Monday, Jul 22 2019 | Time 07:34 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National Share

ಸುಗಮ್ಯ ಭಾರತ ಅಭಿಯಾನ : ದಿವ್ಯಾಂಗರಿಗೆ ರೈಲ್ವೆ ಇಲಾಖೆ ಉಪಕ್ರಮ

ನವದೆಹಲಿ, ಜುಲೈ 11 (ಯುಎನ್ಐ) ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಪ್ರಯತ್ನದಲ್ಲಿ “ಸುಗಮ್ಯ ಭಾರತ ಅಭಿಯಾನ” ದಡಿ ದಿವ್ಯಾಂಗರಿಗೆ, ಹಿರಿಯ ನಾಗರಿಕರಿಗೆ, ರೋಗಿಗಳಿಗೆ ರೈಲು ನಿಲ್ದಾಣದಲ್ಲಿನ ವಿವಿಧ ಫ್ಲಾಟ್‌ಫಾರಂಗಳಿಗೆ ಸುಲಭವಾಗಿ ತೆರಳುವಂತಾಗಲು ಎಸ್ಕಲೇಟರ್, ಲಿಫ್ಟ್ ಮೊದಲಾದ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 8700 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿದ್ದು ವಿಕಲಚೇತರಿಗೆ ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಅನುಕೂಲ ಮಾಡಿಕೊಡಲು ಅಗತ್ಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ವಿಶೇಷಚೇತನರಿಗೆ ರೈಲು ನಿಲ್ದಾಣದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಅಲ್ಪಾವಧಿ ಹಾಗೂ ದೀರ್ಘಾವಧಿ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಈ ಅಭಿಯಾನದಡಿ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರಡಿ ಈ ವರೆಗೆ 240 ನಿಲ್ದಾಣಗಳಲ್ಲಿ 669 ಎಸ್ಕಲೇಟರ್ ಅಳವಡಿಸಲಾಗಿದೆ ಮತ್ತು 214 ನಿಲ್ದಾಣಗಳಲ್ಲಿ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಸಿಬ್ಬಂದಿ ಅಗತ್ಯ ಸಂವಹನ, ಸಂಯಮ ಮೊದಲಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ವಿಶೇಷ ತರಬೇತಿ ನೀಡುವಂತೆ ಎಲ್ಲಾ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಗ್ರಾಹಕರಲ್ಲಿ ತೃಪ್ತ ಮನೋಭಾವ ನೀಡುವ ಉದ್ದೇಶ ಹೊಂದಲಾಗಿದೆ. ಪ್ರಯಾಣಿಕರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಸಿಬ್ಬಂದಿಗೆ ವಿಶೇಷ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ದಿವ್ಯಾಂಗರಿಗೆ ಕಲ್ಪಿಸಿರುವ ವ್ಯವಸ್ಥೆ, ಗಾಲಿ ಕುರ್ಚಿ ಲಭ್ಯತೆ ಬಗೆಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ಫ್ಲಾಟ್‌ಫಾರಂಗೆ ಒಂದು ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸುವೆ ಸೂಚನೆ ನೀಡಲಾಗಿದೆ. ಕೆಲವೆಡೆ ಎರಡು ಫ್ಲಾಟ್‌ಫಾರಂಗೆ ಒಂದು ಗಾಲಿ ಕುರ್ಚಿ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.
ಪ್ರಮುಖ ರೈಲು ನಿಲ್ದಾಣಗಳಲ್ಲಿ “ ಯಾತ್ರಿ ಮಿತ್ರ ಸೇವೆ “ ಆರಂಭಿಸಲಾಗಿದ್ದು ಈ ಮೂಲಕ ಗಾಲಿ ಕುರ್ಚಿ ಹಾಗೂ ಹಮಾಲಿ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿಯ (ಸಿಎಸ್ಆರ್) ಭಾಗವಾಗಿ ಎನ್‌ಜಿಒ, ದತ್ತಿ ಸಂಸ್ಥೆಗಳು, ಸಾರ್ವಜನಿಕ ವಲಯ ಉದ್ದಿಮೆಗಳು ಈ ಅಭಿಯಾನದಡಿ ಉಚಿತ ಸೇವೆ ನೀಡುತ್ತಿವೆ.

ಎನ್‌ಜಿಒ, ದತ್ತಿ ಸಂಸ್ಥೆ ಸೇವೆಗಳು ಲಭ್ಯವಿರದ ಕಡೆ ಶುಲ್ಕ ಆಧಾರದಲ್ಲಿ ಅಥವಾ ಸೇವಾದಾತರ ನೆರವಿನೊಂದಿಗೆ ಈ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಐಆರ್‌ಸಿಟಿಸಿ ಜಾಲತಾಣ ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಐಆರ್‌ಸಿಟಿಸಿ ಡಾಟ್ ಕೋ ಡಾಟ್ ಇನ್ ಮೂಲಕ ಸಹ ಗಾಲಿ ಕುರ್ಚಿ ಸೇವೆಯನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ.
ಈ ಸೇವೆ ಪ್ರಸ್ತುತ 22 ನಿಲ್ದಾಣಗಳಲ್ಲಿ ಲಭ್ಯವಿದೆ. ಅಹಮದಾಬಾದ್, ಆಗ್ರಾ ಕಂಟೋನ್ಮೆಂಟ್, ವಡೋದರಾ, ವಾರಾಣಸಿ, ಭೂಸ್ವಾಲ್, ವಿಜಯವಾಡ, ಕಾನ್ಪುರ ಸೆಂಟ್ರಲ್, ಮುಂಬೈ ಸಿಎಸ್‌ಟಿ, ಮುಂಬೈ ಸೆಂಟ್ರಲ್, ಹೌರಾ, ಇಂಡೋರ್, ಝಾನ್ಸಿ, ಜೈಪುರ, ಲಕ್ನೋ ಜಂಕ್ಷನ್, ಲಕ್ನೋ, ನವದೆಹಲಿ, ನಾಗ್ಪುರ, ಪಠಾಣ್‌ಕೋಟ್ ಕಂಟೋನ್ಮೆಂಟ್, ಪುಣೆ, ಬೆಂಗಳೂರು ನಗರ, ಸೆಕುಂದರಾಬಾದ್ ಮತ್ತು ಶ್ರೀ ಮಾತಾ ವೈಷ್ಣೋದೇವೆ ಕತ್ರಾ ನಿಲ್ದಾಣಗಳಲ್ಲಿ ಉಚಿತ ಗಾಲಿ ಕುರ್ಚಿ ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯವಿದೆ.

ದಿವ್ಯಾಮಗರಿಕೆ ನೆರವು ನೀಡುವಂತೆ ದಿವ್ಯಾಂಗ ಇನ್ಸ್‌ ಪೆಕ್ಟರ್ ಹುದ್ದೆಗೆ ಸಂಬಂಧಿತ ತಪಾಸಣಾಧಿಕಾರಿಗಳಿಗೆ, ನಿಲ್ದಾಣ ವ್ಯವಸ್ಥಾಪಕರಿಗೆ, ಟಿಕೆಟ್ ಉಸ್ತುವಾರಿಗಳಿಗೆ ವಲಯ ಹಂತದಲ್ಲಿ ಸೂಚನೆ ನೀಡಲಾಗಿದೆ. ರೈಲ್ವೆ ಸಚಿವಾಲಯ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಾಂತ್ರಿಕ – ಆರ್ಥಿಕ ಅಧ್ಯಯನ ನಡೆಸುತ್ತಿದ್ದು ಈ ವರದಿ ಆಧರಿಸಿ ಹಂತ ಹಂತವಾಗಿ ನಿಲ್ದಾಣಗಳ ಮರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ. ಯುಎನ್‌ಐ ಜಿಎಸ್‌ಆರ್ ಕೆಎಸ್‌ಆರ್ 1227