Sunday, Sep 27 2020 | Time 00:20 Hrs(IST)
Health -Lifestyle Share

ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ

ವರದಿ:ಸಂಧ್ಯಾ ಉರಣಕರ್

ಬೆಂಗಳೂರು, ನ 21 (ಯುಎನ್ಐ) ಈಗಿರುವುದು ಹೈಫೈ ವೈಫೈ ಕಾಲ. ಅಧುನಿಕತೆಯ ಆಡಂಬರ, ಕಣ್ಣುಹಾಯಿಸಿದಷ್ಟು ತಂತ್ರಜ್ಞಾನ. ಸಂಚರಿಸಲು ಕಾರು, ಬಸ್ಸು, ಬೈಕು. ಆದರೆ ರಾಜ್ಯದ ಅದೆಷ್ಟೋ ಕುಗ್ರಾಮಗಳಲ್ಲಿ ನಡೆಯಲು ರಸ್ತೆಯೇ ಇಲ್ಲದಿರುವುದು ಕೂಡ ವಾಸ್ತವ. ಹೌದು, ಚಾಮರಾಜನಗರ ಜಿಲ್ಲೆಯ ಅದೆಷ್ಟೋ ಗ್ರಾಮಗಳಲ್ಲಿ ಮಕ್ಕಳು, ವಯೋವೃದ್ಧರು ನಡೆದಾಡುವುದಿರಲಿ, ಗಟ್ಟಿಮುಟ್ಟಾದ ಹದಿಹರೆಯದ ಯುವಕ-ಯುವತಿಯರೇ ನಡೆದಾಡಲು ಸಂಕಷ್ಟಪಡುವಂತಹ ದುಃಸ್ಥಿತಿ ಇದೆ.

ಇದಕ್ಕಿಂತಲೂ ಕಡಿದಾದ ಬದುಕೊಂದು ಈ ಜಿಲ್ಲೆಯಲ್ಲಿದೆ. ಮಲೆಮಹದೇಶ್ವರನ ದರ್ಶನಕ್ಕಾಗಿ ಬೆಟ್ಟದ ಮೂಲಕ ಸಾವಿರಾರು ಮಂದಿ ಪ್ರತಿದಿನ ಇತ್ತ ಸಾಗುತ್ತಾರೆ. ಆದರೆ ಮಲೆಮಹದೇಶ್ವರನನ್ನೇ ನಂಬಿ ಬದುಕುತ್ತಿರುವ ತೊಳಸಿಗೆರೆದತ್ತ ಹೆಜ್ಜೆ ಹಾಕುವವರು ಇಲ್ಲ. ಕಾರಣ ಇಲ್ಲಿಯ ಕಡಿದಾದ ದುರ್ಗಮ ಹಾದಿ. ಮಲೆಮಹದೇಶ್ವರನಬೆಟ್ಟದಿಂದ ತೊಳಸಿಗೆರೆಗೆ 5 ಕಿಮೀ ಅಂತರ. ಕಲ್ಲು ಮುಳ್ಳುಗಳ ದುರ್ಗಮ ಹಾದಿಯಲ್ಲಿ ಇಲ್ಲಿಗೆ ತಲುಪಲು ಜೀವಗಟ್ಟಿಯಾಗಿರಬೇಕು. ತೊಳಸಿಗೆರೆಗೆ ಹೋಗುವುದೆಂದರೆ, ಅದೊಂದು ಸಾಹಸ. ಜೀವ ಕೈಯಲ್ಲಿ ಹಿಡಿದು ನಡೆಯಬೇಕು.

