Wednesday, May 27 2020 | Time 01:57 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Flash Share

‘ವಿಶ್ವ ಮಾನವ ತತ್ವವನ್ನೇ ಮುಂದುವರೆಸಿದ ಎಲ್ಲಾ ಸಮುದಾಯಗಳೂ ಒಕ್ಕಲಿಗ ಸಮುದಾಯಗಳೆ:ಮುಖ್ಯಮಂತ್ರಿ

ನ್ಯೂ ಜರ್ಸಿ,ಜು 05(ಯುಎನ್ಐ) ಕೂಡಿ ಬಾಳುವ ಮನದ ಸಮಾಜದ ನಿರರ್ಥಕತೆಯಿಂದ ಸಾರ್ಥಕತೆಯನ್ನು ಹೆಕ್ಕಿ ತೆಗೆಯುವ ಕೃಷಿಕ ಸಮುದಾಯವೇ ಒಕ್ಕಲಿಗ ಸಮುದಾಯ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನ್ಯೂಜರ್ಸಿಯಲ್ಲಿ ನಡೆದ ವಿಶ್ವ ಒಕ್ಕಲಿಗರ ಪರಿಷತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯೊಂದೇ ಅಲ್ಲ ಶಿಕ್ಷಣ, ಸಾಹಿತ್ಯ, ಸಮಾಜ ವಿಜ್ಞಾನ, ವಿಜ್ಞಾನ, ಯಾವ ಕ್ಷೇತ್ರ ತೆಗೆದುಕೊಂಡರೂ ನಾನು ಮೇಲೆ ಹೇಳಿದ ಎಲ್ಲ ಅರ್ಥಗಳನ್ನೂ ರೂಢಿಸಿಕೊಂಡು ಬಂದವರೆಲ್ಲ ಒಕ್ಕಲಿಗ ಸಮುದಾಯದವರು. ಒಕ್ಕತನ, ಒಕ್ಕಲುತನ, ಒಕ್ಕು ಎನ್ನವುದಕ್ಕೆ ಕೂಡಿ ಬಾಳುವೆ ಮಾಡು, ಬೇಸಾಯಗಾರ-ಬೆಳೆಯಿಂದ ಕಸಕಡ್ಡಿಗಳನ್ನು ಬೇರ್ಪಡಿಸು ಎನ್ನುವ ಅರ್ಥವನ್ನು ರತ್ನಕೋಶ ಹೇಳುತ್ತದೆ ಎಂದರು.

ಇವೆಲ್ಲವೂ ಒಕ್ಕಲಿಗ ಸಮುದಾಯದ ಒಟ್ಟಾರೆ ಆಶಯವನ್ನು ಬಿಂಬಿಸುತ್ತವೆ. ಕೂಡಿ ಬಾಳುವ ಮನದ ಸಮಾಜದ ನಿರರ್ಥಕತೆಯಿಂದ ಸಾರ್ಥಕತೆಯನ್ನು ಹೆಕ್ಕಿ ತೆಗೆಯುವ ಕೃಷಿಕ ಸಮುದಾಯವೇ ಒಕ್ಕಲಿಗ ಸಮುದಾಯ.ಈ ಹಿನ್ನೆಲೆಯಲ್ಲಿ ‘ವಿಶ್ವ ಮಾನವ’ ತತ್ವವನ್ನೇ ವಂಶವಾಹಿಯಾಗಿಸಿಕೊಂಡ ಎಲ್ಲ ಸಮುದಾಯಗಳೂ ಒಕ್ಕಲಿಗ ಸಮುದಾಯಗಳೇ.
ವಿಶ್ವಸಮುದಾಯ ಎಂಬುದೊಂದಿದ್ದರೆ ಅದು ನಿಶ್ಚಯವಾಗಿಯೂ ಒಕ್ಕಲಿಗರದ್ದು ಎಂದು ಅವರು ತಿಳಿಸಿದರು.

