Monday, Sep 20 2021 | Time 08:02 Hrs(IST)
Sports Share

ಏಕದಿನ ಪಂದ್ಯ: ಮಿಥಾಲಿ ಅಬ್ಬರ, ಭಾರತಕ್ಕೆ ಗೆಲುವು

ವೂಸ್ಟರ್, ಜು.3 (ಯುಎನ್ಐ)- ನಾಯಕಿ ಮಿಥಾಲಿ ರಾಜ್ (75) ಹಾಗೂ ಸ್ಮೃತಿ ಮಂದಾನ (49) ಇವರುಗಳ ಭರ್ಜರಿ ಆಟದ ನೆರವಿನಿಂದ ಭಾರತ ವನಿತೆಯರ ತಂಡ ಮೂರನೇ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಸರಣಿಯನ್ನು 1-2 ರಿಂದ ಸೋತಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 47 ಓವರ್ ಗಳಲ್ಲಿ 219 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 46.3 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮೊದಲ ವಿಕೆಟ್ ಗೆ ಶಫಾಲಿ ವರ್ಮಾ (19) ಹಾಗೂ ಸ್ಮೃತಿ ಜೋಡಿ 46 ರನ್ ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಸ್ಮೃತಿ

ನಾಲ್ಕನೇ ವಿಕೆಟ್ ಗೆ ಅನುಭವಿ ಹರ್ಮನ್ ಪ್ರೀತ್ ಕೌರ್ (16) ಹಾಗೂ ನಾಯಕಿ ಮಿಥಾಲಿ ರಾಜ್ ಜೋಡಿ 75 ಎಸೆತಗಳಲ್ಲಿ 50 ರನ್ ಜೊತೆಯಾಟದ ಕಾಣಿಕೆ ನೀಡಿತು. ಆರನೇ ವಿಕೆಟ್ ಗೆ ಮಿಥಾಲಿ ಹಾಗೂ ಯುವ ಆಟಗಾರ್ತಿ ಸ್ನೇಹ ರಾಣಾ (24) ಇಬ್ಬರು ಜೊತೆಗೂಡಿ ಅರ್ಧಶತಕದ ಜೊತೆಯಾಟ ನೀಡಿತು. ಮಿಥಾಲಿ 86 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ ಅಜೇಯ 75 ರನ್ ಸಿಡಿಸಿ ತಂಡಕ್ಕೆ ನೆರವಾದರು.

ಇದಕ್ಕೂ ಮೊದಲು ಇಂಗ್ಲೆಂಡ್ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಆರಂಭಿಕ ಲಾರೆನ್ ವಿನ್ಫೀಲ್ಡ್-ಹಿಲ್ ಹಾಗೂ ಹೀದರ್ ನೈಟ್ ಜೋಡಿ 91 ಎಸೆತಗಳಲ್ಲಿ 67 ರನ್ ಸೇರಿಸಿ ಅಬ್ಬರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಸ್ನೇಹ ರಾಣಾ ಸಫಲರಾದರು. ಮೂರನೇ ವಿಕೆಟ್ ಗೆ ಹೀದರ್ ನೈಟ್ ಹಾಗೂ ನಾಟ್ ಸ್ಕೀವರ್ ಜೋಡಿ 42 ರನ್ ಸೇರಿಸಿತು. ನಾಯಕಿ ನೈಟ್ 46 ರನ್ ಗಳಿಸಿದ್ದಾಗ ಕೌರ್ ಎಸೆತದಲ್ಲಿ ಔಟ್ ಆದರು. ಸ್ಕೀವರ್ ಹಾಗೂ ಆಮಿ ಜೋನ್ಸ್ (17) ಜೋಡಿ 41 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿತು. ಸ್ಕೀವರ್ 59 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 49 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಸೋಫಿಯಾ ಡಂಕ್ಲೆ 28 ರನ್ ಸೇರಿಸಿದರು. ಅಂತಿಮವಾಗಿ ಇಂಗ್ಲೆಂಡ್ 47 ಓವರ್ ಗಳಲ್ಲಿ 219 ರನ್ ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಜುಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂನಮ್ ಯಾದವ್, ಸ್ನೇಹ ರಾಣಾ, ಹರ್ಮನ್ ಪ್ರೀತ್ ಕೌರ್ ತಲಾ ಒಂದು ವಿಕೆಟ್ ಪಡೆದರು.

ಯುಎನ್ಐ ವಿಎನ್ಎಲ್ 1832