Monday, Jul 22 2019 | Time 07:04 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ಪಾಕಿಸ್ತಾನದಲ್ಲಿ ರೈಲು ದುರಂತ; 16 ಪ್ರಯಾಣಿಕರ ಸಾವು, 84 ಮಂದಿಗೆ ಗಾಯ

ಇಸ್ಲಾಮಾಬಾದ್, ಜು 11 (ಯುಎನ್ಐ) ಪ್ರಯಾಣಿಕ ರೈಲೊಂದು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿ, 84 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕರಾಚಿಯಲ್ಲಿ ನಡೆದಿದೆ.
ಲಾಹೋರ್‌ನಿಂದ ಕ್ವೆಟ್ಟಾಗೆ ಹೋಗುತ್ತಿದ್ದ ಅಕ್ಬರ್ ಎಕ್ಸ್‌ ಪ್ರೆಸ್‌ ರೈಲು ಪಂಜಾಬ್‌ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಈ ಅವಘಡ ಉಂಟಾಗಿದೆ.
ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದ್ದು, ಹಳಿಯನ್ನು ಸಂಚಾರಕ್ಕೆ ಸುಗಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಹೀಮ್ ಯಾರ್ ಖಾನ್‌ನ ಜಿಲ್ಲಾಧಿಕಾರಿ ಜಮೀಲ್ ಅಹ್ಮದ್ ಜಮೀಲ್ ತಿಳಿಸಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಹಳಿಯ ಸಿಗ್ನಲ್ ಬದಲಾಯಿಸಿದಾಗ ಪ್ರಯಾಣಿಕ ರೈಲು ಮತ್ತೊಂದು ಹಳಿಗೆ ಬಂದು ಅಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ರಹೀಮ್ ಯಾರ್ ಖಾನ್‌ನ ಡಿಪಿಒ ಉಮರ್ ಫಾರೂಕ್ ಸಲಾಮತ್ ತಿಳಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಪ್ರಧಾನಮಂತ್ರಿ ಇಮ್ರಾನ್ ಖಾನ್ ತೀವ್ರ ಸಂತಾಪ ಸೂಚಿಸಿದ್ದಾರೆ.
ರೈಲ್ವೆ ಮೂಲಸೌಕರ್ಯಗಳ ಬಗ್ಗೆ ದಶಕಗಳ ಕಾಲದ ನಿರ್ಲಕ್ಷ್ಯವನ್ನು ತೊಡೆದುಹಾಕಿ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈಲ್ವೆ ಸಚಿವರಿಗೆ ಸೂಚಿಸಿರುವುದಾಗಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಸಿಬ್ಬಂದಿಯ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೂಚಿಸಲಾಗಿದೆ ಎಂದು ರೈಲ್ವೆ ಖಾತೆ ಸಚಿವ ಶೇಖ್ ರಶೀದ್ ಅಹ್ಮದ್ ತಿಳಿಸಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬದವರಿಗೆ ತಲಾ 15 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 5 ಲಕ್ಷ ರೂ.ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ.
ರಶೀದ್ ಅವರನ್ನೇ ರೈಲು ದುರಂತದ ಸಂಪೂರ್ಣ ಹೊಣೆಗಾರರನ್ನಾಗಿ ಮಾಡಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಈ ಬಗ್ಗೆ ಸಚಿವರ ವಿರುದ್ಧ ತನಿಖೆಗೆ ಆದೇಶಿಸಿದೆ.
ದುರ್ಬಲ ರೈಲ್ವೆ ಹಳಿಗಳು ಮತ್ತು ಅಸಮರ್ಪಕ ಯೋಜನೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ವಿರೋಧ ಪಕ್ಷದ ನಾಯಕ ಶಹಬಾಜ್ ಶರೀಫ್ ಆರೋಪಿಸಿದ್ದಾರೆ.
ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ತಿಂಗಳು ಜಿನ್ನಾ ಎಕ್ಸ್‌ ಪ್ರೆಸ್ ರೈಲು, ಹೈದರಾಬಾದ್ ಬಳಿಕ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಆಗಲೂ ರಶೀದ್ ಅವರು ದುರಂತದ ಹೊಣೆ ವಹಿಸಿಕೊಂಡು ದೇಶದ ಕ್ಷಮೆಯಾಚಿಸಿದ್ದರು.
ಯುಎನ್ಐ ಎಎಚ್‌ 1715