Sunday, Aug 18 2019 | Time 04:37 Hrs(IST)
Karnataka Share

ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ: ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು, ಜು 17 (ಯುಎನ್‌ಐ) ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಕುರಿತಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ಹಾಗೂ ಈಗಿರುವ ಅಂಕಿಅಂಶಗಳ ಪ್ರಕಾರ ಮುಖ್ಯಮಂತ್ರಿ ಎಚ್‌.ಡಿ ಕುಮಾಸ್ವಾಮಿ ಅವರ ಸರ್ಕಾರ ಬಹುಮತ ಕಳೆದುಕೊಳ್ಳುವುದು ಬಹುತೇಕ ಖಚಿತ ಹಾಗೂ ಬಿಜೆಪಿ ನೇತೃತ್ವ ಸರ್ಕಾರ ಬರುವ ಎಲ್ಲ ಲಕ್ಷಣಗಳಿವೆ ಎಂದು ಅಂದಾಜಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಅವರು ಬಹಳ ದಿನಗಳ ಕಾಲ ವಿಶ್ವಾಸ ಮತದ ಕೊರತೆಯಲ್ಲಿ ಸರ್ಕಾರ ಮುಂದುವರಿಸುವ ಸಾಧ್ಯತೆಯಿಲ್ಲ. ತಮ್ಮ ನಾಟಕ ಜಾಸ್ತಿ ದಿನ ನಡೆಯುವುದಿಲ್ಲ ಎಂದು ಅರಿತು ಈಗಲಾದರೂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಮಿಂಟೋ‌ ಕಣ್ಣಿನ ಆಸ್ಪತ್ರೆಗೆ ನಾನು ಬೆಳಿಗ್ಗೆ ಭೇಟಿ ನೀಡಿದ್ದೇನೆ. ಇತಿಹಾಸವಿರುವ ಈ ಆಸ್ಪತ್ರೆಯಲ್ಲಿ 23 ಜನರಿಗೆ ಕಣ್ಣಿನ‌ಪೊರೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದರಲ್ಲಿ 11 ಜನ ಶಾಶ್ವತವಾಗಿ ಕುರುಡರಾಗಿದ್ದಾರೆಂದು ಕೋಟಾ ಅಸಮಾಧಾನ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರವೇ ನಾನೇ ಎಂದು ಹೇಳಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಇತ್ತ‌ ಗಮನಹರಿಸಬೇಕು. ಮಿಂಟೋ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮಿಂಟೋ ಆಸ್ಪತ್ರೆಯ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಬೇಕು. ಜತೆಗೆ, ಸರ್ಕಾರ ಇದಕ್ಕೆ ತಕ್ಕಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೋಟಾ ಶ್ರೀನಿವಾಸ ಆಗ್ರಹಿಸಿದರು.
ಯುಎನ್‌ಐ ಯುಎಲ್‌ಆರ್‌ ಆರ್‌ಕೆ 1302