Monday, Jun 1 2020 | Time 02:52 Hrs(IST)
Special Share

ಮಹಾರಾಷ್ಟ್ರ ಸರ್ಕಾರ ಸುಭದ್ರ: ಪವಾರ್ ಸ್ಪಷ್ಟಣೆ

ಮುಂಬೈ, ಮಾ 11 (ಯುಎನ್ಐ ) ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಅಂಚಿನಲ್ಲಿರುವಾಗಲೇ ಮುಂದೆ ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ ಎಂಬ ವದಂತಿ ಹಬ್ಬಿದೆ.!!
ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗೂ ಮಹಾರಾಷ್ಟ್ರಕ್ಕೂ ಯಾವ ಸಂಬಂಧವೂ ಇಲ್ಲ. ಮಹಾರಾಷ್ಟ್ರ ಸರ್ಕಾರ ಸುಭದ್ರವಾಗಿದೆ ಎಂದು ಮಿತ್ರಪಕ್ಷ ಗಳಾದ ಎನ್ ಸಿಪಿ , ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮಿತ್ರ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ ಎನ್ನಲಾಗಿದೆ.
ಈ ಮಧ್ಯೆ ಹಿರಿಯ ಮುಖಂಡ ಶರದ್ ಪವಾರ್ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಅನೇಕ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಈ ತಿಂಗಳ 26ರಂದು ರಾಜ್ಯಸಭೆಗೆ ಮಹಾರಾಷ್ಟ್ರದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಸಂಬಂಧ ಪಕ್ಷದ ಶಾಸಕರ ಜತೆ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ನಾವು ಎರಡು ರಾಜ್ಯಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದ್ದೇವೆ. ಪವಾರ್ ಹಾಗೂ ಫೌಝಿಯಾ ಖಾನ್ ಪಕ್ಷದ ಅಭ್ಯರ್ಥಿಗಳಾಗಿರುತ್ತಾರೆ. ಬುಧವಾರ ಇಬ್ಬರೂ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಪವಾರ್, ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೂ ಹಿರಿಯ ಎನ್ಸಿಪಿ ಮುಖಂಡರೊಬ್ಬರು ಹೇಳಿದ್ದಾರೆ.
ಯುಎನ್‌ಐ ಕೆಎಸ್ಆರ್ 1156