Sunday, Mar 29 2020 | Time 00:49 Hrs(IST)
National Share

ದೇಶದ ಅರಣ್ಯ ವರದಿ ಬಿಡುಗಡೆ ಮಾಡಿದ ಜಾವಡೇಕರ್‌; ಅರಣ್ಯ ವೃದ್ಧಿಯಲ್ಲಿ ಕರ್ನಾಟಕ ಪ್ರಥಮ

ನವದೆಹಲಿ, ಡಿ.30 (ಯುಎನ್ಐ) ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಸೋಮವಾರ 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019 ಅನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು, ಭಾರತವು 2.5 ಬಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಹೇಳಿದರು.
ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವ ಭಾರತ ಅರಣ್ಯ ಸಮೀಕ್ಷೆಯ ಈ ವರದಿಯಲ್ಲಿ, 3,976 ಚದರ ಕಿ.ಮೀ (ಶೇಕಡಾ 0.56 ) ಅರಣ್ಯ ವ್ಯಾಪ್ತಿ, 1,212 ಚದರ ಕಿ.ಮೀ (ಶೇಕಡಾ1.29 ) ಮರದ ಹೊದಿಕೆ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದ ಕೆಲವು ಭಾಗಗಳಲ್ಲಿ ಅರಣ್ಯ ವೃದ್ಧಿಯಾಗಿದೆ.
ಫಲಿತಾಂಶಗಳು ಬಹಳ ಉತ್ತೇಜನಕಾರಿಯಾಗಿದೆ. ಅರಣ್ಯ ವ್ಯಾಪ್ತಿಯ ಬೆಳವಣಿಗೆ ಮತ್ತು ಕಾಡಿನ ಹೊರಗೆ ಮರಗಳ ಬೆಳವಣಿಗೆ ಕಂಡಿದ್ದು, ಈ ವಿಷಯದಲ್ಲಿ ಭಾರತವು ಅಗ್ರಗಣ್ಯ ದೇಶವಾಗಿದೆ ಎಂದು ನಾವು ಸಾಬೀತುಪಡಿಸಿದ್ದೇವೆ. ಭಾರತವು 2.5 ಬಿಲಿಯನ್ ಟನ್ ಇಂಗಾಲಕ್ಕೆ ಸಮಾನವಾದ ಗುರಿಯನ್ನು ಸಾಧಿಸುವ ಹಾದಿಯಲ್ಲಿದೆ. ನಾವು ರಾಜ್ಯಗಳ ಸಹಕಾರ ಮತ್ತು ಪ್ರತಿಯೊಬ್ಬರ ಭಾಗವಹಿಸುವಿಕೆಯೊಂದಿಗೆ, ವಿಶೇಷವಾಗಿ ನಮ್ಮ ಅರಣ್ಯ ಬೆಳವಣಿಗೆಯಲ್ಲಿ ಮುಖ್ಯ ಪಾಲುದಾರರಾಗಿರುವ ಬುಡಕಟ್ಟು ಮತ್ತು ಅರಣ್ಯವಾಸಿ ಜನರ ಭಾಗವಹಿಸುವಿಕೆ ಯೊಂದಿಗೆ ನಾವು ಮುಂದಡಿ ಇಡಬೇಕಾಗಿದೆ ಎಂದು ಜಾವಡೇಕರ್ ಹೇಳಿದರು.
ಅರಣ್ಯ ಬೆಳವಣಿಗೆಯ ಗುರಿ ಸಾಧಿಸಲು ಸರ್ಕಾರವು ಅನೇಕ ನಿಯಮಗಳನ್ನು ಪರಿಷ್ಕರಿಸಲಿದೆ. ನಾವು ಬಿದಿರು ಬೆಳೆಯಲ್ಲಿ ತಂದ ನಿಯಮಗಳಿಂದಾಗಿ ಎರಡು ವರ್ಷಗಳಲ್ಲಿ, ಬಿದಿರಿನ ಬೆಳವಣಿಗೆ ಅದ್ಭುತವಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.
ವರದಿಯ ಪ್ರಕಾರ, 2017ಕ್ಕೆ ಹೋಲಿಸಿದರೆ ಬಿದಿರು ಬೆಳೆಯುವ ಪ್ರದೇಶದಲ್ಲಿ 3,229 ಚದರ ಕಿ.ಮೀ ಹೆಚ್ಚಳವಾಗಿದೆ. ದೇಶದ ಒಟ್ಟು ಬಿದಿರು ಬೆಳೆಯುವ ಪ್ರದೇಶವು 1,60,037 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ.