ಮಲೆಮಹದೇಶ್ವರ ಮೀಸಲು ಕ್ಷೇತ್ರಕ್ಕೆ ಸೇರಿದ ತುಳಸಿಕೇರಿ ಗ್ರಾಮ. ಬೇಡಗಂಪಣ್ಣ (ಬುಡಕಟ್ಟುಜನಾಂಗ) ಸಮುದಾಯಕ್ಕೆ ಸೇರಿದ ಸುಮಾರು 160 ಮನೆಗಳಿದ್ದು, ತನ್ನದೇ ಆದ ಬದುಕುಕಟ್ಟಿಕೊಳ್ಳಲು ಪ್ರಯತ್ನಿಸುತ್ತಿವೆ. ಮಲೆ ಮಹದೇಶ್ವರನ ಆರಾಧಕರಾಗಿರುವ ಇವರು ಲಿಂಗದೀಕ್ಷೆ ಪಡೆದಿದ್ದಾರೆ. ತುಳಸಿಗಿಡಗಳೇ ಸುತ್ತಲೂ ಇದ್ದ ಕಾರಣ ಇದನ್ನು ತುಳಸಿಕೆರೆ ಎಂದು ಕರೆಯಲಾಗುತ್ತಿತ್ತು, ಆಡುಮಾತಿನಲ್ಲಿ ಅದು ತೊಳಸಿಗೆರೆ ಆಗಿ ಹೋಗಿದೆ. ಮೂರುವರ್ಷಕ್ಕೊಮ್ಮೆ ಒಂದು ಮನೆಗೆ ಮಲೆಮಹಾದೇಶ್ವರನ ಪೂಜೆ ಮಾಡಲು ಅವಕಾಶ ಸಿಗುತ್ತದೆ. ಮನೆ ಸುತ್ತಮುತ್ತಲ ಅಲ್ಪಸ್ವಲ್ಪ ಭೂಮಿಯಲ್ಲಿಯೇ ತೊಳಸಿಗೆರೆ ಮತ್ತು ಇಂಡಿಗನಾಥ, ಸುತ್ತಲಗ್ರಾಮಗಳಿಗೆ ಆಸರೆ. ತಮ್ಮ ಹೊಟ್ಟೆಪಾಡಿಗಾಗಿ ರಾಗಿ, ನವಣೆಯಂತಹ ಫಸಲು ಬೆಳೆದುಕೊಳ್ಳುತ್ತವೆ. ಕೂಲಿಗಾಗಿ ಇಲ್ಲಿನ‌ ಬಹುತೇಕರು ಹೋಗುವುದು ಪಕ್ಕದ ತಮಿಳು‌ನಾಡಿಗೆ. ಕಾಲುದಾರಿಯೂ ಇಲ್ಲ.ರಸ್ತೆಯೇ ಇಲ್ಲದ ಈ ಮಾರ್ಗ ಅದೆಷ್ಟೋ ಜನರ ಪಾಲಿಗೆ ಯಮಯಾತನೆ ಎನ್ನುತ್ತಾರೆ ಇಲ್ಲಿನ‌ 70 ವರ್ಷದ ಮಾದಮ್ಮ.

ಜೀವಝಲ್ಲೆನ್ನುವ ಹಾದಿಯಲ್ಲೇ ಹೆರಿಗೆ: ರೋಗಿಗಳನ್ನು, ಬಸರಿ ಬಾಣಂತಿಯರನ್ನು ಆಸ್ಪತ್ರೆಗಾಗಿ ಕರೆದೊಯ್ಯಲು ಇವರು ಬಳಸುವುದು ಜೋಲಿ. ಹತ್ತು ಜನರ ತಂಡ ಮೂರುಮೂರು ಜನರಂತೆ ಬಿದಿರಿನ ಕೋಲಿಗೆ ಜೋಲಿಗೆ ಕಟ್ಟಿ ಅದರೊಳಗೆ ಬಸುರಿ, ರೋಗಿಗಳನ್ನು ಕೂರಿಸಿಕೊಂಡು ಸಾಗುತ್ತಾರೆ. ದಾರಿಮಧ್ಯೆದಲ್ಲಿಯೇ ಸತ್ತವರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ಊರಲ್ಲಿ ಸೂಲಗಿಯರು ಅಂತ ಇಲ್ಲದಿದ್ದರೂ ಕೆಲ ಹಿರಿಯ ಹೆಂಗಸರೇ ತಮಗೆ ತೋಚಿದಂತೆ‌ ಹೆರಿಗೆ ಮಾಡಿಸಿದ ಉದಾಹರಣೆಯೂ ಇದೆ. ಹೆರಿಗೆಗೆ ದಾರಿಯಲ್ಲಿ ಸಾಗುವುದು ಎಂದರೆ ಮಗುವಿನೊಂದಿಗೆ ತಾಯಿಯೂ ಮರುಜನ್ಮ‌ಪಡೆದಂತೆ.

