Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Karnataka Share

ಓಡೋಡಿ ಬಂದು 2ನೇ ಬಾರಿಗೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ದೌಡಾಯಿಸಿದ ಅತೃಪ್ತರು !

ಬೆಂಗಳೂರು,ಜು 11(ಯುಎನ್ಐ) ಸ್ಪೀಕರ್ ಮುಂದೆ ಹಾಜರಾಗಿ ತಮ್ಮ ರಾಜಿನಾಮೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ವಯ ಸಭಾಧ್ಯಕ್ಷ ರಮೇಶ್ ಕುಮಾರ್ ಕಚೇರಿ ಗುರುವಾರ ರಾಜಕೀಯ ವಿದ್ಯಮಾನಗಳ ಕೇಂದ್ರಬಿಂದುವಾಯಿತು.
ಸ್ಪೀಕರ್ ರಮೇಶ್ ಕುಮಾರ್ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಕಚೇರಿಗೆ ಆಗಮಿಸಿ ಕಾದು ಕುಳಿತುಕೊಂಡಿದ್ದರು. ಗುರುವಾರ ಕೆಲವು ಶಾಸಕರು ರಾಜಿನಾಮೆ ಸಲ್ಲಿಸುತ್ತಾರೆ ಎಂಬ ವದಂತಿ ಇತ್ತು. ಆದರೆ ಇಂದು ಯಾವ ಶಾಸಕರೂ ರಾಜೀನಾಮೆ ಸಲ್ಲಿಸಲಿಲ್ಲ. ಸ್ಪೀಕರ್ ಮಧ್ಯಾಹ್ನ ಭೋಜನಕ್ಕೆ ಮನೆಗೆ ತೆರಳಿದ ಸಂದರ್ಭದಲ್ಲಿ ರೋಷನ್ ಬೇಗ್ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ತೆರಳಿದರು.
ಮಧ್ಯಾಹ್ನ ಕಚೇರಿಗೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಮಧ್ಯಾಹ್ನದ ಮೇಲೆ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ನಿಯೋಜಿಸಿದ ಕ್ಯಾಮೆರಾಮೆನ್ ಗೆ ಸೂಚನೆ ನೀಡಿದರು.ಈ ಮಧ್ಯೆ ಜೆಡಿಎಸ್ ನ ರಮೇಶ್ ಬಾಬು ರಾಜೀನಾಮೆ ಸಲ್ಲಿಸಿರುವ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸುವಂತೆ ರಮೇಶ್ ಕುಮಾರ್ ಗೆ ದೂರು ಸಲ್ಲಿಸಿದರು.ಆದರೆ ಪಕ್ಷದ ಅಧಿಕೃತ ನಾಯಕರು ಅಥವಾ ಜವಾಬ್ದಾರಿಯುತ ವ್ಯಕ್ತಿ ದೂರು ನೀಡಬೇಕೆಂದು ತಾಕೀತು ಮಾಡಿದ ಸ್ಪೀಕರ್ ಅವರನ್ನು ವಾಪಸ್ ಕಳುಹಿಸಿದರು.
ವಿಧಾನ ಸೌಧಕ್ಕೆ ಶಾಸಕರು ರಾಜೀನಾಮೆ ಸಲ್ಲಿಸಲು ಆಗಮಿಸುವ ಮೊದಲು ಸ್ಪೀಕರ್ ಕಚೇರಿಯ ಒಳಗಡೆ ತೆರಳಲು ಅವಕಾಶ ನೀಡುವಂತೆ ಬಿಜೆಪಿ ಶಾಸಕರ ನಿಯೋಗ ವಿಧಾನಸೌಧದ ದಕ್ಷಿಣ ದ್ವಾರದ ಮೂಲಕ ಆಗಮಿಸಿ ಮನವಿ ಮಾಡಿದರು.ಆದರೆ ಪೋಲಿಸರು ಶಾಸಕರ ಮನವಿಯನ್ನು ತಿರಸ್ಕರಿಸಿದರು.
