Monday, Sep 20 2021 | Time 08:19 Hrs(IST)
Sports Share

ಕ್ಲೀನ್ ಸ್ವಿಪ್ ಸಾಧನೆಯ ಕನಸಿನಲ್ಲಿ ಭಾರತ

ಕೊಲಂಬೊ, ಜು.22 (ಯುಎನ್ಐ)- ಪ್ರವಾಸಿ ಭಾರತ ತಂಡದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿರುವ ಶ್ರೀಲಂಕಾ ತಂಡ, ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಯೋಜನೆ ಹೆಣೆದುಕೊಂಡಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ದೀಪಕ್ ಚಹಾರ್, ಶ್ರೀಲಂಕಾಕ್ಕೆ ಪೆಟ್ಟು ನೀಡಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ, ತವರಿನಲ್ಲಿ ಮಾನ ಉಳಿಸಿಕೊಳ್ಳುವ ಯೋಜನೆ ಆತಿಥೇಯ ತಂಡದ್ದಾಗಿದೆ. ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡುವದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗುತ್ತಿರುವ ಯುವ ಪಡೆ, ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಸೋಲಿನ ಸುಳಿಯಿಂದ ಹೊರ ಬಂದು ಎರಡನೇ ಏಕದಿನ ಪಂದ್ಯ ಗೆದ್ದಿರುವುದು ತಂಡದ ಮನೋಬಲ ಹೆಚ್ಚಿಸಿದೆ. ಯುವ ಹಾಗೂ ಅನುಭವಿ ಆಟಗಾರರು ತಂಡಕ್ಕೆ ಸರಿಯಾದ ಸಮಯದಲ್ಲಿ ನೆರವಾಗುತ್ತಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಎರಡನೇ ಏಕದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಹೀಗಾಗಿ ಈ ಆಟಗಾರರ ಮೇಲೆ ಜವಾಬ್ದಾರಿ ಹೆಚ್ಚಿದೆ. ಇಶಾನ್ ಕಿಶನ್ ಮಂಗಳವಾರ ರನ್ ಕಲೆ ಹಾಕುವಲ್ಲಿ ಎಡವಿದ್ದು, ಇವರ ಮೇಲೆ ಒತ್ತಡವಿದೆ. ಶುಕ್ರವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಅಬ್ಬರಿಸುವ ಅವಶ್ಯಕತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಹಾಗೂ ಸೂರ್ಯಕುಮಾರ್ ಯಾದವ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬಲ್ಲರು.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ತಂಡದ ಚಿಂತೆಯನ್ನು ಹೆಚ್ಚಿಸಿವೆ. ಕೃನಾಲ್ ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕಿದೆ. ಇನ್ನು ಶ್ರೀಲಂಕಾದಲ್ಲಿ ಮತ್ತೋರ್ವ ಆಲ್ ರೌಂಡರ್ ಉದಯವಾಗಿದ್ದು, ದೀಪಕ್ ಚಹಾರ್ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡಕ್ಕೆ ನೆವಾಗಬಲ್ಲರು.

ವೇಗದ ಬೌಲಿಂಗ್ ವಿಭಾಗದಲ್ಲಿ ಉಪನಾಯಕ ಭುವನೇಶ್ವರ್ ಕುಮಾರ್ ಶಿಸ್ತು ಬದ್ಧ ದಾಳಿ ಸಂಘಟಿಸಬೇಕಿದೆ. ವೇಗಿ ದೀಪಕ್ ಚಹಾರ್ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ಕಮಾಲ್ ಬೌಲಿಂಗ್ ನಡೆಸಬೇಕಿದೆ. ಯಜುವೇಂದ್ರ ಚಹಾಲ್ ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದರೆ, ಏಕದಿನ ಪಂದ್ಯಗಳಲ್ಲಿ ನೂರು ವಿಕೆಟ್ ಪಡೆಯಬಹುದು.

ಶ್ರೀಲಂಕಾದ ಆರಂಭಿಕರಾದ ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಂಗಳವಾರ ನಡೆದ ಪಂದ್ಯದಲ್ಲಿ ಅವಿಷ್ಕಾ ಫರ್ನಾಂಡೊ, ಚರಿತ್ ಅಸಲಂಕಾ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ಚಮಿಕಾ ಕರುಣರತ್ನ ಕೆಳ ಕ್ರಮಾಂಕದಲ್ಲಿ ಅಬ್ಬರಿಸಬೇಕಿದೆ. ದುಷ್ಮಂತಾ ಚಮೀರಾ, ಇಸುರು ಉದಾನ, ಲಕ್ಷನ್ ಸಂದಕನ್ ಸೇರಿದಂತೆ ಉಳಿದ ಬೌಲರ್ ಗಳು ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ.

ಯುಎನ್ಐ ವಿಎನ್ಎಲ್ 2020