Wednesday, May 27 2020 | Time 03:12 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Flash Share

ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ
ಯೋಗ-ಜ್ಞಾನಿಗಳು ಕಂಡಂತೆ

-ಎಸ್‍ ಆಶಾ (ಅಂಕಿತಾ ಕಶ್ಯಪ್)(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಯು 11.06.2019 ರಿಂದ 21.10.19 ರವರೆಗೆ ಯೋಗ ಸಾಧಕರು, ಯೋಗಿಗಳು ಹಾಗೂ ಯೋಗದ ಮಹತ್ವದ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ)ಬೆಂಗಳೂರು, ಜೂನ್ 12 (ಯುಎನ್ಐ) ಇಂದಿನ ದಿನಮಾನದಲ್ಲಿ ಕುಳಿತು ಕೆಲಸ ಮಾಡುವವರು, ಯಂತ್ರಗಳ ಸಹಾಯದಿಂದ ಕಾರ್ಯನಿರ್ವಹಿಸುವವರ ಸಂಖ್ಯೆಯೇ ಅಧಿಕವಾಗಿರುವ ಕಾರಣ ವ್ಯಾಯಾಮದ ಅಗತ್ಯವಿದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಸಾರದ ಜಂಜಾಟಗಳು ಇರುವ ಕಾರಣ ಕೇವಲ ದೈಹಿಕ ಕಸರತ್ತು ಮಾತ್ರವಲ್ಲದೆ, ಮಾನಸಿಕ ಶಾಂತಿಯೂ ಬೇಕಿರುವ ಕಾರಣ, ಜಿಮ್ ಮೊದಲಾದ ವ್ಯಾಯಾಮಕ್ಕಿಂತ ಯೋಗ ಹೆಚ್ಚು ಉಪಯೋಗವೆನಿಸುತ್ತದೆ.ಯೋಗಾಸನಗಳನ್ನು ಉಸಿರಿನ ಮೇಲೆ ಗಮನವಿರಿಸಿ ಮಾಡುವ ಕಾರಣ ವ್ಯಾಯಾಮದ ಜೊತೆಗೆ ಒತ್ತಡ, ಚಿತ್ತಚಾಂಚಲ್ಯ ನಿವಾರಣೆಯಾಗಿ, ಏಕಾಗ್ರತೆ ಹೆಚ್ಚುತ್ತದೆ, ದೇಹ ಹಗುರಾಗುತ್ತದೆ.“ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಕೈಗೂಡಬೇಕಿದ್ದಲ್ಲಿ ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿ. ಜಾಗೃತವಾಗಬೇಕು. ನಿಮ್ಮ ಭಾವನೆಗಳನ್ನು ಉಪಯೋಗಿಸಿ, ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಅದನ್ನು ಭಕ್ತಿ ಯೋಗವೆಂದು ಕರೆಯುತ್ತೇವೆ, ಇದು ಭಕ್ತಿಯ ಮಾರ್ಗವಾಗಿದೆ. ನಿಮ್ಮ ಬುದ್ಧಿ ಶಕ್ತಿಯನ್ನು ಬಳಸಿ ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಅದನ್ನು ಜ್ಞಾನ ಯೋಗವೆಂದು ಕರೆಯುತ್ತೇವೆ. ಇದು ಜ್ಞಾನದ ಮಾರ್ಗವಾಗಿದೆ. ನಿಮ್ಮ ಪರಮ ಸತ್ಯವನ್ನು ತಲುಪಲು ನಿಮ್ಮ ದೇಹ ಅಥವಾ ಭೌತಿಕ ಕ್ರಿಯೆಯನ್ನು ಉಪಯೋಗಿಸಿದರೆ, ಅದನ್ನು ಕರ್ಮ ಯೋಗವೆಂದು ಕರೆಯುತ್ತೇವೆ. ಇದು ಕರ್ಮದ ಮಾರ್ಗ. ನಿಮ್ಮ ಶಕ್ತಿಯನ್ನು ರೂಪಾಂತರಗೊಳಿಸಿ ನಿಮ್ಮ ಪರಮ ಸತ್ಯವನ್ನು ತಲುಪಲು ಪ್ರಯತ್ನಿಸಿದರೆ, ಇದನ್ನು ಕ್ರಿಯಾ ಯೋಗವೆಂದು ಕರೆಯುತ್ತೇವೆ, ಇದರರ್ಥ, ಆಂತರಿಕ ಕ್ರಿಯೆಯ ಮಾರ್ಗವೆಂದು. ಈ ನಾಲ್ಕರಿಂದ ಮಾತ್ರವೇ ನೀವು ಎಲ್ಲಿಯಾದರೂ ಹೋಗಲು ಸಾಧ್ಯ” ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್.ದೇಹ, ಮನಸ್ಸು, ಭಾವನೆ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಇವನ್ನು ಒಗ್ಗೂಡಿಸುವುದೇ ಯೋಗ. ಉದಾಹರಣೆಗೆ, ನಾಳೆಯಿಂದ ಪ್ರತಿದಿನ ಎದ್ದು ಯೋಗ ಮಾಡುತ್ತೇನೆ ಎಂದು ಸಂಕಲ್ಪಿಸುತ್ತೇವೆ. ಆದರೆ ದೇಹ ಕೇಳುವುದಿಲ್ಲ. ಹೀಗಾಗಿ ಅಲಾರಾಂ ಹೊಡೆದುಕೊಳ್ಳುತ್ತಿದ್ದರೂ ಮುಸುಕೆಳೆದು ಮಲಗುತ್ತೇವೆ. ಆದರೆ ಇಚ್ಛೆ ಬಲವಾದಾಗ, ಯೋಗದಿಂದ ಸುಯೋಗವಿದೆ ಎಂಬ ಭಾವನೆಯಿದ್ದಾಗ ಮಾತ್ರ ಸಂಕಲ್ಪ ನೆರವೇರುತ್ತದೆ.ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಮತ್ತು ಕ್ರಿಯಾಯೋಗದಲ್ಲಿ ಯಾವುದೇ ಒಂದು ಮಾರ್ಗವನ್ನು ಆಯ್ದುಕೊಂಡರೂ, ಉಳಿದ ಮೂರೂ ದೊರಕಿಬಿಡುತ್ತವೆ. “ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿಗೆ ಓರ್ವ ಮಹಿಳೆ ಬಂದು, ತಮಗೆ ದೇವರ ದರ್ಶನ ಮಾಡಿಸುವಂತೆ ಕೋರುತ್ತಾರೆ. ಆಗ “ನಿನ್ನ ಮೊಮ್ಮಗಳಲ್ಲೇ ನಿನ್ನಿಷ್ಟ ದೈವವನ್ನು ಕಾಣು” ಎಂದು ಪರಮಹಂಸರು ಸೂಚಿಸುತ್ತಾರೆ. ಅಂದಿನಿಂದ ಆಕೆ ಮೊಮ್ಮಗಳಿಗೆ ದೇವಿಯಂತೆ, ಕೃಷ್ಣನಂತೆ ಅಲಂಕರಿಸಿ,ಹಾಡುತ್ತ, ನರ್ತಿಸುತ್ತ ಭಕ್ತಿಯೋಗದ ಮೂಲಕ ತನ್ನೆಲ್ಲ ನೋವುಗಳನ್ನು ಮರೆತು ಸೌಖ್ಯ, ಮನಃಶಾಂತಿ ಪಡೆದುಕೊಳ್ಳುತ್ತಾರಂತೆ. ಎಲ್ಲವೂ ನಮ್ಮಲ್ಲೇ ಇದ್ದರೂ ಅರಿವಿಗೆ ಬಾರದೆ ಪರದಾಡುತ್ತಿರುತ್ತೇವೆ ಎಂಬುದಕ್ಕೆ ಇದು ಪುಟ್ಟ ಉದಾಹರಣೆ.