Monday, Jul 13 2020 | Time 05:17 Hrs(IST)
Entertainment Share

ಸಿ ಎಸ್‍ ಅಶ್ವತ್ಥ್ - ಅಪ್ಪ ಅಂದ್ರೆ ಹೀಗಿರಬೇಕು ಎನಿಸುವ ವ್ಯಕ್ತಿತ್ವ

ಬೆಂಗಳೂರು, ಮೇ 25 (ಯುಎನ್‍ಐ) ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದರ ಸಾಲಿಗೆ ಸೇರುವವರು ಸಿ ಎಸ್‍ ಅಶ್ವತ್ಥ್. ಇಂದು ಈ ದಿವಂಗತ ನಟನ 95ನೇ ಜನ್ಮದಿನ. ದರ್ಶನ್. ಜಗ್ಗೇಶ್ ಸೇರಿದಂತೆ ಬಹುತೇಕ ಕಲಾವಿದರು, ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಟನನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.
ಹಳೆಯ ಚಲನಚಿತ್ರಗಳನ್ನು ನೋಡಿದ ಇಂದಿನ ಪೀಳಿಗೆಯವರು ಅಶ್ವತ್ಥ್ ಅವರ ಅಭಿನಯವನ್ನು ಅತ್ಯಂತ ಸಹಜ, ಪಾತ್ರವೇ ಮೈವೆತ್ತಿಬಂದಿದೆಯೇನೋ ಎಂದು ಉದ್ಗರಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಅಶ್ವತ್ಥ್ ಅವರ ಅಭಿನಯವೇ ಅಂತಹುದು. ಅದರಲ್ಲೂ ಮಧ್ಯಮ ವರ್ಗದ ತಂದೆಯಾಗಿ, ಅವರ ಪಾತ್ರಗಳು ಅವಿಸ್ಮರಣೀಯ. ಇದ್ದರೆ ಇಂತಹ ಅಪ್ಪ ಇರಬೇಕು. . . . ಜೀವನದ ಕಷ್ಟ ಸುಖಗಳನ್ನು ಸಮನಾಗಿ ಸವಿಯುವ, ಎಲ್ಲರನ್ನೂ ಪ್ರೀತಿಸುವ ತಂದೆ, ಕಷ್ಟ ಸಹಿಷ್ಠುವಾಗಿ ಎಲ್ಲರಿಗೂ ಹತ್ತಿರವಾಗುತ್ತಾರೆ.

ತಂದೆ, ಮಾವ, ಮೇಷ್ಟ್ರು, ಗೆಳೆಯನಾಗಿ 370ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕರಗನಹಳ್ಳಿ ಸುಬ್ಬರಾಯ ಅಶ್ವತ್ಥನಾರಾಯಣ ಕೇವಲ ತೆರೆಯ ಮೇಲಷ್ಟೇ ಅಲ್ಲದೆ ತೆರೆಯ ಹಿಂದಿನ ನಿಜ ಜೀವನದಲ್ಲಿಯೂ ಸರಳ, ಪ್ರಾಮಾಣಿಕ, ಅಪ್ಪಟ ಮಧ್ಯಮವರ್ಗದ ಸ್ನೇಹಜೀವಿ. ಕೊನೆಯವರೆಗೂ ಕನ್ನಡ ಚಿತ್ರರಂಗಕ್ಕಾಗಿ ದುಡಿದ ಕಲಾಭಿಮಾನಿ.

ಅದರಲ್ಲೂ 1972ರಲ್ಲಿ ತೆರೆಕಂಡ ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು, ಕಲಾಭಿಮಾನಿ ಹೃದಯಲ್ಲಿ ಅಶ್ವತ್ಥ್ ಶಾಶ್ವತವಾಗಿ ನೆಲೆಸಿದ್ದಾರೆ.

ಅಶ್ವತ್ಥ್ 1955ರಲ್ಲಿ ನಿರ್ಮಾಣವಾದ ಸ್ರೀ ರತ್ನ ಚಿತ್ರದ ನಾಯಕನಾಗಿ ಬೆಳಕಿಗೆ ಬಂದವರು. ಆದರೆ ಪ್ರಮುಖ ಪೋಷಕ ಪಾತ್ರಗಳಲ್ಲೇ ಹೆಚ್ಚು ಜನಪ್ರಿಯರಾದರು. ಶಿಸ್ತು, ಸಮಯಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರ ನಿರ್ಮಾಣವಲಯದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾದವರು.

ಇಂಟರಮಿಡಿಯಟ್ ವರೆಗೆ ವಿದ್ಯಾಭ್ಯಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಸಹಭಾಗಿ, ಆಹಾರ ಇಲಾಖೆಯಲ್ಲಿ ನೌಕರಿಯ ನಡುವೆ , ನಾಟಕದ ಗೀಳು, ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದುಡಿಮೆ ಹಾಗೂ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾಯರಿಂದ ಅಭಿನಯದಲ್ಲಿ ತರಬೇತಿ ಪಡೆದಿದ್ದರು. ನಾಟಕದಲ್ಲಿನ ಇವರ ಅಭಿನಯ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಈ ಮೇರು ಪ್ರತಿಭೆಯ ಪದಾರ್ಪಣೆಯಾಯಿತು.

‘ಮಹಿಷಾಸುರ ಮರ್ದಿನಿ’, ‘ಸ್ವರ್ಣಗೌರಿ’, ‘ಭಕ್ತ ಪ್ರಹ್ಲಾದ’, ‘ದಶಾವತಾರ’, ‘ನಾಗಾರ್ಜುನ’, ‘ನಾ ನಿನ್ನ ಬಿಡಲಾರೆ’, ‘ಕಸ್ತೂರಿ ನಿವಾಸ’, ‘ಮುತ್ತಿನಹಾರ’, ‘ಗೆಜ್ಜೆಪೂಜೆ’, ‘ಉಪಾಸನೆ’. . .ಹೀಗೆ ಎಲ್ಲ ಚಿತ್ರಗಳಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ, ಪುತ್ರ ಶಂಕರ್ ಅಶ್ವತ್ಥ್ ಎಂಬ ಪ್ರತಿಭೆಯನ್ನು ಚಿತ್ರರಂಗಕ್ಕೆ ನೀಡಿ, 2010 ಜನವರಿ 18ರಲ್ಲಿ ಇಹಲೋಕ ತ್ಯಜಿಸಿದ ‘ಚಾಮಯ್ಯ ಮೇಷ್ಟ್ರು’ ಯುವ ಕಲಾವಿದರ ಪಾಲಿಗೆ ನಿಜಕ್ಕೂ ಪ್ರಾತಃಸ್ಮರಣೀಯರು.

ಯುಎನ್‍ಐ ಎಸ್‍ಎ ವಿಎನ್ 1310
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..