Friday, Feb 28 2020 | Time 09:10 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಮೂಲಸೌಕರ್ಯ ಕ್ಷೇತ್ರದಲ್ಲಿ 102 ಲಕ್ಷ ಕೋಟಿ ರೂ ಮೊತ್ತದ ಯೋಜನೆಗಳಿಗೆ ನಿರ್ಮಲಾ ಸೀತಾರಾಮನ್ ಚಾಲನೆ

ನವದೆಹಲಿ, ಡಿ 31(ಯುಎನ್ಐ) ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ 102 ಲಕ್ಷ ಕೋಟಿ ರೂ ಮೊತ್ತದ ಯೋಜನೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚಾಲನೆ ನೀಡಿದ್ದಾರೆ.

2019-25 ರ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಕುರಿತ ಕಾರ್ಯಪಡೆಯ ವರದಿ ಬಿಡುಗಡೆ ಮಾಡಿದ ಅವರು, ಮೂಲಸೌಕರ್ಯ ಕ್ಷೇತ್ರದಲ್ಲಿ 100 ಲಕ್ಷ ಕೋಟಿ ರೂ. ತೊಡಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಪುನರುಚ್ಚರಿಸಿದರು. ಅದರಂತೆ ಕ್ರಿಯಾಸಮಿತಿಯು ಕೇವಲ ನಾಲ್ಕು ತಿಂಗಳೊಳಗೆ 70 ಸಂಸ್ಥೆಗಳೊಂದಿಗೆ ಸಮಾಲೋಚಿಸಿ 102 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 3 ಲಕ್ಷ ಕೋಟಿ ಮೊತ್ತದ ಯೋಜನೆ ಸೇರಿಸಲಾಗುವುದು ಎಂದರು.


ಕಳೆದ 6 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 51 ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದು ಹೆಚ್ಚುವರಿಯಾಗಿ 102 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಹೊಸ ಪೈಪ್‌ಲೈನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತಲಾ ಶೇ.39 ರಷ್ಟು ಮತ್ತು ಉಳಿದ ಶೇ.22 ರಷ್ಟು ಖಾಸಗಿ ಕ್ಷೇತ್ರಕ್ಕೆ ನೀಡಲಾಗುವುದು ಎಂದು ಸಚಿವರು ಹೇಳಿದರು.


ವಿದ್ಯುತ್, ರೈಲ್ವೇ, ನಗರ ನೀರಾವರಿ, ಸಂಚಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ. ಇಂಧನ ಕ್ಷೇತ್ರದಲ್ಲಿ 25 ಲಕ್ಷ ಕೋಟಿ ರೂ. ಮೊತ್ತದ ಯೋಜನೆ, 20 ಲಕ್ಷ ಕೋಟಿ ಮೊತ್ತದ ರಸ್ತೆ ಯೋಜನೆ, 14 ಲಕ್ಷ ಕೋಟಿ ಮೊತ್ತದ ರೈಲ್ವೇ ಯೋಜನೆ ಜಾರಿಯಾಗಲು ಸಿದ್ಧವಾಗಿದೆ.

ಇನ್ನು ಕೆಲವೇ ವಾರಗಳಲ್ಲಿ ಮತ್ತೆ 3 ಲಕ್ಷ ಕೋಟಿ ರೂಪಾಯಿಯ ಯೋಜನೆಯೊಂದು ಇದಕ್ಕೆ ಸೇರಲಿದೆ. 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ವ್ಯಾಪಿಸಿರುವ ಈ ಯೋಜನೆಗಳು 21 ಸಚಿವಾಲಯಕ್ಕೆ ಸಂಬಂಧಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.ಭಾರತವನ್ನು 2025ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿಸುವ ಆಶಯಕ್ಕೆ ಈ ಮೂಲಸೌಕರ್ಯ ಯೋಜನೆ ಪೂರಕವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಕಳೆದ 6 ವರ್ಷಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗಾಗಿಯೇ 50 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಿದೆ ಎಂದು ಅವರು ವಿವರಿಸಿದ್ದಾರೆ.

2020ನೇ ವರ್ಷದ ಜೂನ್ ಬಳಿಕ ಜಾಗತಿಕ ಹೂಡಿಕೆದಾರರ ಸಮಾವೇಶ ಏರ್ಪಡಿಸುವುದಾಗಿಯೂ , ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.


ಯುಎನ್ಐ ಜಿಎಸ್ಆರ್ 2244