ದಾರಿ ಮಧ್ಯೆ ಆನೆ ಕಾಡುಪ್ರಾಣಿ‌ಕಾಟ. ಎಷ್ಟೋ ಜನರು ದಾರಿಮಧ್ಯೆ ಸತ್ತು ಹೋಗಿದ್ದಾರೆ. ಎಂದು ಕಣ್ಣೀರಿಡುತ್ತಾರೆ ಚಿನ್ನಪ್ಪ.ಇಲ್ಲಿ ಮನೆಯಲ್ಲಿ ಹುಟ್ಟುವ ಮೊದಲ ಮಕ್ಕಳಿಗೆ ಮಾದಪ್ಪ, ಮಾದಮ್ಮ ಅಂತ ಹೆಸರಿಡುವುದು ವಾಡಿಕೆ.

ಮಕ್ಕಳಿಗೆ ಬೆಳಕಾದ ಸೆಲ್ಕೋ: ರಸ್ತೆಯೇ ಇಲ್ಲದ ಗ್ರಾಮದಲ್ಲಿ ಹಿಂದೆ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಗೆಂದು ಬಂದಿದ್ದ ಪೊಲೀಸ್ ಅಧಿಕಾರಿಯ ಕೃಪೆಯಿಂದ ಗ್ರಾಮಕ್ಕೆ ಪ್ರಾಥಮಿಕ ಶಾಲೆಯೇನೋ ಬಂತು. ಆದರೆ ವಿದ್ಯುತ್ ಸೌಲಭ್ಯವೇ ಇಲ್ಲದ ಶಾಲೆಯಲ್ಲಿ ಮಕ್ಕಳು ಓದುವುದಾದರೂ ಹೇಗೆ? ಎಂಬ ಚಿಂತೆ ಕಾಡಿತು. ಇಂತಹ ಶಾಲೆಗೆ ಬೆಳಕು ನೀಡಿದ್ದು ಸೆಲ್ಕೋ ಸೋಲಾರ್ ಕಂಪೆನಿ. ಶಾಲೆಗೆ ಹಾಗೂ ಮಕ್ಕಳಿಗೆ ಚಾರ್ಜೇಬಲ್ ಸೋಲಾರ್ ಬ್ಯಾಟರಿ ನೀಡಿ ಮಕ್ಕಳ ಶಿಕ್ಷಣಕ್ಕೆ ಬೆಳಕಾಯಿತು.