ನಮ್ಮ ರಾಷ್ಟ್ರಕವಿ ಕುವೆಂಪು ಅವರು ನಮಗೊಂದು ದಿವ್ಯಮಂತ್ರವನ್ನೇ ಉಪದೇಶಿಸಿದ್ದಾರಲ್ಲ.ಸಿಲುಕದಿರಿ ಮತವೆಂಬ ಮೋಹದಜ್ಞಾನಕೆ
ಮತಿಯಿಂದ ದುಡಿಯಿರೈ ಲೋಕ ಹಿತಕೆ,

ಆ ಮತ, ಈ ಮತದ, ಹಳೇ ಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ

ಓ ಬನ್ನಿ ಸೋದರರೆ ವಿಶ್ವಪಥಕೆ

ಮನುಜ ಮತ-ವಿಶ್ವಪಥ ಎನ್ನುವ ಬೆಳ್ಳಿ ಬೆಳಕದಾರಿ ತುಳಿದಿರುವ ವಿಶ್ವ ಒಕ್ಕಲಿಗರ ಸಮುದಾಯದ ಮುಖವಾಣಿ ಒಕ್ಕಲಿಗರ ಪರಿಷತ್ನ ಮೂಲಕ ಮನುಜ ಮತದಿಂದ ವಿಶ್ವಪಥದ ಕಡೆ ಸಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆ ಎಂದು ಅವರು ಹೇಳಿದರು.
ಕೃಷಿ ಆಧಾರಿತ ನಮ್ಮ ದೇಶದಲ್ಲಿ ಕೃಷಿಕರನ್ನು ಅನೇಕ ಹೆಸರುಗಳಿಂದ ಕರೆದರೂ, ಕರ್ನಾಟಕದಲ್ಲಿ ಮಾತ್ರ ಅವರಿಗೆ ಒಕ್ಕಲಿಗರೆನ್ನುತ್ತಾರೆ. ದೀಪದಂತೆ ಬೆಳಗುವ, ಭ್ರಾತೃ ಭಾವದ ಸೆಲೆಯಾಗಿರುವ , ಸಮಾಜದ ಒಳಿತೆಲ್ಲವನ್ನೂ ಒಗ್ಗೂಡಿಸುವ ಒಕ್ಕಲಿಗ ಸಮುದಾಯದ ಬಹುದೊಡ್ಡ ಪರಂಪರೆ ಕರ್ನಾಟಕದ್ದು. ಗಂಗರಿಂದ ಪ್ರಾರಂಭವಾಗಿ, ಕೆಂಪೇಗೌಡರ ಕಾಲದಿಂದ ಮುನ್ನಡೆದು ಇಂದಿನ ಅತ್ಯುನ್ನತ ಸ್ಥಿತಿ ತಲುಪುವವರೆಗೆ ಒಕ್ಕಲಿಗರ ಹಾದಿ ರೋಚಕವಾದದ್ದು, ಮಾದರಿ ಎನಿಸುವಂತಹುದು ಎಂದು ಇತಿಹಾಸವನ್ನು ಕೆದಕಿದರು
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿದ, ಭೂದೇವಿಯ ಮಕುಟದ ನವಮಣಿಯನ್ನಾಗಿಸಿದೆ ಹಿಂದು, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನವನ್ನಾಗಿಸಿದ ಹಿರಿಮೆ ಗರಿಮೆಗಳು ಒಕ್ಕಲಿಗ ಸಮುದಾಯದ್ದು ಎಂದು ಹೇಳಿದರು.
