Monday, Sep 20 2021 | Time 07:03 Hrs(IST)
Sports Share

ಕೊನೆಯ ಟಿ-20 ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾಕ್ಕೆ ಸರಣಿ

ಸೆಂಟ್ ಜಾರ್ಜ್, ಜು.4 (ಯುಎನ್ಐ)- ಅನುಭವಿ ಐಡೆನ್ ಮಾರ್ಕ್ರಮ್ ಹಾಗೂ ಕ್ವಿಂಟನ್ ಡಿಕಾಕ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಇಲ್ಲಿ ನಡೆದ ಐದನೇ ಟಿ-20 ಪಂದ್ಯದಲ್ಲಿ 25 ರನ್ ಗಳಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಐದು ಪಂದ್ಯಗಳ ಸರಣಿಯನ್ನು 3-2ರಿಂದ ಗೆದ್ದು ಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ತೆಂಬು ಬವುಮಾ ಖಾತೆ ತೆರೆಯುವ ಮುನ್ನವೆ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್ ಗೆ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಮ್ ಜೋಡಿ ಸಮಯೋಚಿತ ಆಟದ ಪ್ರದರ್ಶನ ನೀಡಿ ಗಮನ ಸೆಳೆಯಿತು.

ತಂಡ ಕಂಡಿದ್ದ ಆರಂಭಿಕ ಆಘಾತವನ್ನು ಮರೆಮಾಚಿದ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಡಿಕಾಕ್ 42 ಎಸೆತಗಳಲ್ಲಿ 60 ರನ್ ಸಿಡಿಸಿದರು. ಐಡೆನ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 70 ರನ್ ಕಲೆ ಹಾಕಿದರು. ಡೇವಿಡ್ ಮುಲ್ಲರ್ (18) ತಂಡದ ಮೊತ್ತ ಹೆಚ್ಚಿಸುವಲ್ಲಿ ಶ್ರಮಿಸಿದರು. ವಿಂಡೀಸ್ ಪರ ಫಿಡೆಲ್ ಎಡ್ವರ್ಡ್ಸ್ ಎರಡು ವಿಕೆಟ್ ಉರುಳಿಸಿದರು.

ವಿಂಡೀಸ್ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಇವಾನ್ ಲೂಯಿಸ್ 5 ಬೌಂಡರಿ, 3 ಸಿಕ್ಸರ್ ಒಳಗೊಂಡಂತೆ 52 ರನ್ ಸಿಡಿಸಿ ಮಿಂಚಿದರು. ಉಳಿದಂತೆ ತಂಡಕ್ಕೆ ಜೊತೆಯಾಟಗಳ ಕೊರತೆ ಕಂಡು ಬಂದಿತು. ಎರಡನೇ ವಿಕೆಟ್ ಗೆ ಕ್ರಿಸ್ ಗೇಲ್ (11) ಹಾಗೂ ಇವಾನ್ ಲೂಯಿಸ್ ಜೋಡಿ 45 ರನ್ ಕಾಣಿಕೆ ನೀಡಿದರೆ, ನಾಲ್ಕನೇ ವಿಕೆಟ್ ಗೆ ಕೀರನ್ ಪೋಲಾರ್ಡ್ (13) ಮತ್ತು ಶಿಮ್ರೋನ್ ಹೆಟ್ಮೆಯರ್ (33) ಜೊತೆಗೂಡಿ 35 ರನ್ ಸೇರಿಸಿದರು. ನಿಕೋಲಸ್ ಪೋರನ್ (20) ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ.

ಆಫ್ರಿಕಾ ತಂಡದ ಪರ ಲುಂಗಿ ಗಿಡಿ 3, ಕಗಿಸೊ ರಬಾಡ ಹಾಗೂ ವಿಯಾನ್ ಮುಲ್ಡರ್ ತಲಾ ಎರಡು ವಿಕೆಟ್ ಕಬಳಿಸಿದರು.

ಯುಎನ್ಐ ವಿಎನ್ಎಲ್ 1747