ಈ ಗ್ರಾಮದಲ್ಲಿ ಪ್ರೌಢಶಿಕ್ಷಣ‌ ಪಡೆಯಲು ಮಲೆಮಹಾದೇಶ್ವರನಬೆಟ್ಟಕ್ಕೆ ಹೋಗಲೇಬೇಕು. ಅಲ್ಲಿಗೆ

ಹೋಗಲು ರಸ್ತೆಯೂ ಇಲ್ಲ. ಸೌಲಭ್ಯವೂ ಇಲ್ಲ. ಹೀಗಾಗಿ ಶಾಲೆಬಿಡುವ ಮಕ್ಕಳ ಸಂಖ್ಯೆಯೇ ಹೆಚ್ಚು. ಶಾಲೆ ಶಿಕ್ಷಕರು, ವಿದ್ಯುತ್, ಮೂಲಭೂತ ಸೌಲಭ್ಯಗಳೇ ಇಲ್ಲ. ಇದೇಸ್ಥಿತಿಯಲ್ಲಿ ಮಲೆಮಹಾದೇಶ್ವರ ಬೆಟ್ಟದ ಸುತ್ತಮುತ್ತ ಮೂವತ್ತು ಹಿದ್ಳ್ಳಿಗಳಿವೆ. ಹೆಚ್ಚಿನ ಶಿಕ್ಷಣ ಎಂದರೆ ಪಿಯುಸಿ. ಇಲ್ಲಿ ಬದುಕಿಗೂ ದಾರಿ ಇಲ್ಲ .ಓಡಾಡಲು ರಸ್ತೆಯೇ ಇಲ್ಲದ ಕಾರಣ ಜೀವಝಲ್ಲೆನಿಸುವ ಕಲ್ಲಿನ ದಾರಿಯಲ್ಲಿ ಬರಲು ಯಾರೂ ಮನಸು ಮಾಡುವುದಿಲ್ಲ‌. ಮಕ್ಕಳು ಶಾಲೆ ಬಿಡಲು ಇದು ಕಾರಣ. ಆದರೂ ಶಾಲೆಯಲ್ಲಿ ಸೆಲ್ಕೋ ಸೋಲಾರ್ ಬೆಳಕು ನೀಡಿ ಮಕ್ಕಳಿಗೆ ಆಸರೆಯಾಗಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕ ಶಂಕರ್.

ದನಗೆ ಹುಲ್ಲಿಲ್ಲದೇ ಬೇರೆ ಕಡೆ ಸಾಲಮಾಡಿ ತಮಿಳುನಾಡಿನಿಂದ ತಂದಿದ್ದೇವೆ. ತಮಿಳುನಾಡಿನಿಂದ ಸಿಕ್ಕ ಅನುಕೂಲವಷ್ಟೂ ಕರ್ನಾಟಕ ಸರ್ಕಾರದಿಂದ ಸಿಕ್ಕಿಲ್ಲ ಎನ್ನುತ್ತಾರೆ ಇಲ್ಲಿನ‌ ಬಹುತೇಕರು. ಇಂಡಿಗನಾಥದಲ್ಲಿ ಮತಗಟ್ಟೆ ಇದೆ. ನಾಲ್ಕು ವರ್ಷದ ಹಿಂದೆ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಆದರೆ ಸಾವಿರ ರೂ. ದುಡ್ಡುಕೊಟ್ಟು ಇಬ್ಬರಿಂದ ಓಟು ಹಾಕಿಸಿದರು. ಇಂಡಿಗನಾಥದಲ್ಲಿ ಮತಗಟ್ಟೆ ಇದೆ‌.೫ ಸಾವಿರ ಮತಗಳಿವೆ. ಜಿಲ್ಲಾಧಿಕಾರಿಗೆ ತೊಳಸಿಗೆರೆಗೆ ಮತಗಟ್ಟೆ ಕೊಡಿ ಎಂದು ಮನವಿ ಸಲ್ಲಿಸಿದ್ದೇವೆ ಎಂದರು.

ಇದು ಬರಿ ತೊಳಸಿಗೆರೆಯ ಕಥೆಯಷ್ಟೇ ಅಲ್ಲ.ಸುತ್ತಮುತ್ತಲ ಬಹುತೇಕ ಹಳ್ಳಿಗಳ ದೈನಂದಿನ ಬದುಕು. ಚಾಮರಾಜನಗರದಲ್ಲಿ ಇಂತಹ ಅದೆಷ್ಟೋ ಕತೆಗಳು ನಮ್ಮ ತಂಡಕ್ಕೆ ಸೆಲ್ಕೋ ಅಧ್ಯಯನದಲ್ಲಿ ಸಿಗುತ್ತಾ ಹೋದವು.