ಬೆಂಗಳೂರನ್ನು ಯೋಜಿತ ನಗರವಾಗಿ ಕಟ್ಟಿದ ಕೆಂಪೇಗೌಡರಿಂದ ಮೊದಲ್ಗೊಂಡು ಕನ್ನಡ ನೆಲದಿಂದ ಮೂಡಿದ ಮೊದಲ ಪ್ರಧಾನಿ ಎನಿಸಿದ ಹೆಚ್.ಡಿ.ದೇವೇಗೌಡರವರೆಗೆ ಈ ನಾಡನ್ನು ಕಟ್ಟಿದ ಬಹುದೊಡ್ಡ ಪರಂಪರೆಯ ಉದಾಹರಣೆ ನಮ್ಮ ಮುಂದಿದೆ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಐ.ಟಿ.ಪಿ.ಎಲ್, ಮುಂದೆ ಬೆಂಗಳೂರಿನ ಐ.ಟಿ.ಕ್ರಾಂತಿಗೆ ನಾಂದಿ ಹಾಡಿತ್ತು. ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಅವರು ಕೈಗೊಂಡ ಅನೇಕ ನಿರ್ಧಾರಗಳಿಂದು ಫಲ ನೀಡುತ್ತಿವೆ. ಕೃಷ್ಣ ಭಾಗ್ಯ ಜಲ ನಿಗಮದ ಸ್ಥಾಪನೆಯಿಂದ ಕರ್ನಾಟಕದ ಅನೇಕ ನೀರಾವರಿ ಯೋಜನೆಗಳು ಪೂರ್ಣಗೊಂಡು ರೈತರ ಪಾಲಿನ ವರದಾನವಾಗಿದೆ. ಬ್ರಹ್ಮಪುತ್ರ ನದಿಯ ಮೇಲಿನ ಅತಿಉದ್ದದ ಸೇತುವೆಗೆ ಅಡಿಗಲ್ಲು ಹಾಕಿದ ದೇವೇಗೌಡರು, ನಾಡು ಬೆಸೆಯುವ ಸುವರ್ಣ ಚತುಷ್ಪಥ ರಸ್ತೆ ಯೋಜನೆಗೂ ಚಾಲನೆ ನೀಡಿದ್ದರು. ನೀರಾವರಿ ವಲಯದಲ್ಲಿ ಅವರು ಕೈಗೊಂಡ ನಿರ್ಧಾರಗಳು ನಾಡಿನ ಹಸಿರು ಹೊನ್ನನ್ನು ಮತ್ತಷ್ಟು ಶ್ರೀಮಂತಗೊಳಿಸಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಮರಿಸಿದರು.
ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಕರ್ನಾಟಕದ ಅಸ್ಮಿತೆಯನ್ನು ಸ್ಥಾಪಿಸಿದ ಕೆಂಗಲ್ ಹನುಮಂತಯ್ಯ ಅವರೂ ಸೇರಿದಂತೆ ದೇವೇಗೌಡರು ಇರಿಸಿದ ಅಡಿಗಲ್ಲ ಮೇಲೆ ಕಟ್ಟಡ ಕಟ್ಟಿ ಬೆಂಗಳೂರನ್ನು ಐ.ಟಿ. ಕ್ಯಾಪಿಟಲ್ ಮಾಡಿದ ಅನೇಕ ಮಹನೀಯರು ಕನ್ನಡ ನಾಡನ್ನು ಬೆಳೆಸಿದ ರೀತಿ ಅನನ್ಯ.
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ವದೆಲ್ಲೆ ಮೀರಿ,

