Monday, Sep 20 2021 | Time 07:19 Hrs(IST)
Sports Share

ಶ್ರೀಲಂಕಾ ಮಣಿಸಿದ ಇಂಗ್ಲೆಂಡ್ ಗೆ ಸರಣಿ

ಓವಲ್, ಜು.2 (ಯುಎನ್ಐ)- ಅನುಭವಿ ಸ್ಯಾಮ್ ಕರನ್ (48ಕ್ಕೆ 5) ಹಾಗೂ ನಾಯಕ ಇಯಾನ್ ಮಾರ್ಗನ್ (ಅಜೇಯ 75) ಇವರುಗಳ ಭರ್ಜರಿ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಎಂಟು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ, ಇನ್ನೂ ಒಂದು ಬಾಕಿ ಇರುವಂತೆ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. 21 ರನ್ ಆಗುವಷ್ಟರಲ್ಲಿ ಮೆಲ್ಪಂಕ್ತೀಯ ನಾಲ್ಕು ಆಟಗಾರರು ಪೆವಿಲಿಯನ್ ಸೇರಿದರು. ಐದನೇ ವಿಕೆಟ್ ಗೆ ವಾನಿಂದು ಹಸರಂಗ (26) ಮತ್ತು ಧನಂಜಯ್ ಡಿಸಲ್ವಾ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 82 ಎಸೆತಗಳಲ್ಲಿ 65 ರನ್ ಸೇರಿಸಿತು.

ಆರನೇ ವಿಕೆಟ್ ಗೆ ಧನಂಜಯ್ ಹಾಗೂ ದಾಸುನ್ ಶಾನಕಾ (47) ಜೋಡಿ 78 ರನ್ ಸೇರಿಸಿತು. ಧನಂಜಯ್ 91 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 91 ರನ್ ಸೇರಿಸಿ ಡೇವಿಡ್ ವಿಲ್ಲೆಗೆ ವಿಕೆಟ್ ಒಪ್ಪಿಸಿದರು. ಚಮಿಕ ಕರುಣರತ್ನೆ 21 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಇಂಗ್ಲೆಂಡ್ ಪರ ಸ್ಯಾಮ್ ಕರನ್ 48 ರನ್ ನೀಡಿ ಐದು ವಿಕೆಟ್ ಹಾಗೂ ಡೇವಿಡ್ ವಿಲ್ಲೆ 64 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.

ಆತಿಥೇಯ ತಂಡದ ಆರಂಭ ಭರ್ಜರಿಯಾಗಿತ್ತು. ಜೇಸನ್ ರಾಯ್ ಹಾಗೂ ಜಾನಿ ಬೇರ್ ಸ್ಟೋ (29) ಜೋಡಿ ಮೊದಲ ವಿಕೆಟ್ ಗೆ 76 ರನ್ ಸೇರಿಸಿತು. ಜೇಸನ್ ರಾಯ್ 10 ಬೌಂಡರಿ ಒಳಗೊಂಡಂತೆ 60 ರನ್ ಸಿಡಿಸಿ ಔಟ್ ಆದರು.

ಮೂರನೇ ವಿಕೆಟ್ ಗೆ ಜೋ ರೂಟ್ ಹಾಗೂ ಇಯಾನ್ ಮಾರ್ಗನ್ ಜೋಡಿ ಸೊಗಸಾದ ಜೊತೆಯಾಟ ನೀಡಿತು. ಈ ಜೋಡಿ 140 ರನ್ ಕಲೆ ಹಾಕಿ ಜಯದಲ್ಲಿ ಮಿಂಚಿತು. ರೂಟ್ ಅಜೇಯ 68, ಮಾರ್ಗನ್ ಅಜೇಯ 75 ರನ್ ಗುಡ್ಡೆ ಹಾಕಿದರು.

ಯುಎನ್ಐ ವಿಎನ್ಎಲ್ 1950