Monday, Jun 1 2020 | Time 00:52 Hrs(IST)
Entertainment Share

ಕೊರೋನಾ ಕಲ್ಕಿ ಅವತಾರವೇ? ಉಪ್ಪಿ

ಬೆಂಗಳೂರು, ಮೇ 22 (ಯುಎನ್‍ಐ) ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನಟ ಉಪೇಂದ್ರ ಕೊರೋನಾ ಕುರಿತು ಪ್ರಶ್ನೆಯೊಂದನ್ನ ಹಾಕಿದ್ದಾರೆ.

ಜಗತ್ತನ್ನು ಕಾಡುತ್ತಿರುವ ಕೊರೋನಾ ನಿಯಂತ್ರಣಕ್ಕೆ ವಿವಿಧ ಹಂತಗಳ ಲಾಕ್ ಡೌನ್ ವಿಧಿಸಲು ವಿಶ್ವಸಂಸ್ಥೆ ಸೂಚಿಸಿದೆಯಂತೆ, ಹೌದೇ? ಎಂದು ಲಾಕ್ ಡೌನ್ ಮೊದಲ ಹಂತದ ಸಂದರ್ಭದಲ್ಲಿ ಪ್ರಶ‍್ನಿಸಿದ್ದ ಉಪ್ಪಿ, ಇದೀಗ “ಕೊರೋನಾ ಕಲ್ಕಿ ಅವತಾರವೇ?” ಎಂದು ಕೇಳಿದ್ದಾರೆ.

“ಕೊರೋನಾ ಕಲ್ಕಿ ಅವತಾರ...., ಕಲಿಯುಗದ ಅಂತ್ಯವಾಗಿ ಸತ್ಯಯುಗದ ಆರಂಭ...., ರಾಜಕೀಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಸಂಪೂರ್ಣ ಬದಲಾವಣೆ ಆಗುತ್ತದೆ ಎಂದರೆ ನಂಬುತ್ತೀರಾ ?” ಅಂತ ಪ್ರಶ್ನಿಸಿದ್ದಾರೆ.

ಇದಕ್ಕೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಇಂತಹ ತಲೆಬುಡವಿಲ್ಲದ ಟ್ವೀಟ್ ಮಾಡುವುದು ನಿಲ್ಲಿಸಿ” ಎಂದು ಓರ್ವ ಟ್ವೀಟಿಗ ಹೇಳಿದ್ದರೆ, ಮತ್ತೊಬ್ಬರು, “ನಾನು ನಂಬುತ್ತೇನೆ ಸರ್, ಇದು ಸ್ವಾರ್ಥ ತುಂಬಿರುವ ಪ್ರಪಂಚಕ್ಕೆ ದೇವರು ಕೊಟ್ಟಿರೋ ಘೋರ ಶಿಕ್ಷೆ” ಎಂದಿದ್ದಾರೆ.

“ಏನಾದರೂ ಆಗಲಿ, ಕರ್ನಾಟಕದಲ್ಲಿ ಕನ್ನಡ ಮಾಯವಾಗದಿರಲಿ” ಎಂದು ಮತ್ತೊಂದು ಟ್ವೀಟ್ ಕನ್ನಡ ಪರ ಕಾಳಜಿ ತೋರಿದೆ.

ಮಂಜುನಾಥ ಜಿ.ಎಸ್. ಎಂಬುವರು, “ನಿಮ್ಮಂಥ ಮಾಧ್ವರು ನಂಬುತ್ತೀರಿ. ನಾವು ಆದಿಶಂಕರರ ಶಿಷ್ಯರು. ಅವತಾರಗಳನ್ನು ನಂಬುವುದಿಲ್ಲ. ನಾವು ಅಹಂ ಬ್ರಹ್ಮಾಸ್ಮಿ ಅನ್ನುವವರು. ನಮಗೆ ಜ್ಞಾನವೇ ದೇವರು. ದಯವಿಟ್ಟು ನಿಮ್ಮ ದ್ವೈತವನ್ನು ಬಿಟ್ಟು ಅದ್ವೈತ ಮಾರ್ಗವನ್ನು ಹಿಡಿಯಿರಿ. ಆತ್ಮ ನಿರ್ಭರತೆ ತಾನಾಗಿಯೇ ಬರುತ್ತದೆ. ಯಾರೋ ಭಾಷಣ ಮಾಡುವುದರಿಂದ ಬರುವುದಿಲ್ಲ” ಎಂದು ಉತ್ತರಿಸಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1612