Monday, Sep 20 2021 | Time 07:54 Hrs(IST)
Sports Share

ಯುರೋ ಕಪ್: ಇಂಗ್ಲೆಂಡ್ ಸೆಮಿಫೈನಲ್ಸ್ ಗೆ

ರೋಮ್, ಜು.4 (ಯುಎನ್ಐ)- ಭರವಸೆಯ ಆಟಗಾರ ಹ್ಯಾರಿ ಕೇನ್ ಬಾರಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ 4-0 ಗೋಲುಗಳಿಂದ ಉಕ್ರೇನ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಹಂತ ಕಂಡಿತು.

ಶನಿವಾರ ರೋಮ್ ನಲ್ಲಿ ನಡೆದ ನಾಲ್ಕನೇ ಕ್ವಾರ್ಟರ್-ಫೈನಲ್ಸ್ ನಲ್ಲಿ ಇಂಗ್ಲೆಂಡ್ ಆಟಗಾರರು ಅಬ್ಬರಿಸಿದರು. ಜರ್ಮನಿ ವಿರುದ್ಧದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಒಂದು ಗೋಲು ಬಾರಿಸಿದ್ದ ಹ್ಯಾರಿ, ಕ್ವಾರ್ಟರ್ ಫೈನಲ್ಸ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿ ತಂಡವನ್ನು ಉಪಾಂತ್ಯಕ್ಕೆ ಕೊಂಡೊಯ್ದರು.

ಉಕ್ರೇನ್ ವಿರುದ್ಧದ ಪಂದ್ಯದ ಸಮಯದಲ್ಲಿ, ಹ್ಯಾರಿ ನಾಲ್ಕನೇ ನಿಮಿಷದಲ್ಲಿ ಗೋಲು ಗಳಿಸಿ ಇಂಗ್ಲೆಂಡ್‌ಗೆ 1-0 ಮುನ್ನಡೆ ನೀಡಿದರು. ಈ ಅವಧಿಯಲ್ಲಿ ಗೋಲು ದಾಖಲಿಸಿ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡುವ ಉಕ್ರೇನ್ ಯೋಜನೆ ಫಲಿಸಲಿಲ್ಲ.

ಪಂದ್ಯದ ದ್ವಿತೀಯಾರ್ಧದಲ್ಲಿ, ಲ್ಯೂಕ್ ಶಾ ಅವರ ಫ್ರೀ ಕಿಕ್ ಅನ್ನು ಮ್ಯಾಗೈರ್ ಅವರ ಹೆಡರ್ ಮೂಲಕ ಗೀಓಲು ಪೆಟ್ಟಿಗೆಯ ಒಳಗಡೆ ತಳ್ಳಿದಾಗ ಇಂಗ್ಲೆಂಡ್ ಪಾಳಯದಲ್ಲಿ ಸಂತಸ ಮನೆ ಮಾಡಿತು. ಈ ಮೂಲಕ ತಂಡ 2-0 ಮುನ್ನಡೆ ಸಾಧಿಸಿತು.

ಈ ಗೋಲು ದಾಖಲಾದ ನಾಲ್ಕು ನಿಮಿಷಗಳ ನಂತರ, ಹ್ಯಾರಿ ತನ್ನ ಎರಡನೇ ಗೋಲು ಗಳಿಸಿದರು. ಲ್ಯೂಕ್ ಶಾ ಅವರಿಂದ ಪಾಸ್ ಪಡೆದ ಹೆಂಡರ್ಸನ್ 63 ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 4-0 ಮುನ್ನಡೆ ನೀಡಿದರು.

ಕೊನೆಯ ಕ್ಷಣದವರೆಗೂ ಸೋಲಿನ ಅಂತರವನ್ನು ಕಡಿಮೆ ಮಾಡುವ ಉಕ್ರೇನ್ ಆಸೆ ಫಲಿಸಲಿಲ್ಲ.

ಡೆನ್ಮಾರ್ಕ್ ಗೆ ಜಯ

ಜೆಕ್ ಗಣರಾಜ್ಯವನ್ನು 1-2 ಗೋಲುಗಳಿಂದ ಸೋಲಿಸಿದ ಡೆನ್ಮಾರ್ಕ್ ಜಯದ ಓಟವನ್ನು ಮುಂದುವರೆಸಿದ್ದು, ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ. ಟೂರ್ನಿಯಲ್ಲಿ ಡೆನ್ಮಾರ್ಕ್ ತಂಡ ನಾಲ್ಕನೇ ಬಾರಿಗೆ ಸೆಮಿಫೈನಲ್ ತಲುಪಿತು. ಮೊದಲಾರ್ಧದಲ್ಲಿ ಥಾಮಸ್ ಡೆಲಾನಿ (5 ನೇ ನಿಮಿಷ) ಮತ್ತು ಕ್ಯಾಸ್ಪರ್ ಡಾಲ್ಬರ್ಗ್ (42 ನೇ) ಗೋಲು ಗಳಿಸಿದರು. ಪ್ಯಾಟ್ರಿಕ್ ಶಿಹಾಕ್ 49 ನೇ ನಿಮಿಷದಲ್ಲಿ ಜೆಕ್ ಗಣರಾಜ್ಯದ ಏಕೈಕ ಗೋಲು ಗಳಿಸಿ, ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಯುಎನ್ಐ ವಿಎನ್ಎಲ್ 1751