ಸ್ಪೀಕರ್ ಕಚೇರಿಗೆ ತೆರಳಲು ಬಿಜೆಪಿ ಶಾಸಕರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕುಡುಚಿ ಶಾಸಕ ಪಿ.ರಾಜೀವ್, ವಿರೋಧ ಪಕ್ಷದ ಮುಖ್ಯ ಸಚೇತಕ ಸುನಿಲ್ ಕುಮಾರ್, ಬಸವರಾಜ್ ಬೊಮ್ಮಾಯಿ,ಉಮೇಶ್ ಕತ್ತಿ ಹಾಗೂ ರವಿಕುಮಾರ್ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ವಿಧಾನಸಭಾ ಕಾರ್ಯದರ್ಶಿ ಕಚೇರಿಗೆ ತೆರಳುತ್ತೇವೆ ಎಂದು ಹೇಳಿದರೂ ಪೊಲೀಸರು ಅವರನ್ನು ಒಳಗೆ ಬಿಡಲು ನಿರಾಕರಿಸಿದರು.
ಸ್ಪೀಕರ್ ಆದೇಶದಂತೆ ರಾಜೀನಾಮೆ ನೀಡುವ ಶಾಸಕರನ್ನು ಹೊರತುಪಡಿಸಿ ಮತ್ಯಾರಿಗೂ ಒಳಗೆ ಬಿಡದಂತೆ ಸೂಚನೆ ನೀಡಿದ್ದಾರೆ ಎಂದು ಮಾರ್ಷಲ್ ಗಳು ಪೊಲಿಸರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪೋಲೀಸರ ವಿರುದ್ಧ ಬಿಜೆಪಿ ಶಾಸಕ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು. ಸುಪ್ರೀಂ ಕೋರ್ಟ್ ಪೊಲೀಸ್ ಮಹಾನಿರ್ದೇಶಕರಿಗೆ ಶಾಸಕರಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ.ವಿಧಾನಸೌಧ ಈಗ ಸ್ಪೀಕರ್ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರಿಗೆ ರಕ್ಷಣೆ ನೀಡುವುದು ಪೋಲೀಸರ ಕೆಲಸ. ಸ್ಪೀಕರ್ ಅವರ ಕೂಪಮಂಡೂಕದ ಅಧಿಕಾರ ಬಹಳ ದಿನ ನಡೆಯುವುದಿಲ್ಲ ಎಂದು ರಮೇಶ್ ಕುಮಾರ್ ವಿರುದ್ಧ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸುವ ಶಾಸಕರಿಗೆ ವಿಪ್ ಜಾರಿ ಮಾಡಲು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಜೆಡಿಎಸ್ ವಕ್ತಾರ ರಮೇಶ್ ಬಾಬು ಹಾಗೂ ಕಾಂಗ್ರೆಸ್ ಪಕ್ಷದ ವಿ ಎಸ್ ಉಗ್ರಪ್ಪ ಸ್ಪೀಕರ್ ಕಚೇರಿಯಲ್ಲಿದ್ದಾರೆ.ಅವರನ್ನು ತಕ್ಷಣದಿಂದ ಕಚೇರಿಯಿಂದ ಹೊರಗೆ ಕಳುಹಿಸಿ ಇಲ್ಲದಿದ್ದಲ್ಲಿ ನಮ್ಮನ್ನು ಸ್ಪೀಕರ್ ಕಚೇರಿ ಒಳಗಡೆ ಬಿಡಿ ಎಂದು ಬಸವರಾಜ್ ಬೊಮ್ಮಾಯಿ, ಉಮೇಶ್ ಕತ್ತಿ ಪೊಲೀಸರ ಜೊತೆ ಮಾತಿನ ಚಕಮಕಿಗೆ ಇಳಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಐಜಿಪಿ ರವಿಕಾಂತೇಗೌಡ ಬಿಜೆಪಿ ಶಾಸಕರ ಜೊತೆ ಚರ್ಚೆ ನಡೆಸಿ ಬಳಿಕ ಸ್ಪೀಕರ್ ಅವರಿಗೆ ಮಾಹಿತಿ ನೀಡಿ, ಕಚೇರಿಯಲ್ಲಿದ್ದ ಉಗ್ರಪ್ಪ,ಕೋನರೆಡ್ಡಿ ಹಾಗೂ ರಮೇಶ್ ಬಾಬು ಅವರನ್ನು ಅಲ್ಲಿಂದ ಹೊರಡುವಂತೆ ಮಾಡಿದರು.ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಸ್ಪೀಕರ್ ಕಚೇರಿಯಿಂದ ಹೊರಗೆ ತೆರಳಿದ ಬಳಿಕ ಬಿಜೆಪಿ ಶಾಸಕರು ಪ್ರವೇಶ ದ್ವಾರದಿಂದ ನಿರ್ಗಮಿಸಿದರು.