ಕಡಿದಾದ ದಾರಿಯಲ್ಲೊಂದು ಸೋಲಾರ್ ಆ್ಯಂಬ್ಯುಲೆನ್ಸ್: ಇಂತಹ ಕಡಿದಾದ ದಾರಿಯಲ್ಲಿ ನಡೆದಾಡಲು ಕಷ್ಟಸಾಧ್ಯವೇ ಆಗಿರುವಾಗ ಮಲೆಮಹಾದೇಶ್ವರ ಬೆಟ್ಟದ ಗ್ರಾಮಗಳಲ್ಲಿ ಸೆಲ್ಕೋ ಸೋಲಾರ್ ಹೆಲ್ತ್ ವ್ಯಾನ್ ಆಸರೆಯಾಗಿದೆ. ವೀರಪ್ಪನ್ ಜನ್ಮ ಸ್ಥಳ ಗೋಪಿನಾಥಮ್, ಆಲಂಬಾಡಿ, ಇಂಡಿಗನಾಥ ತೊಳಸಿಗೆರೆ ಸೇರಿದಂತೆ ಮಲೆಮಹದೇಶ್ವರ್ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಈ ಮೊಬೈಲ್ ಆಸ್ಪತ್ರೆಯಂತಿರುವ ಸೋಲಾರ್ ಆ್ಯಂಬ್ಯುಲೆನ್ಸ್ ವ್ಯಾನ್ ಸಂಚರಿಸುತ್ತದೆ. ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮೊಬೈಲ್ ಹೆಲ್ತ್ ವ್ಯಾನ್ ನಲ್ಲಿ ಆರು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಪ್ರತಿದಿನ ಒಂದೊಂದು ಹಳ್ಳಿಗೆ ಇದು ಸಂಚರಿಸುತ್ತದೆ. ಸೋಲಾರ್ ಅಳವಡಿಸಿರುವ ಈ ಉದ್ಭವ್ ವ್ಯಾನ್ ಕಿರು ಆಸ್ಪತ್ರೆಯಂತೆ ಜನರ ಬಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದೆ. ಬ್ಲಡ್ ಯುನಿಟ್, ಲೈಟ್ ಹೆಲ್ತ್ ಟಿಪ್ಸ್ ಕೊಡಲು ಟಿವಿ ಅಳವಡಿಸಲಾಗಿದ್ದು, ಮೆಡಿಕಲ್ ಆಫಿಸರ್ ಅಂಜಲಿ ಜೊತೆ ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದೆ‌. ಎನ್ ಆರ್.ಹೆಚ್‌ಎಂ. ಕೇಂದ್ರ ಸರ್ಕಾರದ ಯೋಜನೆಯಡಿ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ. ಒಂದುವಾರದಲ್ಲಿ ಹದಿನೈದು ಹಳ್ಳಿಗಳಲ್ಲಿ ಸಂಚರಿಸಿ 10 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರಿಗೆ ಆರೈಕೆ, ಮಧುಮೇಹ, ರಕ್ತದೊತ್ತಡ, ಮೂಳೆ ಸಮಸ್ಯೆ, ಜ್ವರ ಹೀಗೆ ಸಾಮಾನ್ಯ ರೋಗಗಳಿಗೆ ಸ್ಥಳದಲ್ಲಿ ಚಿಕಿತ್ಸೆ ಮಾಡಲಾಗುತ್ತದೆ.

ಸೋಲಾರ್ ಅಳವಡಿಕೆಯಿಂದ ಸ್ಥಳದಲ್ಲಿಯೇ ಆರೋಗ್ಯ ಪರೀಕ್ಷಿಸಿ ವರದಿ ಸಲ್ಲಿಸಬಹುದಾಗಿದೆ. ಬೆಟ್ಟ ಪ್ರದೇಶ ಇರುವುದರಿಂದ ಅಸ್ತಮಾ ರೋಗಿಗಳೇ ಹೆಚ್ಚು ಇಲ್ಲಿ. ಸೋಲಾರ್‌ಫ್ರಿಡ್ಜ್ ನಿಂದ‌ ಜೀವ ರಕ್ಷಕ ಔಷಧಿಗಳನ್ನು ಸಂಗ್ರಹಿಸಬಹುದು. ಬೆಟ್ಟ ಪ್ರದೇಶ ಆಗಿರುವುದರಿಂದ ಇಲ್ಲಿನ ಜನರಿಗೆ ಇಲ್ಲಿ ಜ್ಞಾನ ಕಡಿಮೆ.ಅವರಿಗೆ ಟಿವಿ ಮೂಲಕ ಆರೋಗ್ಯ ಜ್ಞಾನ ನೀಡಲು ಸಹಾಯಕವಾಗುತ್ತದೆ. ಹೆಚ್ಐವಿ ಬಿಡಿಆರ್ ಶ್ಯುಗರ್ ಪರೀಕ್ಷಿಸಲಾಗುತ್ತದೆ ಎಂದು ಡಾ.ಅಂಜಲಿ ಮಾಹಿತಿ ನೀಡುತ್ತಾರೆ.

