Monday, Sep 20 2021 | Time 07:06 Hrs(IST)
Sports Share

ನಾಳೆ ಭಾರತ-ಶ್ರೀಲಂಕಾ ಮೊದಲ ಟಿ-20

ಕೋಲಂಬೋ, ಜು.24 (ಯುಎನ್ಐ)- ಆತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಭಾರತ ತಂಡಗಳ ನಡುವಣ ಮೂರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿನ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-1 ರಿಂದ ಬಾಚಿಕೊಂಡಿರುವ ಶಿಖರ್ ಧವನ್ ನಾಯಕತ್ವದ ಭಾರತ ತಂಡ, ಮೂರು ಪಂದ್ಯಗಳ ಚುಟುಕು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಏಕದಿನ ಪಂದ್ಯಗಳ ಸರಣಿಯಲ್ಲಿ ಹೆಚ್ಚಾಗಿ ಯುವ ಹಾಗೂ ಅನನುಭವಿ ಆಟಗಾರರನ್ನು ಹೊಂದಿರುವ ಭಾರತ, ಉತ್ತಮ ಪ್ರದರ್ಶನವನ್ನು ನೀಡಿ ಅರ್ಹ ರೀತಿಯಲ್ಲಿ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಕೂಡ ಶ್ರೇಷ್ಠ ಪ್ರದರ್ಶನ ನೀಡಿ ಅರ್ಹ ಜಯ ದಾಖಲಿಸಿದಾದರೂ, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆರು ಬದಲಾವಣೆಯೊಂದಿಗೆ ಆಡಿದ ಪರಿಣಾಮ ಸೋಲಿನ ಕಹಿ ಅನುಭವಿಸಿದೆ.
ಏಕದಿನ ಸರಣಿಯಲ್ಲಿ ಭಾರತ ಬಹುತೇಕ ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸಿದೆ. ಶ್ರೀಲಂಕಾ ತನ್ನ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುವ ಹೊರತಾಗಿಯೂ ಭಾರತದ ಯುವ ಆಟಗಾರರ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿ ಈ ವರ್ಷದ ಕೊನೆಯ ಭಾಗದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯಲಿರುವ ಟಿ-20 ಪಂದ್ಯಗಳ ಸರಣಿ ಉಭಯ ರಾಷ್ಟ್ರಗಳಿಗೆ ಮಹತ್ವದ್ದೇನಿಸಿದೆ.
ಏಕದಿನ ಪಂದ್ಯಗಳ ಸರಣಿಯಲ್ಲಿ ಸೋಲಿನ ಕಹಿ ಅನುಭವಿಸಿರುವ ಶ್ರೀಲಂಕಾಕ್ಕೆ, ವಿಶ್ವಕಪ್ ಟಿ-20 ಪಂದ್ಯಾವಳಿಗೆ ಸಿದ್ಧತೆ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಆಡಲಿರುವ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಯ ದಾಖಲಿಸಲೇ ಬೇಕಾದ ಒತ್ತಡದಲ್ಲಿದೆ.
ಯುಎನ್ಐ ವಿಎನ್ಎಲ್ 2200