Wednesday, Oct 20 2021 | Time 15:32 Hrs(IST)
Special Share

ಮಮತಾ ಸೋದರಳಿಯನಿಗೆ ಇ ಡಿಯಿಂದ 3ನೇ ಬಾರಿ ಸಮನ್ಸ್

ನವದೆಹಲಿ, ಸೆ 11(ಯುಎನ್‌ ಐ) - ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಟಿ ಎಂ ಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಈ ತಿಂಗಳ 21 ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅಭಿಷೇಕ್ ಗೆ ಸಮನ್ಸ್‌ ಜಾರಿ ಮಾಡಿರುವುದು ಮೂರನೇ ಬಾರಿಯಾಗಿದೆ.
ಕಲ್ಲಿದ್ದಲು ಅಕ್ರಮ ಸಾಗಾಣಿಕೆ ಪ್ರಕರಣದ ವಿಚಾರಣೆಗೆ ಬ್ಯಾನರ್ಜಿ ಶುಕ್ರವಾರ ಇಡಿ ಮುಂದೆ ಹಾಜರಾಗಬೇಕಿತ್ತು. ಆದರೆ ಸಮಯ ಅಭಾವದ ಕಾರಣ ಅಭಿಷೇಕ್ ಬ್ಯಾನರ್ಜಿ ಇಡಿ ಮುಂದೆ ಹಾಜರಾಗಿರಲಿಲ್ಲ. ಇದರಿಂದ ಈ ತಿಂಗಳ 21 ರಂದು ಹಾಜರಾಗಬೇಕೆಂದು ಮತ್ತೊಮ್ಮೆ ಸಮೆನ್ಸ್‌ ನೀಡಿದೆ. ಅದೇ ರೀತಿ ಸೆಪ್ಟೆಂಬರ್ 1 ರಂದು ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್ ಪತ್ನಿ ರುಜಿರಾ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಕಾರಣದಿಂದ ಪುಟ್ಟ ಮಕ್ಕಳೊಂದಿಗೆ ದೆಹಲಿಗೆ ಬರಲು ಸಾಧ್ಯವಿಲ್ಲ ಬದಲಾಗಿ ಕೋಲ್ಕತ್ತಾದಲ್ಲಿರುವ ತಮ್ಮ ಮನೆಯಲ್ಲಿ ವಿಚಾರಣೆ ನಡೆಸಬೇಕೆಂದು ಜಾರಿ ನಿರ್ದೇಶನಾಲಯವನ್ನು ಕೋರಿದ್ದಾರೆ.
ಸೋಮವಾರ (ಸೆಪ್ಟೆಂಬರ್ 6), ದೆಹಲಿಯ ಜಾಮ್‌ನಗರ ಹೌಸ್‌ನಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಇಡಿ ಅಧಿಕಾರಿಗಳು ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು. ಕುಟುಂಬದ ಸದಸ್ಯರೊಂದಿಗೆ ಸಂಬಂಧ ಹೊಂದಿರುವ ಎರಡು ಸಂಸ್ಥೆಗಳು ಪಡೆದುಕೊಂಡ ಲೆಕ್ಕವಿಲ್ಲದ ಹಣದ ಬಗ್ಗೆ ವಿಶೇಷವಾಗಿ ಪ್ರಶ್ನಿಸಿದ ಮಾಹಿತಿ ಲಭ್ಯವಾಗಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ಅಭಿಷೇಕ್‌ ಬ್ಯಾನರ್ಜಿ ವಿಫಲವಾಗಿದ್ದಾರೆ ಎಂದು ತಿಳಿದುಬಂದಿದೆ. ಕಲ್ಲಿದ್ದಲು ಅಕ್ರಮ ಸಾಗಾಣಿಕೆ ಮೂಲಕ ಬಂದ ನಗದು ಹಣದ ವಿಷಯದಲ್ಲಿ ವಿನಯ್ ಮಿಶ್ರಾ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಹಿನ್ನಲೆಯಲ್ಲಿ ಪರಾರಿಯಲ್ಲಿರುವ ಆರೋಪಿ ಟಿಎಂಸಿ ಯುವ ನಾಯಕ ವಿನಯ್‌ ಮಿಶ್ರಾ ಅವರೊಂದಿಗಿನ ಸಂಬಂಧಗಳ ಬಗ್ಗೆ ಅಭಿಷೇಕ್‌ ಬ್ಯಾನರ್ಜಿ ಅವರನ್ನು ಸೋಮವಾರ ಪ್ರಶ್ನಿಸಿದಾಗ ಆರೋಪಗಳನ್ನು ತಳ್ಳಿಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, ಈಶಾನ್ಯ ರಾಜ್ಯಗಳಲ್ಲಿ ಬಿಗಿ ಹಿಡಿತ ಸಾಧಿಸಲು ತೃಣಮೂಲ ಕಾಂಗ್ರೆಸ್ ಶ್ರಮಿಸುತ್ತಿದೆ. 2023 ರ ವಿಧಾನಸಭೆ ಚುನಾವಣೆಗಳನ್ನು ಗುರಿಯಾಗಿಸಿಕೊಂಡು ಅಕ್ರಮಣಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಸಂಸದ ಅಭಿಷೇಕ್‌ ಬ್ಯಾನರ್ಜಿ ಬುಧವಾರ (ಸೆಪ್ಟೆಂಬರ್ 15) ತ್ರಿಪುರಾದ ಅಗರ್ತಲಾದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್‌ ಘೋಷ್‌ ತಿಳಿಸಿದ್ದಾರೆ.
ಯುಎನ್‌ ಐ ಕೆವಿಆರ್‌ 1611
.