ನಿರ್ದಿಗಂತವಾಗಿ ಏರಿ

ಓ ನನ್ನ ಚೇತನ

ಆಗು ನೀ ಅನಿಕೇತನ ! ಎಂದು ರಸಋಷಿ, ರಾಷ್ಟ್ರಕವಿ ಕುವೆಂಪು ಅವರು ನೀಡಿದ ಕರೆ, ಯಾರನ್ನು ತಾನೇ ಪ್ರೇರೇಪಿಸದು
ಇದೇ ತತ್ವವನ್ನು ಅಕ್ಷರಶ: ಪಾಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ವೃಕ್ಷ ಬೆಳೆಸಿದ ಆದಿಚುಂಚನಗಿರಿ ಧರ್ಮ ಸಂಸ್ಥಾನದ ಶಿಕ್ಷಣ ಕೈಂಕರ್ಯ ಯಾರಿಗೆ ತಾನೆ ಉತ್ತೇಜನ ನೀಡದು ! ಈ ಬೃಹತ್ ಛತ್ರದಡಿಯಲ್ಲಿ ಟಿಸಿಲೊಡೆದ ಶಿಕ್ಷಣ ಕವಲುಗಳು ಇಂದು ಜಗದ್ವ್ಯಾಪಿ. ಅದರ ಆಯಾಮಗಳು ಬಹುರೂಪಿ. ವಿಶ್ವಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಈ ಧಾರ್ಮಿಕ ಸಂಸ್ಥಾನದ ಶಾಖೆಯೊಂದು ಇಲ್ಲಿ ಪ್ರಾರಂಭವಾಗುತ್ತಿರುವುದು ನನಗಂತೂ ವೈಯಕ್ತಿಕವಾಗಿ ತುಂಬಾ ತೃಪ್ತಿ ನೀಡುವ ವಿಚಾರ ಎಂದು ಚುಂಚನಗಿರಿ ಪೀಠದ ಸಾಮಾಜಿಕ,ಶೈಕ್ಷಣಿಕ ಸಾಧನೆಯನ್ನು ಹೊಗಳಿದರು.
ಇದು ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ, ಇದನ್ನು ದೂರದ ಅಮೆರಿಕೆಯಲ್ಲೂ ಜೀವಂತವಾಗಿರಿಸಿದ, ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯನ್ನು ನಿಜವಾಗಿಸಿದ ನೀವು ನಿಜವಾಗಿಯೂ ಅಭಿನಂದನಾರ್ಹರು. ಕನ್ನಡದ ಮಣ್ಣಲ್ಲಿ ಹುಟ್ಟಿ, ಬದುಕನ್ನರಸುತ್ತಾ ಬಹುದೂರ ಬಂದಿರುವ ನೀವು. ನಿಮ್ಮ ಬೇರುಗಳನ್ನು ಮರೆಯದೆ ಬೆಳೆಯುತ್ತಿರುವುದು ತುಂಬ ಹೃದ್ಯ. ಕನ್ನಡತನ ಎಂದರೆ ಒಂದು ಪ್ರದೇಶದಲ್ಲಿ ಕನ್ನಡ ಮಾತನಾಡುವವರ ಬದುಕಲ್ಲ, ಬರಿಯ ಕನ್ನಡ ಭಾಷೆಯೂ ಅಲ್ಲ. ಅದೊಂದು ಅನನ್ಯ ಜೀವನ ರೀತಿ. ತಾನೂ ಬೆಳೆದು ಇತರರನ್ನೂ ಬೆಳೆಸುವ ಅಪೂರ್ವವಾದೊಂದು ಸಂಸ್ಕೃತಿ ಎಂದು ವರ್ಣಿಸಿದರು.
ಕನ್ನಡಿಗರು ತಮ್ಮ ಸೌಜನ್ಯ ಸಜ್ಜನಿಕೆಗಳಿಂದ ಎಲ್ಲಿಯೂ ಸಲ್ಲ ಬಲ್ಲ ಸಜ್ಜನರು. ಕನ್ನಡ ತನವನ್ನಿಂದು ತಾವೆಲ್ಲ ಸಾಬೀತು ಪಡಿಸಿದ್ದೀರಿ. ಅಬುದಾಭಿಯಾದರೇನು? ಅಮೆರಿಕೆಯಾದರೇನು ? ಸಜ್ಜನಿಕೆಯ ಬದುಕಿನ ಕಂಪು ಹರಡಲು ಸರಳ ಮನವಿದ್ದರೆ ಸಾಲದೇನು ಎಂಬ ಮಾತಿಗೆ ಸಾಕ್ಷಿಯಾಗಿದ್ದೀರಿ ಎಂದು ನ್ಯೂ ಜರ್ಸಿಯಲ್ಲಿರುವ ಕನ್ನಡಿರಗ ಔದಾರ್ಯವನ್ನು ಕೊಂಡಾಡಿದರು.
ತಾಯ್ನೆಲದಿಂದ ಬಹುದೂರವಿರುವ ಅಪರಿಚಿತ ನಾಡು. ಅಲ್ಲಿನ ಸಂಸ್ಕೃತಿಯೇ ಬೇರೆ. ಜನರ ನಡೆನುಡಿಗಳೇ ಬೇರೆ. ಆದರೆ ಇಲ್ಲಿಯೇ ಈ ದೂರದ ನಾಡಿನಲ್ಲಿಯೇ ಬಾಳು ಕಂಡುಕೊಳ್ಳಬೇಕಾದ ