Friday, Oct 30 2020 | Time 07:16 Hrs(IST)
Special Share

ಕೇರಳದ ಐವರಿಗೆ ಅಲ್ ಕೈದಾ ನಂಟು: ಮೂವರ ಬಂಧನ, ಇನ್ನಿಬ್ಬರಿಗಾಗಿ ಶೋಧ

ಕೊಚ್ಚಿ, ಸೆಪ್ಟೆಂಬರ್ 20 (ಯುಎನ್‌ಐ) ಪಾಕಿಸ್ತಾನದ ಅಲ್-ಖೈದಾ ಸಂಘಟನೆಯೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಐವರ ಶೋಧಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಒಂದು ವಾರದಿಂದ ಕೇರಳದಲ್ಲಿದ್ದು, ಈ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಉಳಿದ ಇಬ್ಬರಿಗಾಗಿ ಶೋಧ ಮುಂದುವರಿಸಿದೆ.
ಸುಮಾರು ಒಂದು ತಿಂಗಳ ಹಿಂದೆಯೇ, ಕೇಂದ್ರ ಗೃಹ ಸಚಿವಾಲಯವು ಇಲ್ಲಿನ ನೌಕಾ ನೆಲೆ ಮತ್ತು ಶಿಪ್‌ಯಾರ್ಡ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ಫೋಟಗಳನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂಬ ಸೂಚನೆ ನೀಡಲಾಗಿತ್ತು.
ಕೊಯಮತ್ತೂರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಅಬ್ದುಲ್ ನಾಸಿರ್ ಮಅದನಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ 2005 ರ ಸೆಪ್ಟೆಂಬರ್ ಒಂಬತ್ತರಂದು ರಾತ್ರಿ ತಮಿಳುನಾಡಿನ ಬಸ್ ಅಪಹರಿಸಿ ಸುಟ್ಟುಹಾಕಿದ ಪ್ರಕರಣದಲ್ಲಿ ಅಲ್ ಖೈದಾ ಹೆಸರು ಕೇರಳದಲ್ಲಿ ಮೊದಲ ಬಾರಿಗೆ ಕೇಳಿಬಂತು.
ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ ಭಯೋತ್ಪಾದನಾ ವಿರೋಧಿ ದಳ, ಮುಖ್ಯ ಆರೋಪಿ ತಡಿಯಂದವಿಡ್ ನಸೀರ್ ಅಲ್-ಖೈದಾದ ದಕ್ಷಿಣ ಭಾರತದ ಮಾಡ್ಯೂಲ್‌ನ 'ಕಮಾಂಡರ್' ಎಂದು ಪತ್ತೆಹಚ್ಚಿತು.
ಆದರೆ ಎನ್ಐಎ ರಚನೆಯಾಗುವ ಮೊದಲು ನಡೆದ ಅಪರಾಧದ ಬಗ್ಗೆ ಆಳವಾದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಈ ಪ್ರಕರಣವನ್ನು ನಂತರ ಎನ್ಐಎ ವಹಿಸಲಾಯಿತು. ಆದರೆ ಇದು ಅಲ್-ಖೈದಾದ ಸಂಪರ್ಕದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ಯುಎನ್ಐ ಎಎಚ್ 2227