Sunday, Sep 26 2021 | Time 19:19 Hrs(IST)
Sports Share

ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯ

ಸೌತಾಂಪ್ಟನ್, ಜೂ.25 (ಯುಎನ್ಐ)- ಬುಧವಾರ ಇಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಸೋತ ನಂತರ, ಆಗಸ್ಟ್‌ನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯ ಮುನ್ನ ಎರಡು ಅಥವಾ ಕನಿಷ್ಠ ಒಂದು ಅಭ್ಯಾಸ ಪಂದ್ಯವನ್ನು ಆಡಲು ಭಾರತ ತಂಡದ ಆಡಳಿತ ಮಂಡಳಿ ಎದುರು ನೋಡುತ್ತಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳು ಸರಣಿಯ ಮೊದಲು ಅಭ್ಯಾಸ ಪಂದ್ಯದ ಕೋರಿಕೆಯನ್ನು ದೃಢಪಡಿಸಿದ್ದಾರೆ. ಸ್ಪರ್ಧಾತ್ಮಕ ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡದ ಕೋರಿಕೆಯ ಮೇರೆಗೆ ಬಿಸಿಸಿಐ ಕಾರ್ಯದರ್ಶಿ ಜೇ ಷಾ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧ್ಯಕ್ಷ ಇಯಾನ್ ವಾಟ್ಮೋರ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಾಮ್ ಹ್ಯಾರಿಸನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಗುರುವಾರ ರಾತ್ರಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಔಪಚಾರಿಕ ವಿನಂತಿಯನ್ನು ಈಗಾಗಲೇ ಇಸಿಬಿಗೆ ಮಾಡಲಾಗಿದೆ ಎಂದು ತಿಳಿಯಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಇಸಿಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ವಿಷಯಗಳನ್ನು ಅಂತಿಮಗೊಳಿಸಲಾಗುತ್ತದೆ.

ನಾರ್ಥಾಂಪ್ಟನ್ಶೈರ್ ಮತ್ತು ಲೀಸೆಸ್ಟರ್ಶೈರ್ ವಿರುದ್ಧ ಪ್ರಥಮ ದರ್ಜೆ ಅಭ್ಯಾಸ ಪಂದ್ಯಗಳನ್ನು ಆಡಬೇಕಾಗಿತ್ತು. ಆದರೆ ಬ್ರಿಟನ್ ನಲ್ಲಿ ಪ್ರಸ್ತುತ ಕೊರೋನಾ ವೈರಸ್ ಪರಿಸ್ಥಿತಿ ಮತ್ತು ಪ್ರಯಾಣದ ನಿರ್ಬಂಧಗಳಿಂದಾಗಿ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಮತ್ತು ಡರ್ಹಾಮ್ ನಲ್ಲಿ ಶಿಬಿರವನ್ನು ನಡೆಸಲಾಯಿತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಸಿದ್ಧತೆ ಬಗ್ಗೆ ಕೇಳಿದಾಗ, ಭಾರತದ ನಾಯಕ ವಿರಾಟ್ ಕೊಹ್ಲಿ, "ಇದು ನಮ್ಮ ಮೇಲೆ ಅವಲಂಬಿತವಾಗಿಲ್ಲ. ನಾವು ಖಂಡಿತವಾಗಿಯೂ ಪ್ರಥಮ ದರ್ಜೆ ಅಭ್ಯಾಸ ಪಂದ್ಯಗಳನ್ನು ಬಯಸಿದ್ದೇವೆ. ಆದರೆ ನಮಗೆ ನೀಡಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕೆ ಕಾರಣಗಳು ಯಾವುವು ಎಂದು ನನಗೆ ತಿಳಿದಿಲ್ಲ” ಎಂದಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನವೆ ಭಾರತ ತಂಡ ಅಭ್ಯಾಸ ಪಂದ್ಯವನ್ನು ಆಡುವ ಮನಸ್ಸು ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಅಭ್ಯಾಸ ಪಂದ್ಯವನ್ನು ಆಡುವ ಅವಕಾಶ ಲಭಿಸಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಇಂಟರ್ ಸ್ಕ್ವಾಡ್ ಪಂದ್ಯ ಆಡಿತ್ತು. ಇಂಗ್ಲೆಂಡ್ ನಲ್ಲಿ ಸರಣಿಗೂ ಮುನ್ನವೇ ದೇಶಿಯ ತಂಡಗಳ ವಿರುದ್ಧ ಅಭ್ಯಾಸ ಆಡುವ ಹಂಬಲ ಭಾರತ ತಂಡದ ಮ್ಯಾನೇಜ್ಮೆಂಟ್ ದ್ದಾಗಿದೆ.

ಆಗಸ್ಟ್ 4 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತ ನಂತರ ಭಾರತ ತಂಡಕ್ಕೆ ಈಗ ಮೂರು ವಾರಗಳ ವಿರಾಮ ಸಿಕ್ಕಿದೆ. ಜುಲೈ 14 ರಂದು ತಂಡವು ನಾಟಿಂಗ್ ಹ್ಯಾಮ್ ನಲ್ಲಿ ಸೇರಲಿದ್ದು, ಟೆಸ್ಟ್ ಸರಣಿಗೆ ತಯಾರಿ ನಡೆಸಲಿದೆ.

ಯುಎನ್ಐ ವಿಎನ್ಎಲ್ಮ 1830