ಯೋಗವು ದೇಹವನ್ನು ಸಮತೂಕದಲ್ಲಿಟ್ಟು ದೃಢ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ. ನಾವು ಮಾಡುವ ಬಹುತೇಕ ಆಸನಗಳ ಹೆಸರು ಪ್ರಕೃತಿಗೆ ಹತ್ತಿರವಾಗಿದೆ. ಅಂದರೆ ಜ್ಞಾನಿಗಳು ಪ್ರಕೃತಿಯಲ್ಲಿನ ಪ್ರಾಣಿ, ಪಕ್ಷಿ, ಮರಗಿಡಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅಧ್ಯಯನ ಮಾಡಿ ಆಸನಗಳನ್ನು ರೂಪಿಸಿದ್ದಾರೆ. ಅಥವಾ ಯೋಗಾಸನದ ವಿವಿಧ ಭಂಗಿಗಳು ನಿರ್ದಿಷ್ಟ ಪ್ರಾಣಿ, ಪಕ್ಷಿಗಳನ್ನು ಹೋಲುವ ಕಾರಣ ಅವುಗಳ ಹೆಸರು ಇಟ್ಟಿದ್ದಾರೆ ಎನ್ನಬಹುದು.ಭಾರತದಲ್ಲಿ ಹಿಂದೆ ಔಷಧಿ ನೀಡಲು ಶುಲ್ಕ ನೀಡಬೇಕಾದ ಪ್ರಮೇಯವಿರಲಿಲ್ಲ. ಯೋಗ, ಮುದ್ರೆ, ಪ್ರಾಣಾಯಾಮ, ಆಯುರ್ವೇದ ಮೊದಲಾದ ನಮ್ಮ ಕೈಯಲ್ಲೇ ಇರುವ ಚಿಕಿತ್ಸೆ ಹಾಗೂ ನಮ್ಮ ಸುತ್ತಮುತ್ತ ಸಿಗುವ ಬೆಲೆಕಟ್ಟಲಾಗದ ಪ್ರಾಕೃತಿಕ ಸಂಪತ್ತು ನಮ್ಮದಾಗಿತ್ತು. ಪಾಶ್ಚಿಮಾತ್ಯರ ಪ್ರಭಾವ ಹೆಚ್ಚಾದಂತೆ ಆಹಾರ,ವಿದ್ಯೆ, ಶಿಕ್ಷಣ, ಔಷಧಿಗಳು ಮಾರಾಟವಾಗಲಾರಂಭಿಸಿದವು. ಅದೀಗ ಬೃಹತ್ ಉದ್ದಿಮೆ ಸ್ವರೂಪ ಪಡೆದುಕೊಂಡಿದೆ.ಅಲೋಪತಿ ಮದ್ದಿನಲ್ಲಿ ಅಡ್ಡಪರಿಣಾಮ ಹೆಚ್ಚಾದ ಕಾರಣ, ತುರ್ತುಚಿಕಿತ್ಸೆ ಹೊರತುಪಡಿಸಿ, ಉಳಿದಂತೆ ಯೋಗ ಮೊದಲಾದ ಭಾರತೀಯ ವೈದ್ಯಪದ್ಧತಿಗೆ ಶರಣು ಹೋಗುವಂತಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ನಮ್ಮ ದೇಹದ ಬಗ್ಗೆ ನಮಗಿಂತ ಚೆನ್ನಾಗಿ ಮತ್ತೊಬ್ಬರು ಅರಿತಿರಲು ಸಾಧ್ಯವಿಲ್ಲ. ಹೀಗಾಗಿ ಯೋಗಾಸನಗಳಲ್ಲೂ ನಮ್ಮ ದೇಹಕ್ಕೆ ಹೊಂದುವಂತಹ ಆಸನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಯೋಗದಲ್ಲಿ ಬರುವ ಉಸಿರಾಟ ಮತ್ತಿತರ ಸಮತೋಲನ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ . ಇದು ನಮಗೆ ನಾವು ದಿನನಿತ್ಯದ ಜಂಜಾಟದಲ್ಲಿ ಕಷ್ಟವಾಗುವ ನಮ್ಮ ಮೆದುಳಿನ ಎರಡು ಕಡೆಯ ಆಂತರಿಕ ಸಂವಹನವನ್ನು ಉಪಯೋಗಿಸುವಲ್ಲಿ ಸಹಾಯ ಮಾಡುತ್ತದೆ. ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಲಿದೆ.

ಯುಎನ್ಐ ಎಸ್ಎ ವಿಎನ್ 1536