Monday, Sep 20 2021 | Time 08:03 Hrs(IST)
Sports Share

ನಾಳೆ ಅಖಾಡ ಪ್ರವೇಶಿಸಲಿರುವ ಭಾರತ ಹಾಕಿ ತಂಡ

ಟೋಕಿಯೊ, ಜು.23 (ಯುಎನ್ಐ)- ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡವು ತಮ್ಮ ಗುಂಪಿನಲ್ಲಿ ನಾಳೆ ಅಖಾಡ ಪ್ರವೇಶಿಸಲಿದ್ದು, ಕೌತುಕ ಮನೆ ಮಾಡಿದೆ. ರಾಣಿ ರಾಮಪಾಲ್ ಮುಂದಾಳತ್ವದ ಭಾರತದ ವನಿತೆಯರ ಹಾಕಿ ತಂಡ ಶನಿವಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕಿತ ನೆದರ್ ಲ್ಯಾಂಡ್ ತಂಡವನ್ನು “ಎ” ಗುಂಪಿನಲ್ಲಿ ಕಾದಾಟ ನಡೆಸಲಿದೆ. ಇನ್ನು ಪುರುಷರ ವಿಭಾಗದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.

ಪುರುಷರ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಭಾರತ, 8ನೇ ಶ್ರೇಯಾಂಕದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಸೆಣಸಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಯಾವ ತಂಡ ಮೊದಲ ಗೆಲುವಿನ ನಗೆ ಬೀರುತ್ತದೆ ಎಂದು ಕಾದು ನೋಡಬೇಕಿದೆ. ಒಟ್ಟಾರೆ ಉಭಯ ತಂಡಗಳು 101 ಬಾರಿ ಮುಖಾಮುಖಿಯಾಗಿದ್ದು, ಭಾರತ 55 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 17 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಇನ್ನು ಒಲಿಂಪಿಕ್ಸ್ ನಲ್ಲೂ ಭಾರತ ತಂಡ ನೀರಸ ಪ್ರದರ್ಶನ ನ್ಯೂಜಿಲೆಂಡ್ ವಿರುದ್ಧ ನೀಡಿದ್ದು, ಈ ಬಾರಿ ಗೆಲುವು ಸಾಧಿಸುವ ಯೋಜನೆ ಹೆಣೆದುಕೊಂಡಿದೆ.

ಈ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಆರಂಭದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮಣೆ ಹಾಕುವ ಸಾಧ್ಯತೆ ಇದೆ. ಮನ್ ಪ್ರೀತ್ ಬಳಗದಲ್ಲಿ ಅನುಭವಿ ಹಾಗೂ ಯುವ ಆಟಗಾರರ ದಂಡು ಇದ್ದು, ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಮಿಂಚಲು ಯೋಜನೆ ರೂಪಿಸಿಕೊಂಡಿದ್ದಾರೆ.

36 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಪಡೆದು ರಿಯೋನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಭಾರತದ ವನಿತೆಯರು ಎರಡನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತ ತಂಡ 2016ರ ಏಷ್ಯನ್ ಗೇಮ್ಸ್ ಚಾಂಪಿಯನ್, 2017 ಏಷ್ಯಾ ಕಪ್, 2018 ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ, 2018ರ ವಿಶ್ವಕಪ್ ನ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿ ಹಿರಿಮೆ ಮೆರೆದಿದೆ.

ವಿಶ್ವಾಸದ ಅಲೆಯಲ್ಲಿ ತೆಲುತ್ತಿರುವ ಭಾರತ ತಂಡ, ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ನಗೆ ಬೀರಲು ಪ್ಲಾನ್ ಮಾಡಿಕೊಂಡಿದೆ. ಉಳಿದಂತೆ ಭಾರತ ಜರ್ಮನಿಯ ವಿರುದ್ಧ ಜು.26, ಇಂಗ್ಲೆಂಡ್ ವಿರುದ್ಧ ಜು.28, ಐರ್ಲೆಂಡ್ ಜು.30 ಹಾಗೂ ದಕ್ಷಿಣ ಆಫ್ರಿಕಾ ಜು.31 ವಿರುದ್ಧ ಕಾದಾಟ ನಡೆಸಲಿದೆ.

ಯುಎನ್ಐ ವಿಎನ್ಎಲ್ 2058