Monday, Jul 22 2019 | Time 07:24 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Karnataka Share

ಕುಮಾರಕೃಪದಲ್ಲಿ ಕಾಂಗ್ರೆಸ್ ಸಭೆ : ಸಂಘಟನಾತ್ಮಕ ಹೋರಾಟ ನಡೆಸಲು ತೀರ್ಮಾನ

ಬೆಂಗಳೂರು, ಜು 11 (ಯುಎನ್‍ಐ) ಮೈತ್ರಿ ಸರ್ಕಾರದ ವಿರುದ್ಧ ತಿರುಗಿಬಿದ್ದು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯದಲ್ಲಿ ಗುರುವಾರ ಸಹ ಬಿರುಸಿನ ಚಟುವಟಿಕೆಗಳು ನಡೆದವು.
ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ನಡೆಸುತ್ತಿರುವ ಕಸರತ್ತು ಮುಂದುವರೆಸಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಸಭೆ ನಡೆಸಿದ ಮೈತ್ರಿ ನಾಯಕರು, ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂನಬಿ ಅಜಾದ್, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಬುಧವಾರ ಸರಣಿ ಸಭೆ ನಡೆಸಿದ್ದ ನಾಯಕರು, ಬಿಜೆಪಿಯ ನಡೆಯ ವಿರುದ್ಧ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಿದ್ದರು.
ಇಂದು ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು, ಕೆ.ಸುಧಾಕರ್ ರಾಜೀನಾಮೆ ಸಂದರ್ಭದಲ್ಲಿ ನಡೆದ ಘಟನೆ, ಬಿಜೆಪಿ ಶಾಸಕರ ಟೀಕೆಗಳು, ಸುಪ್ರೀಂಕೋರ್ಟ್ ನೀಡಿದ ಸೂಚನೆ, ಮುಖ್ಯಮಂತ್ರಿ ಬದಲಾವಣೆ, ಶಾಸಕರ ಅನರ್ಹತೆ ಸೇರಿದಂತೆ ಪಕ್ಷ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಸಿ, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಸಂಘಟನಾತ್ಮಕವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮೈತ್ರಿ ಮುಂದುವರೆಕೆಗೆ ಮೂರು ಸೂತ್ರಗಳನ್ನು ರಚಿಸಿ ಆ ಬಗ್ಗೆ ಚರ್ಚಿಸಲಾಯಿತು. ಸರ್ಕಾರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡುವುದು, ಕುಮಾರಸ್ವಾಮಿ ಅವರಿಂದ ಮುಖ್ಯಮಂತ್ರಿ ಹುದ್ದೆಯನ್ನು ಹಿಂಪಡೆದು ಆ ಸ್ಥಾನಕ್ಕೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟು ಹೆಚ್.ಡಿ.ರೇವಣ್ಣ ಅವರಿಗೆ ಅವಕಾಶ ಕಲ್ಪಿಸುವುದು, ಮೈತ್ರಿ ಸರ್ಕಾರ ವಿಸರ್ಜನೆ ಮಾಡಿದರೆ ಆಗಬಹುದಾದ ಲಾಭನಷ್ಟಗಳು, ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿರುವ ಬಂಡಾಯ ಶಾಸಕರನ್ನು ಅನರ್ಹಗೊಳಿಸಿ ಅವರ ವಿರುದ್ಧ ಕಾನೂನಾತ್ಮ ಹೋರಾಟ ನಡೆಸುವುದು ಕೊನೆಯದಾಗಿ ಸರ್ಕಾರ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವುದು. ಈ ಮೂರು ವಿಷಯಗಳ ಲಾಭನಷ್ಟಗಳ ಕುರಿತು ಲೆಕ್ಕಾಚಾರ ಹಾಕಲಾಯಿತು ಎನ್ನಲಾಗಿದೆ.
ಆದರೆ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಸರ್ಕಾರದ ಮುಂದಿನ ನಡೆ ಬಗ್ಗೆ ಯಾವುದೇ ನಾಯಕರು ಸುಳಿವು ಬಿಟ್ಟುಕೊಡಲಿಲ್ಲ.
ಸಭೆ ಬಳಿಕ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೈತ್ರಿ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆಯಾಗಿದೆಯೇ ಹೊರತು ಮುಖ್ಯಮಂತ್ರಿಗಳನ್ನು ಬದಲಾಯಿಸುವ ಬಗ್ಗೆ ಚರ್ಚೆಯಾಗಿಲ್ಲ. ಕುಮಾರಸ್ವಾಮಿ ರಾಜೀನಾಮೆ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾನು ರಾಜೀನಾಮೆ ಏಕೆ ಕೊಡಬೇಕು.ಅಂತಹ ಅವಶ್ಯಕತೆ ಏನಿದೆ ? ರಾಜೀನಾಮೆ ಕೊಡುವ ಸನ್ನಿವೇಶ ಎದುರಾಗಿಲ್ಲ ಎಂದು ಕಿಡಿಕಾರಿದರು.
2009 ರಲ್ಲಿ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ 18 ಶಾಸಕರು, ಸಚಿವರು ಸೇರಿದಂತೆ ಹಲವರು ಬಂಡೆದ್ದು ರಾಜೀನಾಮೆ ಕೊಟ್ಟಿದ್ದರು. ಆದರೆ ಆಗ ಏನಾಯಿತು ಎಂದು ಅವರು ಮರುಪ್ರಶ್ನೆ ಹಾಕಿದರು.
ಈ ಮಧ್ಯೆ ಜೆಡಿಎಸ್ ನಲ್ಲಿಯೂ ಸರ್ಕಾರ ರಕ್ಷಣೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತೆರೆಮರೆಯಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿದರು.
ಯುಎನ್‍ಐ ಯುಎಲ್ ಎಸ್‍ಎಂಆರ್ ವಿಎನ್ 1800