Saturday, Sep 21 2019 | Time 21:28 Hrs(IST)
  • ದ್ವಿ ದಳ ಧಾನ್ಯಗಳ ವರ್ಗದಡಿ ರಾಜ್ಯಕ್ಕೆ ಕೇಂದ್ರ 1 ಕೋಟಿ ರೂ ಗಳ ಪ್ರಶಂಸಾ ಪ್ರಶಸ್ತಿ
  • ಉಪ ಚುನಾವಣೆ ಘೋಷಣೆ: ಅನರ್ಹರಿಗೆ ಭವಿಷ್ಯದ ಚಿಂತೆ
  • ಪರಿಷತ್ ವಿಪಕ್ಷ ಸ್ಥಾನಕ್ಕೆ ಲಾಬಿ ಶುರುಮಾಡಿಕೊಂಡ ಸಿ ಎಂ ಇಬ್ರಾಹಿಂ
  • 370ನೇ ವಿಧಿ ರದ್ಧತಿ ಸಂಬಂಧ ನಾಳೆ ನಗರದಲ್ಲಿ ಜನಜಾಗೃತಿ ಸಮಾವೇಶ : ಎನ್ ರವಿಕುಮಾರ್
  • ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು ?!
  • ಮೋಟಾರು ವಾಹನ ದಂಡ ಶುಲ್ಕ ಇಳಿಕೆ : ಮುಖ್ಯಮಂತ್ರಿ
  • ಉಪಚುನಾವಣೆಗೆ ಸಜ್ಜಾಗಿದ್ದೇವೆ , 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ : ದಿನೇಶ್ ಗುಂಡೂರಾವ್
Karnataka Share

ರಾಜಕೀಯ ಬಿಕ್ಕಟ್ಟಿನ ನಡುವೆಯೇ ನಾಳೆಯಿಂದ ವಿಧಾನಮಂಡಲ ಅಧಿವೇಶನ

ರಾಜಕೀಯ ಬಿಕ್ಕಟ್ಟಿನ ನಡುವೆಯೇ ನಾಳೆಯಿಂದ ವಿಧಾನಮಂಡಲ ಅಧಿವೇಶನ
ರಾಜಕೀಯ ಬಿಕ್ಕಟ್ಟಿನ ನಡುವೆಯೇ ನಾಳೆಯಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು, ಜು 11 (ಯುಎನ್‍ಐ) ಆಡಳಿತ ಪಕ್ಷದ ಶಾಸಕರ ಸರಣಿ ರಾಜೀನಾಮೆ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗಳ ನಡುವೆಯೇ ಶುಕ್ರವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದೆ.

ಜು 12 ರಿಂದ 26 ವರೆಗೆ ಮುಂಗಾರು ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಮೇಲ್ಮನೆ ಮತ್ತು ಕೆಳಮನೆಯ ಸಚಿವಾಲಯಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ಅಧಿವೇಶನದಲ್ಲಿ ಬಜೆಟ್ ಮಂಡಿಸಿದ್ದರು. ಜುಲೈ ಅಂತ್ಯದವರೆಗೆ ಲೇಖಾನುದಾನಕ್ಕೆ ಮಾತ್ರ ಉಭಯ ಸದನಗಳು ಒಪ್ಪಿಗೆ ನೀಡಿದ್ದವು.

ಬಜೆಟ್‍ನ ಮುಂದುವರಿದ ಅಧಿವೇಶನ ಇದಾಗಿದ್ದು, ಸರ್ಕಾರಕ್ಕೆ ಈ ಮಾಸಾಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್‍ಗೆ ಅನುಮೋದನೆ ಪಡೆಯಬೇಕಾದ ಅನಿವಾರ್ಯತೆ ಇದೆ. ಈ ಅಧಿವೇಶನದಲ್ಲಿ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆದು ಉಭಯ ಸದನಗಳಲ್ಲಿ ಬಜೆಟ್ ಅನುಮೋದನೆಯಾಗಬೇಕಿದೆ.

ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮೈತ್ರಿ ಪಕ್ಷ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಅಧಿವೇಶನದ ಕಾರ್ಯಕಲಾಪಗಳಲ್ಲಿ ಭಾಗಿಯಾಗುವಂತೆ ಹಾಗೂ ಅಗತ್ಯಬಿದ್ದರೆ ವಿಶ್ವಾಸ ಮತಯಾಚಿಸುವ ಸಂದರ್ಭದಲ್ಲಿ ಸರ್ಕಾರದ ಪರ ಮತಚಲಾಯಿಸುವಂತೆ ಕಾಂಗ್ರೆಸ್, ಜೆಡಿಎಸ್ ವಿಪ್ ಜಾರಿಗೊಳಿಸಿದೆ.

ಮೊದಲ ದಿನವಾದ ನಾಳೆ ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರು ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ.

ರಾಜ್ಯದಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು, ಜನರು ಗುಳೆ ಹೋಗದಂತೆ ಉದ್ಯೋಗ, ಬರ ನಿರ್ವಹಣೆ ಸೇರಿದಂತೆ ಹತ್ತು-ಹಲವು ಜ್ವಲಂತ ಸಮಸ್ಯೆಗಳು ಇದ್ದು, ಅಧಿವೇಶನದಲ್ಲಿ ಜ್ವಲಂತ ಸಮಸ್ಯೆಗಳಿಗಿಂತ ರಾಜಕೀಯ ವಿಚಾರವೇ ಹೆಚ್ಚು ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಕಲ ಪ್ರಯತ್ನಗಳನ್ನು ನಡೆಸಿದ್ದು, ಈಗಾಗಲೇ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ. ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟು ಬಿಜೆಪಿ ಸದನದಲ್ಲಿ ತೀವ್ರ ಹೋರಾಟ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸರ್ಕಾರ ಅಧಿವೇಶನ ನಡೆಸುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಯುಎನ್ಐ ಯುಎಲ್ ಎಎಚ್ 1918