Monday, Jul 22 2019 | Time 07:35 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Karnataka Share

ವಿಧಾನಸೌಧ ರಾಜಕೀಯ ವ್ಯಾಪಾರ ಕೇಂದ್ರವಲ್ಲ : ಯು.ಟಿ.ಖಾದರ್

ವಿಧಾನಸೌಧ ರಾಜಕೀಯ ವ್ಯಾಪಾರ ಕೇಂದ್ರವಲ್ಲ : ಯು.ಟಿ.ಖಾದರ್
ವಿಧಾನಸೌಧ ರಾಜಕೀಯ ವ್ಯಾಪಾರ ಕೇಂದ್ರವಲ್ಲ : ಯು.ಟಿ.ಖಾದರ್

ಬೆಂಗಳೂರು, ಜು 11 (ಯುಎನ್‍ಐ) ವಿಧಾನಸೌಧವನ್ನು ರಾಜಕೀಯ ವ್ಯಾಪಾರ ಕೇಂದ್ರವನ್ನಾಗಿಸಿಕೊಂಡಿರುವ ರಾಜ್ಯ ಬಿಜೆಪಿ ನಾಯಕರು, ಶಕ್ತಿಕೇಂದ್ರದಲ್ಲಿ ಕಿರುಚಾಟ, ಕೂಗಾಟ ನಡೆಸುವುದು ಶಾಸಕರಾದವರಿಗೆ ಶೋಭೆ ತರುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸೌಧಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಎಂ.ಪಿ.ರೇಣುಕಾಚಾರ್ಯ ಸರ್ಕಾರದ ವಿರುದ್ಧ ಕಿರುಚಾಡುತ್ತಿದ್ದುದ್ದನ್ನು ಕಂಡ ಯು.ಟಿ.ಖಾದರ್, ಕಿರುಚಾಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಈ ವೇಳೆ ಖಾದರ್ ಹಾಗೂ ರೇಣುಕಾಚಾರ್ಯ ನಡುವೆ ಮಾತಿನ ಚಕಮಕಿ ನಡೆದಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ತಮ್ಮ ಮುಂದೆ ಬಿಜೆಪಿ ಶಾಸಕರು ಸುಮ್ಮನೆ ಕಿರುಚಾಡುತ್ತಿದ್ದರು. ಕಿರುಚಾಡುವುದು ಸರಿಯಲ್ಲ. ಈ ರೀತಿ ವರ್ತನೆ ತೋರುವವರಿಗೆ ನಾಚಿಕೆಯಾಗಬೇಕು ಎಂದಿದ್ದೆ ಅಷ್ಟೆ. ನಮ್ಮ ಶಾಸಕರು ನಮ್ಮವರೇ ಆದ ಕೆ.ಸುಧಾಕರ್ ಅವರನ್ನು ಮನವೊಲಿಸುವುದು ತಪ್ಪೇ ? ನಮ್ಮವರು ನಮ್ಮವರೊಂದಿಗೆ ಮಾತನಾಡಬಾರದು ಎಂದು ಹೇಳಲು ಬಿಜೆಪಿ ನಾಯಕರಿಗೆ ಯಾವ ಹಕ್ಕಿದೆ ಎಂದು ಅವರು ಪ್ರಶ್ನಿಸಿದರು.

ಶಾಸಕರನ್ನು ಮನವೊಲಿಸುವ ಪ್ರಯತ್ನಗಳು ನಡೆದಿವೆ. ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಮುಂಬೈ ಹೊಟೇಲ್ ನಲ್ಲಿ ಯಾರೋ ಶಾಸಕರು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾತನಾಡಿಸಬೇಕು ಎಂದಿದ್ದರು. ಹೀಗಾಗಿ ಅಲ್ಲಿಗೆ ಹೋಗಿದ್ದೆವು. ಹೊಟೇಲ್‍ ನಲ್ಲಿ ಮುಂಗಡವಾಗಿ ಕೊಠಡಿ ಕಾ‍ಯ್ದಿರಿಸಲಾಗಿತ್ತಾದರೂ ನಮ್ಮನ್ನು ಹೊಟೇಲ್ ಒಳಗೆ ಹೋಗಲು ಪೊಲೀಸರು ಬಿಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬೈ ಹೊಟೇಲ್ ನಲ್ಲಿ ಬಿಜೆಪಿ ನಾಯಕ ಆರ್.ಅಶೋಕ್ ಇದ್ದರು. ಅವರನ್ನಾದರೂ ಮಾತನಾಡಿಸಿಕೊಂಡು ಹೋಗುತ್ತೇವೆ ಎಂದಾಗ ಅದಕ್ಕೂ ಪೊಲೀಸರು ಅವಕಾಶ ಕೊಡಲಿಲ್ಲ. ಕೊನೆಗೆ ಹೊಟೇಲ್ ನಲ್ಲಿ ಕೊಠಡಿ ಕಾಯ್ದಿರಿಸಿರುವುದು ಕ್ಯಾನ್ಸಲ್ ಆಗಿದೆ ಎಂದು ನಮ್ಮನ್ನು ಬಂಧಿಸಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಚಿವ ಆರ್.ವಿ ದೇಶಪಾಂಡೆ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುವುದು ಬಾಕಿ ಇವೆ. ಹೀಗಾಗಿ ಸಚಿವ ಸಂಪುಟ ನಡೆಸಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಕೆ.ಸುಧಾಕರ್ ಅವರನ್ನು ಮನವೊಲಿಸಲು ನಮ್ಮವರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರಷ್ಟೆ. ಪ್ರಜಾಪ್ರಭುತ್ವದಲ್ಲಿ ಇದನ್ನೆಲ್ಲ ಹಿಂದಿನಿಂದಲೂ ನೋಡಿಕೊಂಡು ಬರಲಾಗಿದೆ. ವಿಧಾನಸೌಧದಲ್ಲಿ ನಡೆಯಬಾರದ ಘಟನೆಗಳು ನಡೆಲಾರಂಭಿಸಿವೆ. ಸುಧಾಕರ್ ಅವರ ನಿವಾಸಕ್ಕೆ ತೆರಳಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೇನೆ. ಇದು ನನ್ನ ಕರ್ತವ್ಯ. ಕೆಲವರು ಹೇಳಿ ಮಾಡುತ್ತಾರೆ. ನಾನು ಹೇಳದೆಯೇ ಮಾಡಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಯುಎನ್‍ಐ ಯುಎಲ್ ವಿಎನ್ 1835