Friday, Feb 28 2020 | Time 08:36 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಕಾಶ್ಮೀರ ಬಿಕ್ಕಟ್ಟು, ಟ್ರಂಪ್ ಸಹಾಯ, ಆಹ್ವಾನ ತಿರಸ್ಕರಿಸಿದ ಭಾರತ

ನವದೆಹಲಿ,ಜನವರಿ 22(ಯುಎನ್ಐ ) ಕಾಶ್ಮೀರದ ಬಿಕ್ಕಟ್ಟು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೆಯವರ ಹಸ್ತಕ್ಷೇಪ, ಮಧ್ಯಸ್ತಿಕೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ, ಖಡಕ್ ಸಂದೇಶ ರವಾನಿಸಿದೆ.
ದಾವೋಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ಶೃಂಗಸಭೆಯಲ್ಲಿ ವಿಶೇಷ ಭಾಷಣದ ವೇಳೆ ಕಾಶ್ಮೀರದ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರವನ್ನು ಅಮೆರಿಕ ಗಮನಿಸುತ್ತಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನ ಇಚ್ಛಿಸುವುದಾದರೆ ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಅಮೆರಿಕ ಸಹಾಯ ಮಾಡಲಿದೆ ಎಂಬ ಅಭಯ ನೀಡಿದ್ದರು.
ಆದರೆ, ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೊಂದು ಆಫರ್ ನೀಡಿದ ಬೆನ್ನಿಗೆ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ "ಕಾಶ್ಮೀರದ ವಿಚಾರದಲ್ಲಿ ಅಮೆರಿಕದ ಸಹಾಯದ ಅವಶ್ಯಕತೆ ಭಾರತಕ್ಕೆ ಇಲ್ಲ ಎಂದು ತಿಳಿಸುವ ಮೂಲಕ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದೆ ಎಂದು ಮೂಲಗಳು ಹೇಳಿವೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಭಾರತ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಕಾಶ್ಮೀರದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಅಮೆರಿಕ ಪದೇ ಪದೇ ಹೇಳುತ್ತಿದೆ .
ಆದರೆ, ಈ ವಿಚಾರದಲ್ಲಿ ಯಾವುದೇ ಮೂರನೇ ಶಕ್ತಿಯ ಹಸ್ತಕ್ಷೇಪಕ್ಕೆ ಭಾರತ ಅವಕಾಶ ನೀಡುವುದಿಲ್ಲ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಹಿಂದೆಯೇ ಸ್ಪಷ್ಟವಾಗಿ ತಿಳಿಸಿತ್ತು.
ಮುಂದಿನ ತಿಂಗಳ ಎರಡನೇ ವಾರದಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಕಾಶ್ಮೀರ ಬಿಕ್ಕಟ್ಟಿನ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ ಚರ್ಚೆ ನಡೆಸಲು ಮುಂದಾಗಿರುವ ಸಮಯದಲ್ಲೇ ಭಾರತ ಈ ಖಡಕ್ ತೀರ್ಮಾನ ತೆಗೆದುಕೊಂಡಿದೆಎಂದು ಮೂಲಗಳು ಹೇಳಿವೆ.

ಯುಎನ್ಐ ಕೆಎಸ್ಆರ್ 2233