ಇತ್ತ ಸುಪ್ರೀಂ ಕೋರ್ಟ್ ಆದೇಶ ಹಾಗೂ ಡಾ.ಸುಧಾಕರ್ ರಾಜೀನಾಮೆ ನೀಡಿದ ಬಳಿಕ ನಡೆದ ಹೈಡ್ರಾಮದ ಹಿನ್ನಲೆಯಲ್ಲಿ ವಿಧಾನ ಸೌಧಕ್ಕೆ ಪೊಲೀಸ್ ಸರ್ಪಗಾವಲನ್ನು ಹಾಕಿದ್ದರು. ಕೆಂಗೆಲ್ ದ್ವಾರದಿಂದ ಶಾಸಕರು,ವಿಧಾನ ಸಭೆ ಅಧಿಕಾರಿಗಳು ಹೊರತುಪಡಿಸಿ ಇತರರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.ಅಲ್ಲದೆ ಸ್ಪೀಕರ್ ಕಚೇರಿಯ ಅಕ್ಕ ಪಕ್ಕದ ಕಚೇರಿಗಳಿಗೂ ಬೀಗ ಜಡಿಯುವ ಮೂಲಕ ಭದ್ರತೆಯನ್ನು ಭಾರಿ ಬಿಗಿಗೊಳಿಸಿದ್ದರು.

ವಿಧಾನಸೌಧಕ್ಕೆ ಆಗಮಿಸುವ ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವಿಧಾನಸೌಧದ ಮೊದಲನೆ ಮಹಡಿಯಲ್ಲಿ ಸಂಪೂರ್ಣ ಪೊಲೀಸ್ ಭದ್ರತೆ ಪರಿಶೀಲನೆ ನಡೆಸಿದರು.
ಪತ್ರಕರ್ತರು ಹಾಗೂ ಹತ್ತು ಜನ ಶಾಸಕರನ್ನು ಬಿಟ್ಟು ಸ್ಪೀಕರ್ ಕಚೇರಿ ಇರುವ ವಿಧಾನಸೌಧದ ದಕ್ಷಿಣ ಭಾಗದಲ್ಲಿ ಯಾವುದೇ ವ್ಯಕ್ತಿಯನ್ನು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಂಜೆ ಆರು ಗಂಟೆಯೊಳಗೆ ಸ್ಪೀಕರ್ ರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಎಚ್ಎಎಲ್ ವಿಮಾನದಿಂದ ವಿಧಾನಸೌಧಕ್ಕೆ ಪೋಲೀಸರ ಬಿಗಿ ಭದ್ರತೆಯಲ್ಲಿ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಹನ್ನೊಂದು ಶಾಸಕರು ವಿಧಾನಸೌಧಕ್ಕೆ ದೌಡಾಯಿಸಿ ಬಂದರು.
10 ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಕಚೇರಿ ತಲುಪುವ ಸಮಯಕ್ಕೆ ಆರು ಗಂಟೆಯಾಗಿತ್ತು.ಹೀಗಾಗಿ ಅತೃಪ್ತ ಶಾಸಕರು ತರಾತುರಿಯಲ್ಲಿ ಬಸ್ ಇಳಿದು ಸ್ಪೀಕರ್ ಕಚೇರಿವರೆಗೆ ಓಡೋಡಿ ಬಂದರು.ಶಾಸಕರು ಸ್ಪೀಕರ್ ಕಚೇರಿ ಪ್ರವೇಶಿಸುವ ವೇಳೆಗೆ ಸಮಯ 06 ಗಂಟೆ 05 ನಿಮಿಷವಾಗಿತ್ತು.ಆದರೂ ಸ್ಪೀಕರ್ ಕಚೇರಿಗೆ ಹನ್ನೊಂದು ಜನ ಶಾಸಕರು ಆಗಮಿಸಿ ರಮೇಶ್ ಕುಮಾರ್ ಅವರಿಗೆ ನಿಗದಿತ ನಮೂನೆಯಲ್ಲಿ ರಾಜಿನಾಮೆ ಪತ್ರಗಳನ್ನು ಸಲ್ಲಿಕೆ ಮಾಡಿ ಅಲ್ಲಿಂದ ಭದ್ರತೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು.
ಯುಎನ್ಐ ಎಸ್ಎಂಆರ್ ಕೆವಿಆರ್ 2125