Monday, Sep 20 2021 | Time 06:53 Hrs(IST)
Sports Share

ಆರ್ಚರಿ: ದೀಪಿಕಾ, ಅತನುಗೆ ಚಿನ್ನ

ಪ್ಯಾರೀಸ್, ಜೂ.28 (ಯುಎನ್ಐ)- ಇಲ್ಲಿ ನಡೆದಿರುವ ಆರ್ಚರಿ ವಿಶ್ವಕಪ್ ಮೂರನೇ ಹಂತದ ಸ್ಪರ್ಧೆಯಲ್ಲಿ ಭಾನುವಾರ ಐತಿಹಾಸಿಕ ಸಾಧನೆ ಮಾಡಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಬಿಲ್ಲುಗಾರ ಅತಾನು ದಾಸ್ ಮತ್ತು ಅವರ ಪತ್ನಿ ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೈಯಕ್ತಿಕ, ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ದೀಪಿಕಾ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪದಕದ ಬೇಟೆ ನಡೆಸಿದರು. ಶನಿವಾರ ನಡೆದ ಪುರುಷರ ವೈಯಕ್ತಿಕ ಸ್ಪರ್ಧೆಯ ಕಾಂಪೌಂಡ್ ವಿಭಾಗದಲ್ಲಿ ಬಿಲ್ಲುಗಾರ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದರು.

"ನಾವಿಬ್ಬರೂ ಒಬ್ಬರಿಗೊಬ್ಬರು ತಯಾರಿಗಿದ್ದೇವೆ, ಅದಕ್ಕಾಗಿಯೇ ನಾವು ಮದುವೆಯಾಗಿದ್ದೇವೆ. ನಾವು ಒಬ್ಬರಿಗೊಬ್ಬರು ಸ್ಫೂರ್ತಿ ನೀಡುವುದಲ್ಲದೆ ಪರಸ್ಪರ ಪ್ರೋತ್ಸಾಹಿಸುತ್ತೇವೆ ಮತ್ತು ಒಟ್ಟಿಗೆ ಗೆಲ್ಲುತ್ತೇವೆ'' ಎಂದು ಅತನು ದಾಸ್ ಹೇಳಿದ್ದಾರೆ.

ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ, ದೀಪಿಕಾ 6-0 ಗೋಲುಗಳಿಂದ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ಸೋಲಿಸುವ ಮೂಲಕ ಚಿನ್ನ ಗೆದ್ದರು. ದೀಪಿಕಾ ಮೊದಲ ಸೆಟ್‌ನ್ನು 29-27ರಿಂದ ಗೆದ್ದರು, ಎರಡನೇ ಸೆಟ್‌ನ್ನು 29-28ರಿಂದ 4-0 ಮುನ್ನಡೆ ಸಾಧಿಸಿದರು ಮತ್ತು ಮೂರನೇ ಸೆಟ್‌ನಲ್ಲಿ ದೀಪಿಕಾ 28-27ರಿಂದ ಜಯಗಳಿಸಿದರು. ಮಹಿಳಾ ತಂಡದಲ್ಲಿ ದೀಪಿಕಾ ನೇತೃತ್ವದ ಭಾರತ ತಂಡ 5-1 ಗೋಲುಗಳಿಂದ ಮೆಕ್ಸಿಕನ್ ತಂಡವನ್ನು ಸೋಲಿಸಿ ಚಿನ್ನ ಗೆದ್ದಿತು. ಮಿಶ್ರ ಡಬಲ್ಸ್‌ನಲ್ಲಿ, ಅತನು ಮತ್ತು ದೀಪಿಕಾ ಹಾಲೆಂಡ್ ಜೋಡಿ ಜೆಫ್ ವ್ಯಾನ್ ಡೆನ್ ಬರ್ಗ್ ಮತ್ತು ಗೇಬಿ ಶ್ಲೋಸರ್ ಅವರನ್ನು ಸೋಲಿಸುವ ಮೂಲಕ ಜಯ ಸಾಧಿಸಿದರು.

ಟೋಕಿಯೋ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಭಾರತೀಯ ಬಿಲ್ಲುಗಾರರ ಅತ್ಯುತ್ತಮ ಪ್ರದರ್ಶನ ಇದಾಗಿದೆ ಎಂದು ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ ಅಧ್ಯಕ್ಷ ಅರ್ಜುನ್ ಮುಂಡಾ ತಿಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲೂ ಭಾರತೀಯ ಬಿಲ್ಲುಗಾರರು ಈ ಪ್ರದರ್ಶನವನ್ನು ಪುನರಾವರ್ತಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಯುಎನ್ಐ ವಿಎನ್ಎಲ್ 2136