಎನ್‌ಐ ಆರ್‌ಕೆ ಎಎಚ್‌ 0934