Tuesday, Jul 23 2019 | Time 01:02 Hrs(IST)
Karnataka Share

ಶ್ಯಾಮ್ ಪ್ರಸಾದ್‌ ಮುಖರ್ಜಿಗೆ ಕಾಂಗ್ರೆಸ್‌ನಿಂದ ನಿರಂತರ ಅವಮಾನ; ಯಡಿಯೂರಪ್ಪ

ಶ್ಯಾಮ್ ಪ್ರಸಾದ್‌ ಮುಖರ್ಜಿಗೆ ಕಾಂಗ್ರೆಸ್‌ನಿಂದ ನಿರಂತರ ಅವಮಾನ; ಯಡಿಯೂರಪ್ಪ
ಶ್ಯಾಮ್ ಪ್ರಸಾದ್‌ ಮುಖರ್ಜಿಗೆ ಕಾಂಗ್ರೆಸ್‌ನಿಂದ ನಿರಂತರ ಅವಮಾನ; ಯಡಿಯೂರಪ್ಪ

ಬೆಂಗಳೂರು, ಜೂ 23 (ಯುಎನ್ಐ) ಜನಸಂಘದ ಸ್ಥಾಪಕ ಡಾ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಕಾಂಗ್ರೆಸ್ ಪಕ್ಷ ಎಲ್ಲ ಸಂದರ್ಭಗಳಲ್ಲೂ ಅವಮಾನ ಮಾಡಿದೆ. ಅವರ ಸಂಶಯಾಸ್ಪದ ಸಾವಿನ ಬಗ್ಗೆಯೂ ಕಾಂಗ್ರೆಸ್ ತನಿಖೆ ನಡೆಸಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ

ಜನಸಂಘದ ಸ್ಥಾಪಕ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 66ನೇ ಬಲಿದಾನ ದಿನದ ಅಂಗವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದ ಬಳಿಕ ಮಾತನಾಡಿದರು.

ಜೂನ್ 23 ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ. ಅವರ ಜೀವನ, ಸಾಧನೆ ಹಾಗೂ ಬಲಿದಾನ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೇರಣಾದಾಯಿಯಾಗಿದೆ. ಕಾಂಗ್ರೆಸ್ ಗೆ ಪರ್ಯಾಯವಾದ ರಾಜಕೀಯ ಪಕ್ಷವನ್ನು ಕಟ್ಟಿದವರು ಅವರು. ಭಾರತದ ಏಕತೆಗೆ ಪೂರಕವಲ್ಲದ ಸಂವಿಧಾನದ 370ನೇ ವಿಧಿ ರದ್ದಾಗಬೇಕು ಎಂದು ಹೋರಾಟ ಮಾಡಿದ್ದರು. ಈಗ ಜಮ್ಮು ಕಾಶ್ಮೀರದ ಪರಿಸ್ಥಿತಿ ನೋಡಿದರೆ ಅವರ ಹೋರಾಟದ ಮಹತ್ವ ಏನು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಡಾ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಕಾಂಗ್ರೆಸ್ ಪಕ್ಷ ಎಲ್ಲ ಸಂದರ್ಭದಲ್ಲೂ ಅವಮಾನ ಮಾಡಿದೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯ್ ಪಟೇಲ್ ರೀತಿಯಲ್ಲೇ ಕಾಂಗ್ರೆಸ್ ಶ್ಯಾಮ್‌ಪ್ರಸಾದ್ ಮುಖರ್ಜಿಯವರಿಗೆ ಅನ್ಯಾಯ ಮಾಡಿತು. ಡಾ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಅನುಮಾನಾಸ್ಪದ ಸಾವಿಗೆ ಅಂದಿನ ಕಾಂಗ್ರೆಸ್ ಸರ್ಕಾರ ತನಿಖೆಯನ್ನೂ ಮಾಡಲಿಲ್ಲ. ಜವಾಹರಲಾಲ ನೆಹರು ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುತ್ತಿದ್ದ ಕಾರಣ ಮುಖರ್ಜಿಯವರನ್ನು ತುಳಿಯುವ ಪ್ರಯತ್ನ ಮಾಡಲಾಯಿತು ಎಂದು ಆರೋಪಿಸಿದರು.

ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೆ ವಿಧಿಯಡಿ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯತತ್ಪರರಾಗಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ, ಅಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.

ನಾನು ಬರ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಉತ್ತಮವಾದ ಕೆಲಸ ಮಾಡಿದ್ದ ಅಧಿಕಾರಿಗಳನ್ನು ಪ್ರಶಂಸಿಸಿದ್ದೇನೆ. ಯಾರು ಸರಿಯಾಗಿ ಕೆಲಸ ಮಾಡಿಲ್ಲವೋ ಅಲ್ಲಿ ಪ್ರತಿಪಕ್ಷ ನಾಯಕನಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಮುಖ್ಯಮಂತ್ರಿ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಗಮನ ಹರಿಸುವುದು ಬಿಟ್ಟು ಪ್ರತಿಪಕ್ಷ ನಾಯಕರು ಎಲ್ಲಿ ಹೋಗುತ್ತಿದ್ದಾರೆ ? ಏನು ಮಾಡುತ್ತಿದ್ದಾರೆ ? ಎಂದು ಗಮನಿಸುತ್ತಿದ್ದಾರೆ. ನಾವು ಹೇಗೆ ಮಾತನಾಡಬೇಕು, ಎಲ್ಲಿ ಹೋಗಬೇಕು ಎಂಬುದನ್ನು ಅವರಿಂದ ನಾವು ಕಲಿಯಬೇಕಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಶೇಕಡಾ 6ರ ಬಡ್ಡಿ ದರದಲ್ಲಿ 6,000 ಕೋಟಿ ರೂಪಾಯಿ ಸಾಲ ಸೌಲಭ್ಯ ಕೊಟ್ಟಿದೆ. ಈ ಸೌಲಭ್ಯ ಪಡೆದುಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರ ಬಾಕಿ ತೀರಿಸಿಲ್ಲ. ಇದು ಗೊತ್ತಿದ್ದೂ ಮುಖ್ಯಮಂತ್ರಿ ಕುಮಾರಸ್ವಾಮಿ‌ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ತುಮಕೂರಿನಲ್ಲಿ ಡಾ.ಪರಮೇಶ್ವರ್ ಸಾಗುವ ಮಾರ್ಗದಲ್ಲಿ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟಿದ್ದವರಿಗೆ ನೊಟೀಸ್ ನೀಡಿದ್ದಾರೆ, ಧ್ವಜ ತೆಗಿಸಿದ್ದಾರೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತೇನೆ. ಪರಮೇಶ್ವರ್ ಈ ರೀತಿ ವರ್ತಿಸಲಾರರು. ಈ ಬಗ್ಗೆ ಅವರೊಂದಿಗೂ ನಾನು ಮಾತನಾಡುತ್ತೇನೆ. ಒಂದು ರಾಷ್ಟ್ರೀಯ ಪಕ್ಷದ ಧ್ವಜವನ್ನು ಪ್ರದರ್ಶಿಸಬಾರದು ಎಂದು ಹೇಳಿದರೆ ಅದು ತಪ್ಪಾಗುತ್ತದೆ ಎಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿಯಲ್ಲಿನ‌ ಒಂದು ನಾಯಿಯೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿಲ್ಲ ಎಂದು ಕೆಲವು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಹಾಗಾದರೆ ಆ ಟೀಕೆ ಮಾಡಿದ ನಾಯಕರ ಕುಟುಂಬದಲ್ಲಿ ಎಷ್ಟು ಜನ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರೆ, ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ನವರು ಅಸ್ಪೃಷ್ಯತೆಯನ್ನು ಜೀವಂತವಾಗಿಟ್ಟು ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡರು. ಅದೇ ಆರ್ ಎಸ್ ಎಸ್, ಸಂಘಪರಿವಾರ ಮತ್ತು ಬಿಜೆಪಿ ದೀನ ದಲಿತರ ಏಳಿಗೆಗೆ ಶ್ರಮಿಸುತ್ತಿದೆ. ಸಮಾನ ಭಾವನೆಯಿಂದ ನೋಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ರುದ್ರೇಗೌಡ, ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಗಣೇಶ ಯಾಜಿ, ಮಲ್ಲೇಶ್ವರಂ ಮಂಡಳ ಬಿಜೆಪಿ ಅಧ್ಯಕ್ಷ ಕೇಶವ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

ಯುಎನ್ಐ ಎಸ್‌ಎಂಆರ್ ಎಎಚ್ 1236