Wednesday, Oct 20 2021 | Time 16:54 Hrs(IST)
Special Share

ರೈತರ ಪ್ರತಿಭಟನೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ

ನವದೆಹಲಿ, ಸೆ 5(ಯುಎನ್‌ ಐ) ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರ ಕಷ್ಟಗಳನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿರುವ ಅವರು ಕಿಸಾನ್ ಪಂಚಾಯತ್‌ಗಳನ್ನು ಸಮರ್ಥಿಸಿಕೊಂಡಿದ್ದಾರೆ. ರೈತರೊಂದಿಗೆ ಸಮಾಲೋಚಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಬೇಕು ಎಂದು ಸೂಚಿಸಿದ್ದಾರೆ. ಫಿಲಿಬಿಟ್‌ ಕ್ಷೇತ್ರವನ್ನು ವರುಣ್ ಗಾಂಧಿ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
" ಲಕ್ಷಾಂತರ ರೈತರು ಮುಜಾಫರ್ ನಗರದಲ್ಲಿಂದು ಪ್ರತಿಭಟನಾರ್ಥ ಸಮಾವೇಶಗೊಂಡಿದ್ದರು. ರೈತರು ನಮ್ಮ ರಕ್ತ ಮಾಂಸ ಹಂಚಿಕೊಂಡ ಜನರಾಗಿದ್ದಾರೆ. ಅವರರೊಂದಿಗೆ ಕೇಂದ್ರ ಸರ್ಕಾರ ಗೌರವದಿಂದ ಮರು ಸಮಾಲೋಚಿಸಬೇಕಾದ ಅಗತ್ಯವಿದೆ. ಅವರ ನೋವನ್ನು ಅರ್ಥಮಾಡಿಕೊಳ್ಳಿ. ಅವರ ಅಭಿಪ್ರಾಯಗಳನ್ನು ಪರಿಗಣಿಸಿ, ಅವರೊಂದಿಗೆ ಸೇರಿ ಒಂದು ಪರಿಹಾರ ರೂಪಿಸಲು ಕೆಲಸ ಮಾಡಬೇಕು "ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ರೈತ ಸಂಘಗಳು ಕಳೆದ ಒಂಬತ್ತು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿವೆ. ಆದರೆ, ಕಾನೂನುಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಪಟ್ಟುಹಿಡಿದಿರುವ ಕಾರಣ ರೈತರೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿವೆ. ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್, ಮುಜಾಫರ್ ನಗರದಲ್ಲಿ , ಸರ್ಕಾರ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವರೆಗೂ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಯುಎನ್‌ ಐ ಕೆವಿಆರ್‌ 1711