ದೇಶದ ಒಟ್ಟು ಅರಣ್ಯ ಪ್ರದೇಶವು 7,12,249 ಚದರ ಕಿ.ಮೀ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 21.67 ರಷ್ಟಿದ್ದರೆ, ದೇಶದ ಅರಣ್ಯ ವ್ಯಾಪ್ತಿ ಶೇಕಡಾ 2.89 ರಷ್ಟಾಗಿದೆ ಅಂದರೆ, 95,027 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ,
ಅರಣ್ಯ ವ್ಯಾಪ್ತಿಯ ವೃದ್ಧಿಗೆ ಸಂಬಂಧಿಸಿದಂತೆ ಮೊದಲ ಐದು ಸ್ಥಾನಗಳನ್ನು ಕ್ರಮವಾಗಿ ಕರ್ನಾಟಕ (1,025 ಚದರ ಕಿ.ಮೀ), ಆಂಧ್ರಪ್ರದೇಶ (990 ಚದರ ಕಿ.ಮೀ), ಕೇರಳ (823 ಚದರ ಕಿ.ಮೀ), ಜಮ್ಮು ಮತ್ತು ಕಾಶ್ಮೀರ (371 ಚದರ ಕಿ.ಮೀ) ಮತ್ತು ಹಿಮಾಚಲ ಪ್ರದೇಶ (334 ಚದರ ಕಿ.ಮೀ) ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ದೇಶದ ಬೆಟ್ಟ ಗುಡ್ಡ ಜಿಲ್ಲೆಗಳಲ್ಲಿ 544 ಚದರ ಕಿ.ಮೀ ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಬುಡಕಟ್ಟು ಜಿಲ್ಲೆಗಳ ರೆಕಾರ್ಡ್ಡ್ ಫಾರೆಸ್ಟ್ ಏರಿಯಾ (ಆರ್‌ಎಫ್‌ಎ) ವ್ಯಾಪ್ತಿಯಲ್ಲಿ 741 ಚದರ ಕಿ.ಮೀ ಅರಣ್ಯ ವ್ಯಾಪ್ತಿಯು ಇಳಿಕೆ ಮತ್ತು ಹೊರಗಡೆ 1,922 ಚದರ ಕಿ.ಮೀ ಹೆಚ್ಚಳ ಕಂಡಿದೆ ಎಂದು ವರದಿ ತಿಳಿಸಿದೆ.
ಬುಡಕಟ್ಟು ಜಿಲ್ಲೆಗಳಲ್ಲಿ ಒಟ್ಟು ಅರಣ್ಯ ಪ್ರದೇಶ 4,22,351 ಚದರ ಕಿ.ಮೀ ಆಗಿದೆ, ಇದು ಈ ಜಿಲ್ಲೆಗಳ ಭೌಗೋಳಿಕ ಪ್ರದೇಶದ ಶೇಕಡಾ 37.54ರಷ್ಟು ಆಗಿದೆ.
ಅದೇ ರೀತಿ, 765 ಚದರ ಕಿ.ಮೀ (ಈಶಾನ್ಯ ಪ್ರದೇಶದಲ್ಲಿ ಶೇಕಡಾ 0.45) ವಿಸ್ತರಣೆಗೆ ಅರಣ್ಯ ವ್ಯಾಪ್ತಿಯು ಕಡಿಮೆಯಾಗಿದ್ದು, ಅದರ ಭೌಗೋಳಿಕ ಪ್ರದೇಶದ 1,70,541 ಚದರ ಕಿ.ಮೀ (ಶೇಕಡಾ 65.05) ಅರಣ್ಯ ಪ್ರದೇಶವನ್ನು ಹೊಂದಿದೆ.
"ಅಸ್ಸಾಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಈ ಪ್ರದೇಶದ ಎಲ್ಲಾ ರಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಇಳಿಕೆ ತೋರಿಸುತ್ತವೆ" ಎಂದು ವರದಿ ತಿಳಿಸಿದೆ.
ಹಿಂದಿನ ಮೌಲ್ಯಮಾಪನಕ್ಕೆ ಹೋಲಿಸಿದರೆ ದೇಶದಲ್ಲಿ ಉಷ್ಣ ವಲಯ ವ್ಯಾಪ್ತಿಯು 54 ಚದರ ಕಿ.ಮೀ (ಶೇಕಡಾ 1.10) ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಯುಎನ್ಐ ಎಎಚ್ 2222
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..