Wednesday, Dec 8 2021 | Time 23:48 Hrs(IST)
Sports Share

ಆರ್ ಸಿಬಿ ಗೆ ಭರ್ಜರಿ ಜಯ, ಮೂರನೇ ಸ್ಥಾನ ಭದ್ರ

ದುಬೈ, ಸೆ.29 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 14ನೇ ಆವೃತ್ತಿಯ 43ನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, ಮೂರನೇ ಸ್ಥಾನ ಭದ್ರ ಪಡಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ಗೆ 149 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬೆಂಗಳೂರು 17.1 ಓವರ್ ಗಳಲ್ಲಿ 3 ವಿಕೆಟ್ ಗೆ 153 ರನ್ ಕಲೆ ಹಾಕಿ ಅಬ್ಬರಿಸಿತು.

ಗುರಿಯನ್ನು ಹಿಂಬಾಲಿಸಿದ ರಾಯಲ್ ತಂಡದ ಆರಂಭಿಕರಾದ ದೇವದತ್ ಪಡೀಕ್ಕಲ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವನ್ನು ತಂಡಕ್ಕೆ ಒದಗಿಸಿದರು. ಈ ಜೋಡಿ 5.2 ಓವರ್ ಗಳಲ್ಲಿ 48 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ರಾಜಸ್ಥಾನ ಬೌಲರ್ ಗಳ ರಣ ತಂತ್ರ ಬೇಧಿಸಿದ ಜೋಡಿ ಆರ್ಭಟಿಸಿತು. ದೇವದತ್ 22, ವಿರಾಟ್ 25 ರನ್ ಗೆ ಔಟ್ ಆದರು.

ಮೂರನೇ ವಿಕೆಟ್ ಗೆ ಗ್ಲೇನ್ ಮ್ಯಾಕ್ಸ್ ವೆಲ್ ಹಾಗೂ ಕೆ.ಎಸ್ ಭರತ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒತ್ತಡದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದ ಜೋಡಿ ಜಯದಲ್ಲಿ ಮಿಂಚಿತು. ಈ ಜೋಡಿ 55 ಎಸೆತಗಳಲ್ಲಿ 69 ರನ್ ಸೇರಿಸಿದರು. ಭರತ್ 44 ರನ್ ಬಾರಿಸಿ ಮುಸ್ತಾಫಿಜುರ್ ಗೆ ವಿಕೆಟ್ ಒಪ್ಪಿಸಿದರು.

ಗ್ಲೇನ್ ಮ್ಯಾಕ್ಸ್ ವೆಲ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ಅರಿತು ಬ್ಯಾಟ್ ಮಾಡಿದರು. ಇವರು 30 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ ಅಜೇಯ 50 ರನ್ ಬಾರಿಸಿ ಜಯದಲ್ಲಿ ಮಿಂಚಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ರಾಯಲ್ಸ್ ಪರ ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್ ಗೆ 8.2 ಓವರ್ ಗಳಲ್ಲಿ 77 ರನ್ ಸೇರಿಸಿತು. ಜೈಸ್ವಾಲ್ 3 ಬೌಂಡರಿ, 2 ಸಿಕ್ಸರ್ ಸೇರಿದಂತೆ 31 ರನ್ ಗಳಿಸಿ ಮುನ್ನುಗುತ್ತಿದ್ದಾಗ ಕ್ರಿಸ್ಟಿಯಾನ್ ಎಸೆತದಲ್ಲಿ ಸಿರಾಜ್ ಗೆ ಕ್ಯಾಚ್ ನೀಡಿದರು.

ಸೊಗಾಸದ ಬ್ಯಾಟಿಂಗ್ ನಡೆಸುತ್ತಿದ್ದ ಎವಿನ್ ಲೂಯಿಸ್ 37 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 58 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್ (19), ಮಹಿಪಾಲ್ ಲ್ರೋಮರ್ (3), ರಾಹುಲ್ ತೆವಾಟಿಯಾ (2) ಅಲ್ಪ ಮೊತ್ತಕ್ಕೆ ನಿರಾಸೆ ಅನುಭವಿಸಿದರು. ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

ಕೊನೆಯ ಓವರ್ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದರು. ಸ್ಪಿನ್ ಬೌಲರ್ ಗಳಾದ ಯಜುವೇಂದ್ರ ಚಹಾಲ್, ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 149
(ಎವಿನ್ ಲೂಯಿಸ್ 58, ಯಶಸ್ವಿ ಜೈಸ್ವಾಲ್ 31, ಹರ್ಷಲ್ ಪಟೇಲ್ 34ಕ್ಕೆ 3, ಶಹಬಾಜ್ ಅಹ್ಮದ್ 10ಕ್ಕೆ 2)
ರಾಯಲ್ ಚಾಲೆಂಜರ್ಸ್ ಬೆಂಗಳೂರು 17.1 ಓವರ್ ಗಳಲ್ಲಿ 3 ವಿಕೆಟ್ ಗೆ 153
ವಿರಾಟ್ ಕೊಹ್ಲಿ 25, ದೇವದತ್ ಪಡೀಕ್ಕಲ್ 22, ಶ್ರೀಕರ್ ಭರತ್ 44, ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 50, ಮುಸ್ತಾಫಿಜುರ್ ರಹಮಾನ್ 20ಕ್ಕೆ2)

ಯುಎನ್ಐ ವಿಎನ್ಎಲ್ 2334