ಸೋಲಾರ್ ನಿಂದ ವಿದ್ಯುತ್ ಪಡೆಯುವುದು, ನೀರು ಕಾಯಿಸುವುದು ಎಂಬುದಷ್ಟೇ ಹಲವರಿಗೆ ಗೊತ್ತು.ಆದರೆ ಸೋಲಾರ್‌ ಬೆಳಕಷ್ಟೇ ಅಲ್ಲ ಬದುಕು ನೀಡಬಹುದು ಎಂಬುದನ್ನು ಸೆಲ್ಕೋ ಸಾಬೀತು ಪಡಿಸಿದೆ. ಸಾಂಪ್ರದಾಯಿಕ ಕುಲುಮೆಯಿಂದ ಸೋಲಾರ್ ಕುಲುಮೆಗೆ ಜನ ಬದಲಾಗುವಂತಾಗಿದೆ. ವಿದ್ಯುತ್ ನೆಚ್ಚಿಕೊಂಡು ಕಷ್ಟಪಡುತ್ತಿದ್ದ ಜೆರಾಕ್ಸ್ ಪ್ರಿಂಟರ್ ಅಂಗಡಿಗಳಿಗೂ, ಮನೆಯಲ್ಲಿ ಮಹಿಳೆ ಅದರಲ್ಲಿಯೂ ಹಿಂದುಳಿದ ಚಾಮರಾಜನಗರ ಜಿಲ್ಲೆಯ ಕೊಳಚೆ ಹಳ್ಳಿಗಳ ಮಹಿಳೆಯರಿಗೂ,‌ನಿರುದ್ಯೋಗಿ ಯುವಕರಿಗೆ ಸೋಲಾರ್ ಹಿಟ್ಟಿನ ಗಿರಣಿಯನ್ನೂ ಆರಂಭಿಸಿ ಹೊಸಬದುಕು ಆರಂಭಿಸಿದ್ದಾರೆ.

ಕೊಳ್ಳೆಗಾಲ ತಾಲೂಕಿನ ಮೂಡಲ ಅಗ್ರಹಾರದ ಬಡಮಕ್ಕಳು ಓದುತ್ತಿರುವ ಒಂದರಿಂದ ಎಂಟನೇ ತರಗತಿಯವರೆಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ಸೋಲಾರ್ ಡಿಇಪಿ ಪಠ್ಯಪುಸ್ತಕಗಳನ್ನು ಒದಗಿಸುತ್ತಿದೆ. ಇಂಗ್ಲಿಷ್ ವ್ಯಾಕರಣ, ವಿಜ್ಞಾನ, ಗಣಿತದ ಸ್ಮಾರ್ಟ್ ಕ್ಲಾಸನ್ನು ಸೋಲಾರ್ ನೀಡುತ್ತಿದೆ.

108 ವಿದ್ಯಾರ್ಥಿಗಳುಳ್ಳ ಈ ಶಾಲೆ ಸ್ಥಳೀಯ ದಾನಿಗಳು ಹಾಗೂ ಸಂಘಸಂಸ್ಥೆಗಳ ನೆರವಿನೊಂದಿಗೆ ಸೆಲ್ಕೋ ಕಂಪೆನಿ

