Monday, Sep 20 2021 | Time 08:13 Hrs(IST)
Sports Share

ಶ್ರೀಲಂಕಾಕ್ಕೆ 7 ವಿಕೆಟ್ ಜಯ, ಭಾರತಕ್ಕೆ ಸರಣಿ

ಕೊಲಂಬೊ, ಜು.23 (ಯುಎನ್ಐ)- ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಲಂಕಾ ತಂಡ, ಅಂತು ಗೆಲುವಿನ ಲಯ ಕಂಡಕೊಂಡಿದೆ. ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಗಳಿಂದ ಭಾರತ ತಂಡವನ್ನು ಮಣಿಸಿದ ಆತಿಥೇಯ ಪಡೆ, ಸರಣಿ ಕಳೆದುಕೊಂಡಿದೆ.

ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಪರಿಣಾಮ ನಿಗದಿತ 50 ಓವರ್ ಗಳನ್ನು ಕಡಿತ ಗೊಳಿಸಿ 47 ಓವರ್ ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಶಿಖರ್ ಪಡೆ 43.1 ಓವರ್ ಗಳಲ್ಲಿ 225 ರನ್ ಗಳಿಗೆ ಸರ್ವಪತನ ಕಂಡಿತು. ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ 38 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಸೇರಿಸಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ ಸರಣಿಯನ್ನು ವಶಕ್ಕೆ ಪಡೆದಿದೆ.

ಶ್ರೀಲಂಕಾ ತಂಡದ ಆರಂಭವೂ ಕಳಪೆಯಾಗಿತ್ತು. ಮಿನೊದ ಭಾನುಕ (7) ಕನ್ನಡಿಗ ಕೆ.ಗೌತಮ್ ಎಸೆತದಲ್ಲಿ ಸಕಾರಿಯಾಗಿ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್ ಗೆ ಅವಿಷ್ಕಾ ಫರ್ನಾಂಡೊ, ಭನುಕ ರಾಜಪಕ್ಸೆ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 105 ಎಸೆತಗಳಲ್ಲಿ 109 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ರಾಜಪಕ್ಸೆ 12 ಬೌಂಡರಿ ಸೇರಿದಂತೆ 65 ರನ್ ಬಾರಿಸಿ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು.

ನಾಲ್ಕನೇ ವಿಕೆಟ್ ಗೆ ಅವಿಷ್ಕಾ ಮತ್ತು ಚರಿತ್ ಅಸಲಂಕಾ (24) ಜೋಡಿ 43 ರನ್ ಸೇರಿಸಿತು. ಭರವಸೆಯ ಆಟಗಾರ ಅವಿಷ್ಕಾ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಅಖಿಲ್ ಧನಂಜಯ್ ಹಾಗೂ ರಮೇಶ್ ಮೆಂಡಿಸ್ ಗೆಲುವಿಗೆ ಬೇಕಿದ್ದ ಅಗತ್ಯ ರನ್ ಕಲೆ ಹಾಕಿದರು.

ಭಾರತದ ಪರ ರಾಹುಲ್ ಚಹಾರ್ 3, ಚೇತನ್ ಸಕಾರಿಯ 2 ವಿಕೆಟ್ ಕಬಳಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ತಂಡದ ಆರಂಭ ಕಳಪೆಯಾಗಿತ್ತು. ಶಿಖರ್ ಧವನ್ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್ ಗೆ ಆರಂಭಿಕ ಪೃಥ್ವಿ ಶಾ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಪರಿಣಾಮ ಈ ಜೋಡಿ 74 ರನ್ ಜೊತೆಯಾಟ ನೀಡುವಲ್ಲಿ ಸಫಲವಾಯಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಪೃಥ್ವಿ ಶಾ 49 ರನ್ ಬಾರಿಸಿದ್ದಾಗ ಶನಾಕ ತೋಡಿದ ಖೆಡ್ಡಾಗೆ ಬಲಿಯಾದರು.

ಸಂಜು ಸ್ಯಾಮ್ಸನ್ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಅವರ ಆಸೆಗೆ ಜಯವಿಕ್ರಮ ಬ್ರೇಕ್ ಹಾಕಿದರು. ಸಂಜು 46 ರನ್ ಗಳಿಗೆ ಆಟ ಮುಗಿಸಿದರು. ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ 40 ರನ್ ಗಳಿಸಿದರು.

ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ರನ್ ಗಳು ಬಾರದೆ ಇದ್ದಿದ್ದರಿಂದ ಟೀಮ್ ಇಂಡಿಯಾ 43.1 ಓವರ್ ಗಳಲ್ಲಿ 225 ರನ್ ಗಳಿಗೆ ಸರ್ವಪತನ ಕಂಡಿತು.

ಶ್ರೀಲಂಕಾ ಪರ ಪ್ರವೀಣ್ ಜಯವಿಕ್ರಮ್ ಹಾಗೂ ಅಖಿಲ್ ದನಂಜಯ್ ತಲಾ ಮೂರು ವಿಕೆಟ್ ಕಬಳಿಸಿದರು.

ಐವರ ಪದಾರ್ಪಣೆ

ಟೀಮ್ ಇಂಡಿಯಾದ ಪರ ಚೇತನ ಸಕಾರಿಯಾ, ಕೃಷ್ಣಪ್ಪ ಗೌತಮ್, ನಿತೀಶ್ ರಾಣಾ, ರಾಹುಲ್ ಚಹಾರ್, ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.

ಯುಎನ್ಐ ವಿಎನ್ಎಲ್ 2337