Wednesday, Sep 23 2020 | Time 01:59 Hrs(IST)
Entertainment Share

ನಾಲ್ಕು ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ : ಕಿಚ್ಚ ಸುದೀಪ್ ಕಾರ್ಯಕ್ಕೆ ಸಚಿವ ಸುಧಾಕರ್ ಶ್ಲಾಘನೆ

ಬೆಂಗಳೂರು, ಆಗಸ್ಟ್ 10 (ಯುಎನ್‌ಐ) ಸ್ಯಾಂಡಲ್ ವುಡ್ ನಟ ಸುದೀಪ್ ಮಾಡಿರುವ ಸಾಮಾಜಿಕ ಕಳಕಳಿಯ ಕಾರ್ಯವನ್ನು ವೈದ್ಯಕೀಯ ಆರೋಗ್ಯ ಶಿಕ್ಷಣ ಸಚಿವ ಡಾ. ಸುಧಾಕರ್ ಶ್ಲಾಘಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿರುವ ಸುದೀಪ್ ಅವರ ಕಿಚ್ಚ ಚಾರಿಟಬಲ್ ಟ್ರಸ್ಟ್, ನಾಲ್ಕು ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ದತ್ತು ತೆಗೆದುಕೊಂಡಿದೆ.
ಈ ಸಂಬಂಧ ಸಚಿವ ಡಾ.ಸುಧಾಕರ್ ಸೋಮವಾರ ಟ್ವೀಟ್ ಮಾಡಿದ್ದು, “ಕೋವಿಡ್ -19 ಸಂಕಷ್ಟದ ಪರಿಸ್ಥಿತಿಯಲ್ಲಿ ಶಿವಮೊಗ್ಗದಲ್ಲಿನ 4 ಶಾಲೆಗಳನ್ನು ನಟ ಸುದೀಪ್ ದತ್ತು ತೆಗೆದುಕೊಂಡಿರುವ ಸುದ್ದಿ ಶ್ಲಾಘನೀಯ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ” ಎಂದಿದ್ದಾರೆ.

ಇದಕ್ಕೆ ನಟ ಸುದೀಪ್ "ಧನ್ಯವಾದಗಳು, ಸರ್" ಎಂದು ಪ್ರತಿಕ್ರಿಯಿಸಿದ್ದಾರೆ.

ನಟ ಸುದೀಪ್ ಪ್ರಸ್ತುತ ಹೈದರಾಬಾದ್‌ನಲ್ಲಿದ್ದು, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಲವು ಸಮಾಜಮುಖಿ ಕಾರ್ಯ:-ಸುದೀಪ್ ಅವರು ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗಾಗಲೇ ಈ ಟ್ರಸ್ಟ್‌ ಮೂಲಕ ಅನೇಕ ಜನಪರ ಕೆಲಸಗಳು ನಡೆದಿವೆ. ಕೆಲ ದಿನಗಳ ಹಿಂದಷ್ಟೇ ತುಮಕೂರಿನ ವೃದ್ದರೊಬ್ಬರ ಮನೆಗೆ ವಿದ್ಯುತ್‌ ವ್ಯವಸ್ಥೆಯನ್ನು ಈ ಟ್ರಸ್ಟ್ ಮಾಡಿಕೊಟ್ಟಿತ್ತು. ಅದಕ್ಕೂ ಮೊದಲು ಚಿತ್ರದುರ್ಗ ಜಿಲ್ಲೆಯ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿತ್ತು.
ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್. ಹಳ್ಳಿ ಹಾಗೂ ಎಸ್. ಎನ್. ನಗರದ ನಾಲ್ಕು ಸರ್ಕಾರಿ ಶಾಲೆಗಳನ್ನು ಟ್ರಸ್ಟ್ ದತ್ತು ಪಡೆದುಕೊಂಡಿದೆ. ಶಾಲೆಗಾಗಿ ನಾವು-ನೀವು ಯೋಜನೆಯಡಿ ಈ ಎಲ್ಲ ಶಾಲೆಗಳನ್ನು ದತ್ತು ಪಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ಶುದ್ಧ ಕುಡಿಯುವ ನೀರಿನ ಘಟಕ, ಆಟದ ಸಾಮಗ್ರಿಗಳು, ಸ್ಮಾರ್ಟ್‌ ಕ್ಲಾಸ್ ವ್ಯವಸ್ಥೆ, ಇಂಟರ್‌ನೆಟ್‌ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್, ಸೋಲಾರ್, ಕೊಠಡಿಗಳ ರಿಪೇರಿ, ಶಿಕ್ಷಕರಿಗೆ ಲಾಕರ್ ವ್ಯವಸ್ಥೆ, ಸುಸಜ್ಜಿತ ಅಡುಗೆ ಕೋಣೆ ಮುಂತಾದ ಸೌಕರ್ಯಗಳನ್ನು ಒದಗಿಸಲು ಟ್ರಸ್ಟ್ ನಿರ್ಧರಿಸಿದೆ.
ಯುಎನ್‍ಐ ಎಸ್‍ಎ 1243