ಸ್ಮಾರ್ಟ್ ಕ್ಲಾಸ್ ಗೆ ಡಿಇಪಿ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಮಕ್ಕಳು ಸಹ ನಗರದ ಮಕ್ಕಳಂತೆ ಶಿಕ್ಷಣ, ಮನರಂಜನೆಯ ಖುಷಿಯಲ್ಲಿ ಕಲಿಯಲು ಸಾಧ್ಯವಾಗುತ್ತಿದೆ. ಮೊದಲೆಲ್ಲ ಶಾಲೆಗೆ ವಿದ್ಯುತ್ ಅಭಾವ ಇತ್ತು. ಈಗ ಸೋಲಾರ್ ನಿಂದ ಇಪ್ಪತ್ತನಾಲ್ಕು ತಾಸು ವಿದ್ಯುತ್ ಇದ್ದು ಲೋಡ್ ಶೆಡ್ಡಿಂಗ್ ಸಮಸ್ಯೆಯೇ ಇಲ್ಲ. ಸೆಲ್ಕೋ ಮಕ್ಕಳಿಗಾಗಿ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿಯನ್ನೂ ನೀಡಿತು. ಇದು ಮಕ್ಕಳ ಸರಳ ಮತ್ತು ಆಸಕ್ತಿದಾಯಕವಾಗಿದೆ.ಮಕ್ಕಳ ಹಾಜರಾತಿಯೂ ಇದರಿಂದ ಹೆಚ್ಚಾಗುತ್ತದೆ. ಇದರ ಜತೆಗೆ ಸೆಲ್ಕೋ ಸಂಸ್ಥೆ ಸುತ್ತಮುತ್ತ ನಾಲ್ಕು ವರ್ಷಗಳಿಂದ ಸುಮಾರು ಹತ್ತು ಶಾಲೆಗಳಿಗೆ ಡಿಪಿಇ ಸೌಲಭ್ಯ ನೀಡಿದೆ. ಐದು ವರ್ಷಗಳ ಕಾಲ ನಿರ್ವಹಣಾ ವೆಚ್ಚ ಇರವುದಿಲ್ಲ. ಶಾಲಾ ವಿದ್ಯಾರ್ಥಿ ವನಜಾಕ್ಷಿ ಏಳನೇ‌ ತರಗತಿ ವಿದ್ಯಾರ್ಥಿನಿ ಹೇಳುವಂತೆ ನಮಗೆ ಈಗ ಮೊದಲಿಗಿಂತ ಪಾಠ ಸುಲಭ ಅನಿಸುತ್ತಿದೆ‌ ಎನ್ನುತ್ತಾಳೆ.

ಕರ್ನಾಟಕದ ಮೊದಲ ಸೋಲಾರ್ ಹಗ್ಗ ನೇಯುವ ಯಂತ್ರ: ಚಾಮರಾಜನಗರ ಜಿಲ್ಲೆಯ ತೆಂಕಣಮೊಳೆ ಹಳ್ಳಿಯಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ಸುಮಾರು 300 ಮನೆಗಳಿವೆ.ಇವರೆಲ್ಲರ ಕಸುಬು ಹಗ್ಗ ನೇಯುವುದು. ಮೊದಲು ಭೂತಾಳೆ ಹೆಚ್ಚಾಗಿದ್ದು ಜನರೀಗ ಪ್ಲಾಸ್ಟಿಕ್ ಚೀಲದ ದಾರಗಳ ಮೊರೆ ಹೋಗಿದ್ದಾರೆ. ಸಾಂಪ್ರದಾಯಿಕ ಹಗ್ಗ ನೇಯುವ ಗ್ರಾಮವೀಗ ಮೊದಲ ಸೋಲಾರ್‌ ಹಗ್ಗ ನೇಯುವ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವೆಂಕಟೇಶ್ ಎಂಬ ಮನೆಯವರು ಸೋಲಾರ್ ದಾರಯಂತ್ರ ಅಳವಡಿಸಿಕೊಂಡಿದ್ದಾರೆ. ಈ ಕುಟುಂಬ ತಲೆತಲಾಂತರವಾಗಿ ದಾರ ಹೊಸೆಯುವ ಕೆಲಸ ಮಾಡುತ್ತಿದ್ದರು. ಸೋಲಾರ್ ಯಂತ್ರದಿಂದ ಇವರ ಬದುಕು ಸುಧಾರಣೆಯಾಗಿದೆ. ಹತ್ತು ಜೊತೆಯುಳ್ಳ ಹತ್ತು ಕಟ್ಟು ದಾರ ಒಂದು ದಿನಕ್ಕೆ ಸಿದ್ಧವಾಗುತ್ತದೆ. ಸೋಲಾರ್ ಬಳಸಿರುವುದರಿಂದ ಎರಡು ಆಳು ಮಾಡುವ ಕೆಲಸ ಕಡಿಮೆಯಾಗಿದೆ. ದಾರ ತಯಾರಿಸುವ ಜೊತೆಗೆ ಮಾರ್ಕೆಟಿಂಗ್ ಕೂಡ ಮಾಡಿತ್ತೇನೆ ಎನ್ನುತ್ತಾರೆ ವೆಂಕಟೇಶ್.

