Wednesday, Jan 29 2020 | Time 02:20 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Special Share

ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದ ಆಕ್ರೋಶ; ಗೌಹಾತಿಯಲ್ಲಿ ಮೂವರು ಪ್ರತಿಭಟನೆಕಾರರು ಪೊಲೀಸರ ಗುಂಡಿಗೆ ಬಲಿ

ಗೌಹಾತಿ, ಡಿ ೧೨ (ಯುಎನ್‌ಐ) ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಜನರ ಆಕ್ರೋಶ ಭುಗಿಲೆದ್ದಿದೆ. ಅಸ್ಸಾಂ, ತ್ರಿಪುರಾ ಮತ್ತು ಮೇಘಾಲಯದಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಗೌಹಾತಿಯಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ್ದು, ಗುರುವಾರ ಸಂಜೆ ರಸ್ತೆಗಿಳಿದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗೋಲಿಬಾರ್ ನಡೆಸಿದ್ದು. ಮೂವರು ಪ್ರತಿಭಟನೆಕಾರರು ಗುಂಡೇಟಿಗೆ ಬಲಿಯಾಗಿದ್ದಾರೆ. ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡ ಹಲವರು ಗೌಹಾತಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ಸಾಂ ರಾಜ್ಯಾದ್ಯಂತ ಪೌರತ್ವ ಮಸೂದೆ ವಿರುದ್ಧ ಪ್ರತಿಭಟನೆಗಳು ಮುಂದುವರೆದಿದೆ. ಕೇಂದ್ರ ಸಚಿವ ರಾಮೇಶ್ವರ್ ತೇಲಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ್ ಅವರ ನಿವಾಸಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಅಸ್ಸಾಂನ ೧೦ ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಬುಧವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ. ಗೌಹಾತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಈ ನಡುವೆ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಸರ್ಕಾರ ಹಲವು ಪೊಲೀಸ್ ಉನ್ನತ ಅಧಿಕಾರಿಗಳನ್ನು ಬದಲಾಯಿಸಿದೆ. ಪ್ರತಿಭಟನೆ ನಿಯಂತ್ರಣಕ್ಕೆ ಈಶಾನ್ಯ ರಾಜ್ಯಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ. ಮೇಘಾಲಯದಲ್ಲಿ ಇಂಟರ್ ನೆಟ್ ಸೇವೆಗಳನ್ನು ೪೮ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ವಿಧೇಯಕ ವಿರುದ್ಧ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಗೃಹ ಸಚಿವ ಅಸದುಜ್ಜಾನ್ ತಮ್ಮ ಶಿಲ್ಲಾಂಗ್ ಭೇಟಿಯನ್ನು ರದ್ದು ಮಾಡಿದ್ದಾರೆ. ಇದಕ್ಕೂ ಮೊದಲು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಅವರು ತಮ್ಮ ದೆಹಲಿ ಭೇಟಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಭಾರತ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿರುವುದನ್ನು ಮೊಮೆನ್ ಟೀಕಿಸಿದ್ದರು.
ಯುಎನ್ ಐ ಕೆವಿಆರ್