Sunday, Sep 26 2021 | Time 18:50 Hrs(IST)
Sports Share

ಒಲಿಂಪಿಕ್ ನಿಂದ ಸಿಮೋನ್ ಹಾಲೆಪ್ ಹೊರಕ್ಕೆ

ನವದೆಹಲಿ, ಜೂ.29 (ಯುಎನ್ಐ)- ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ವಿಶ್ವದ ಮೂರನೇ ಕ್ರಮಾಂಕದ ಟೆನಿಸ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದಾರೆ.

ರೋಮ್ ನಲ್ಲಿ ನಡೆದ ಕ್ಲೈ ಕೋರ್ಟ್ ಪಂದ್ಯದ ವೇಳೆ ಏಂಜೆಲಿಕ್ ಕೆರ್ಬರ್ ವಿರುದ್ಧದ ಎರಡನೇ ಸುತ್ತಿನ ಪಂದ್ಯದ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದ ಹಾಲೆಪ್ ಮೈದಾನದಿಂದ ಹೊರ ನಡೆದಿದ್ದರು. ನಂತರ ಅವರು ಫ್ರೆಂಚ್ ಓಪನ್‌ನಲ್ಲಿ ಸಹ ಆಡಿರಲಿಲ್ಲ. 29 ವರ್ಷದ ಸಿಮೋನಾ ಸೋಮವಾರ ರಾತ್ರಿ ಟ್ವೀಟ್‌ನಲ್ಲಿ "ರೊಮೇನಿಯಾವನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚಿನ ಗೌರವ ನನಗೆ ಬೇರೆ ಏನು ಇಲ್ಲ. ಆದರೆ ದುಃಖಕರವೆಂದರೆ, ಗಾಯದಿಂದ ಚೇತರಿಸಿಕೊಳ್ಳಲು ನನಗೆ ಹೆಚ್ಚು ಸಮಯ ಹಿಡಿಯುತ್ತದೆ. ಹಾಗಾಗಿ ಮುಂಬರುವ ಟೋಕಿಯೊನಲ್ಲಿ ಭಾಗವಹಿಸಲು ಸಾಧ್ಯವಾಗದರಿಂದ, ಟೂರ್ನಿಯಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ” ಎಂದು ಹಾಲೆಪ್ ತಿಳಿಸಿದ್ದಾರೆ.

ರೊಮೇನಿಯನ್ ಟೆನಿಸ್ ಆಟಗಾರ್ತಿ ಕಳೆದ ವಾರ ವಿಶ್ವದ ಅತ್ಯಂತ ಹಳೆಯ ಟೆನಿಸ್ ಟೂರ್ನಿ ವಿಂಬಲ್ಡನ್‌ನಿಂದ ಹಿಂದೆ ಸರಿದಿರುವುದು ಗಮನಾರ್ಹ. “ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಸೋತ ನಿರಾಶೆಯ ನಂತರ ಒಲಿಂಪಿಕ್ಸ್‌ನಿಂದ ಹೊರಗುಳಿಯುವುದು ತುಂಬಾ ಕಷ್ಟ, ಆದರೆ ನಾನು ಬಲವಾಗಿ ಮರಳಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

ಜುಲೈ 23 ರಿಂದ ಪ್ರಾರಂಭವಾಗುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹಾಲೆಪ್ ಜೊತೆಗೆ ಸೆರೆನಾ ವಿಲಿಯಮ್ಸ್, ರಾಫಾ ನಡಾಲ್ ಮತ್ತು ಡೊಮಿನಿಕ್ ಥೀಮ್ ಭಾಗವಹಿಸುತ್ತಿಲ್ಲ.

ಯುಎನ್ಐ ವಿಎನ್ಎಲ್ 1845