ಕರ್ನಾಟಕದಲ್ಲಿ ವೆಂಕಟೇಶ್ ಕುಟುಂಬವೇ ಮೊದಲ ಬಾರಿಗೆ ಪ್ಲಾಸ್ಟಿಕ್ ಹಗ್ಗವನ್ನು ತಯಾರಿಸುತ್ತಿರುವ ಕುಟುಂಬ. ಕತಾಳನಾರು(ಭೂತಾಳ) ನಾರಿನ ಹಗ್ಗವನ್ನು ಮಾಡುತ್ತಾರೆ.ಸೋಲಾರ್ ಅಳವಡಿಸಿ ಎಂಟು ತಿಂಗಳಾಗಿದೆ.ಪ್ರಾಣಿಗಳನ್ನು ಕಟ್ಟಿಹಾಕಲು ಹುಲ್ಲು ಕಟ್ಟಲು ಲಾರಿ ಕಟ್ಟಲು ಹಲವು ಮನೆ ಕೆಲಸಗಳಿಗೂ ಬಳಸಲಾಗುತ್ತದೆ.

ಒಂದು ಜೊತೆ ಹಗ್ಗ ತಯಾರಿಸಲು 30 ರೂ.ಖರ್ಚಾದರೆ ಇವರಿಗೆ‌ 15-19 ರೂ‌.ಇದರಲ್ಲಿ ಲಾಭವಾಗುತ್ತದೆ‌‌. ವಾರದಲ್ಲಿ ಎರಡಮೂರು ದಿನ ಕೆಲಸ.ತಿಂಗಳಿಗೆ 6ರಿಂದ 9ಸಾವಿರ ರೂ.ಆದಾಯ ದೊರೆಯುಂತಾಗಿದೆ. ಸೆಲ್ಕೋ ಸೋಲಾರ್ ಮಷಿನ್ ನಿಂದ ಉಪಯುಕ್ತವಾಗಿದ್ದು, ವೆಂಕಟೇಶ್ ಮಾದರಿಯನ್ನು ನೋಡಿ ಇನ್ನೂ ಇಪ್ಪತ್ತೈದು ಜನ ಸೋಲಾರ್ ಬಳಸಲು ಮುಂದಾಗಿದ್ದಾರೆ.

ಯುಎನ್ಐ ಯುಎಲ್ ವಿಎನ್ 1722

More News
ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

24 Sep 2020 | 8:43 PM

ಕೋಲ್ಕತಾ, ಸೆ 24 (ಯುಎನ್‌ಐ) ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದ್ದು, 77 ದಶಲಕ್ಷ ಪ್ರಕರಣಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

 Sharesee more..
ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

24 Sep 2020 | 3:55 PM

ನವದೆಹಲಿ, ಸೆ 24 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ ಭಾರತವು 86,508 ಕೋವಿಡ್ 19 ಪ್ರಕರಣದ ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 57,32,519 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ತಿಳಿಸಿವೆ.

 Sharesee more..

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 83,347 ಹೊಸ ಪ್ರಕರಣ

23 Sep 2020 | 12:48 PM

 Sharesee more..