Sunday, Mar 29 2020 | Time 00:36 Hrs(IST)
National Share

ದೆಹಲಿ ಚುನಾವಣೆ: ಆರೋಪ-ಪ್ರತ್ಯಾರೋಪ, ದ್ವೇಷ ಭಾಷಣಗಳಿಗೆ ಸಾಕ್ಷಿಯಾಗಿದ್ದ ಬಹಿರಂಗ ಪ್ರಚಾರಕ್ಕೆ ತೆರೆ

ನವದೆಹಲಿ, ಫೆಬ್ರವರಿ 6 (ಯುಎನ್‌ಐ) ಇಡೀ ದೇಶದ ಗಮನ ಸೆಳೆದಿರುವ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯಗೊಂಡಿದೆ.
ಶಾಹೀನ್ ಬಾಗ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ, ವಿಶ್ವವಿದ್ಯಾಲಯಗಳಲ್ಲಿನ ಹಿಂಸಾಚಾರ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಂದ ಜನರಿಗೆ ಉಚಿತ ಕೊಡುಗೆಗಳು ಸೇರಿದಂತೆ ಆರೋಪ-ಪ್ರತ್ಯಾರೋಪ, ದ್ವೇಷದ ಭಾಷಣಕ್ಕೆ ಸಾಕ್ಷಿಯಾಗಿದ್ದ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಮತಬ್ಯಾಂಕ್‌ ಅನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ. ಉಚಿತ ನೀರು ಮತ್ತು ವಿದ್ಯುತ್ ಸರಬರಾಜು ಸೇರಿದಂತೆ ವಿವಿಧ ಭರವಸೆಗಳನ್ನು ಮುಂದಿಟ್ಟು ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ. ಶೀಲಾ ದೀಕ್ಷಿತ್ ಅವರ ಮೂಲಸೌಕರ್ಯ ಅಭಿವೃದ್ಧಿಯ ಯುಗವನ್ನು ಮರಳಿ ತರುವುದಾಗಿ ಕಾಂಗ್ರೆಸ್ ಪ್ರತಿಜ್ಞೆ ಮಾಡಿದರೆ, ಬಿಜೆಪಿ ಎಂದಿನಂತೆ ರಾಷ್ಟ್ರೀಯತೆ ಮತ್ತು ಕೇಂದ್ರ-ರಾಜ್ಯ ಸಂಬಂಧಗಳನ್ನು ಬಲವರ್ಧನೆಯ ಪ್ರಸ್ತಾಪ ಮುಂದಿಟ್ಟು ಜನರನ್ನು ಸೆಳೆಯಲು ಯತ್ನಿಸಿವೆ.

ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಕಳೆದ ತಿಂಗಳು ಗಣರಾಜ್ಯೋತ್ಸವದಂದು ಆರಂಭಗೊಂಡ ಚುನಾವಣಾ ಪ್ರಚಾರ ಶಾಂತಿಯುತವಾಗಿ ಮುಗಿಯಿತು. ಆದರೂ ಈ ಅವಧಿಯಲ್ಲಿ ಶಾಹೀನ್ ಬಾಗ್ ಮತ್ತು ಆಗ್ನೇಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಗುಂಡಿನ ದಾಳಿ ಘಟನೆಗಳು ನಡೆದಿದ್ದು, ಇದಕ್ಕೆ ದೆಹಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಮತದಾನದ ಸಂದರ್ಭ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಮೂರು ವಾರಗಳಿಂದ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಭಾಷಣಗಳಲ್ಲಿ ಆರೋಪ-ಪ್ರತ್ಯಾರೋಪ, ಭರವಸೆ, ಘೋಷಣೆಗಳೇ ಮೇಳೈಸಿದ್ದವು. ಪ್ರಚಾರದ ಕೊನೆಯ ದಿನದಂದು ಮತದಾರರನ್ನು ಸೆಳೆಯಲು ಪಕ್ಷಗಳು ಎಲ್ಲಾ ಪಕ್ಷಗಳು ಇನ್ನಿಲ್ಲದ ಪ್ರಯತ್ನ ನಡೆಸಿದವು.
ಆರಂಭದಲ್ಲಿ ಅಭಿವೃದ್ಧಿ ಮತ್ತು ಶಿಕ್ಷಣದ ಪ್ರಮುಖ ವಿಷಯಗಳ ಬಗ್ಗೆ ಪ್ರಾರಂಭವಾದ ಪ್ರಚಾರ, ನಂತರ ಶಾಹೀನ್ ಬಾಗ್ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ವರ್ಗಾವಣೆಗೊಂಡಿತು, ಬಿಜೆಪಿ ಪ್ರತಿಭಟನೆಯನ್ನು ವಿರೋಧಿಸಿದರೆ, ಕಾಂಗ್ರೆಸ್ ಮತ್ತು ಎಎಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು.
ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಎರಡು ಕಡೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡಿದ್ದರು. ಇದು ಪಕ್ಷಕ್ಕೆ ಒಂದಷ್ಟು ಮತಗಳನ್ನು ತಂದುಕೊಡಬಹುದು ಎಂದು ವ್ಯಾಖ್ಯಾನಿಸಲಾಗಿದೆ.
ಮತ್ತೋರ್ವ ಸ್ಟಾರ್ ಪ್ರಚಾರಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಧಾನಿಯ ಹಲವಾರು ಭಾಗಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಅವರು ಕನಿಷ್ಠ ಮೂರು ಡಜನ್ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಅರವಿಂದ ಕೇಜ್ರಿವಾಲ್ ಕೂಡ ಬಿರುಸಿನ ಪ್ರಚಾರ ನಡೆಸಿದ್ದಾರೆ.
2015 ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಬಿಜೆಪಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿತ್ತು. ಆದರೆ ಕಾಂಗ್ರೆಸ್‌ಗೆ ಒಂದು ಸ್ಥಾನ ಕೂಡ ಸಿಕ್ಕಿರಲಿಲ್ಲ.
ಪ್ರಚಾರದ ಕೊನೆಯ ದಿನವಾದ ಗುರುವಾರ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡರು ನಗರದಾದ್ಯಂತ ರೋಡ್ ಶೋ ಅಂತಿಮ ಕಸರತ್ತು ನಡೆಸಿದರು. ದಿಲ್ಷಾದ್ ಗಾರ್ಡನ್‌ನಲ್ಲಿ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ಮುಖಂಡ ದೀಪಂದರ್ ಹೂಡಾ ಮತ್ತು ಇತರರು ಪ್ರಚಾರ ನಡೆಸಿದರು.
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮನೆ ಮನೆಗೆ ತೆರಳಿ ಪ್ರಚರ ನಡೆಸಿದರು. ಎಎಪಿ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಲವಾರು ರೋಡ್ ಶೋಗಳನ್ನು ನಡೆಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪಶ್ಚಿಮ ದೆಹಲಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ಮೇಲೆ ಚುನಾವಣಾ ಆಯೋಗ ಕ್ರಮ ಕೈಗೊಂಡಿತ್ತು. ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಮೊಹಲ್ಲಾ ಕ್ಲಿನಿಕ್‌ ನಿರ್ಮಿಸುವ ಭರವಸೆ ನೀಡಿದ್ದಕ್ಕಾಗಿ ಆಯೋಗ ಕೇಜ್ರಿವಾಲ್‌ ಅವರಿಗೂ ಎಚ್ಚರಿಕೆ ನೀಡಿತ್ತು.
ಎಎಪಿ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ 66 ಸ್ಥಾನಗಳಲ್ಲಿ ಮತ್ತು ಬಿಜೆಪಿ 67 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಬಾರಿ ತನ್ನ ಮೈತ್ರಿ ಪಾಲುದಾರರಾದ ಜನತಾದಳ (ಸಂಯುಕ್ತ) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಗೆ ಮೂರು ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ.
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಪಂಜಾಬ್‌ನಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಕೇಸರಿ ಪಕ್ಷಕ್ಕೆ ಬೆಂಬಲ ಘೋಷಿಸಿದೆ.
ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ನಗರದಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನೂ ನಿಯೋಜಿಸಲಾಗಿದೆ. ವಿಶೇಷ ಮತದಾನ ಕರ್ತವ್ಯಕ್ಕಾಗಿ ವಿವಿಧ ಘಟಕಗಳ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ದೆಹಲಿಯಾದ್ಯಂತ 2,689 ಸ್ಥಳಗಳಲ್ಲಿ ಒಂದು ಸಹಾಯಕ ಬೂತ್ ಜೊತೆಗೆ 13,750 ಮತಗಟ್ಟೆಗಳನ್ನು ತೆರೆಯಲಾಗಿದೆ. ಎಲ್ಲಾ ಮತದಾನ ಕೇಂದ್ರಗಳನ್ನು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗುತ್ತದೆ.
ಶನಿವಾರ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 1.47 ಕೋಟಿ ಜನರು ರಾಷ್ಟ್ರ ರಾಜಧಾನಿಯಾದ್ಯಂತ ತಮ್ಮ ಮತದಾನದ ಹಕ್ಕು ಚಲಾಯಿಸುವ ಸಾಧ್ಯತೆಯಿದೆ. ವಿವಿಧ ವಿಭಾಗಗಳಲ್ಲಿ ಮತದಾರರು 81,05,236 ಪುರುಷರು, 66,80,277 ಮಹಿಳೆಯರು ಸೇರಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿರುವ ಮತದಾರರು (11,608), ತೃತೀಯ ಲಿಂಗಿ ಮತದಾರರು (869), ಮತ್ತು 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು (2,04,830) ಇದ್ದಾರೆ.
ಫೆಬ್ರವರಿ 8 ರಂದು ಒಂದೇ ಹಂತದಲ್ಲಿ ಎಲ್ಲಾ 70 ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಗಲಿದ್ದು, ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು, 210 ಮಂದಿ ರಾಷ್ಟ್ರೀಯ ಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಯುಎನ್ಐ ಎಎಚ್ 2131
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..