Sunday, Sep 26 2021 | Time 18:13 Hrs(IST)
Sports Share

ಪಿಎಸ್ಎಲ್: ಮುಲ್ತಾನ್ ಚಾಂಪಿಯನ್

ಅಬುದಾಬಿ, ಜೂ.25 (ಯುಎನ್ಐ)- ಭರವಸೆಯ ಆಟಗಾರ ಸೋಹೆಬ್ ಮಕ್ಸೂದ್ (ಅಜೇಯ 65) ಮತ್ತು ರಿಲೆ ರೊಸೋ (50) ಅವರ ಇವರ ಬ್ಯಾಟಿಂಗ್ ಬಲದಿಂದ ಮುಲ್ತಾನ್ ಸುಲ್ತಾನ್ಸ್ 47 ರನ್ ಗಳಿಂದ ಪೇಶಾವರ್ ಜಲ್ಮಿ ತಂಡವನ್ನು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಫೈನಲ್ ನಲ್ಲಿ ಮಣಿಸಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 206 ರನ್ ಗಳನ್ನು ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪೇಶಾವರ್ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿ ಸೋಲು ಕಂಡಿತು.

ಮುಲ್ತಾನ್ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಶಾನ್ ಮಸೂದ್ (37) ಹಾಗೂ ಮೊಹಮ್ಮದ್ ರಿಜ್ವಾನ್ (30) ಜೋಡಿ ಮೊದಲ ವಿಕೆಟ್ ಗೆ 68 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು.

ಮೂರನೇ ವಿಕೆಟ್ ಗೆ ಮಕ್ಸೂದ್ ಹಾಗೂ ರೋಸೊ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿ ಎದುರಾಳಿಗಳನ್ನು ಕಾಡಿತು. ಈ ಜೋಡಿಯನ್ನು ಬೇರ್ಪಡಿಸಲು ಪೇಶಾವರ್ ತಂಡ ಹಾಕಿಕೊಂಡ ಯೋಜನೆ ಎಲ್ಲ ಕೈಕೊಟ್ಟಿತು. ಈ ಜೋಡಿ 44 ಎಸೆತಗಳಲ್ಲಿ 98 ರನ್ ಸೇರಿಸಿ ಅಬ್ಬರಿಸಿತು. ರೋಸೊ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 5 ರನ್ ಬಾರಿಸಿ ಔಟ್ ಆದರು.

ಸೋಹೆಬ್ ಮಕ್ಸೂದ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 6 ಬೌಂಡರಿ, 3 ಸಿಕ್ಸರ್ ಬಾರಿಸಿ ಆರ್ಭಟಿಸಿ ಇವರು ಅಜೇಯ 65 ರನ್ ಸೇರಿಸಿದರು.

ಪೇಶಾವರ್ ತಂಡದ ಪರ ಸಮೀನ್ ಗುಲ್ ಹಾಗೂ ಮೊಹಮ್ಮದ್ ಇಮ್ರಾನ್ ತಲಾ ಎರಡು ವಿಕೆಟ್ ಕಬಳಿಸಿದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪೇಶಾವರ್ ಕಮ್ರನ್ ಅಕ್ಮಲ್ ಹಾಗೂ ಹಜರತುಲ್ಲಾ ಜಾಜಯಿ ಜೋಡಿ 32 ಎಸೆತಗಳಲ್ಲಿ 42 ರನ್ ಸೇರಿಸಿತು. ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕಲಿಲ್ಲ.

ನಾಲ್ಕನೇ ವಿಕೆಟ್ ಗೆ ಶೋಯೆಬ್ ಮಲಿಕ್ ಹಾಗೂ ರಾವನ್ ಪೋವೆಲ್ ಜೋಡಿ 30 ಎಸೆತಗಳಲ್ಲಿ 60 ಸೇರಿಸಿತು. ಶೋಯೆಬ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 48 ರನ್ ಸೇರಿಸಿ ತಂಡಕ್ಕೆ ಆಧಾರವಾದರು. ಪೋವೆಲ್ 23, ಶೆರ್ಫೇನ್ ರುದರ್ಫೋರ್ಡ್ 18 ರನ್ ಸೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಮುಲ್ತಾನ್ ತಂಡದ ಪರ ಇಮ್ರಾನ್ ತಾಹೀರ್ ಮೂರು ವಿಕೆಟ್ ಕಬಳಿಸಿದರು.

ಯುಎನ್ಐ ವಿಎನ್ಎಲ್ಮ 1734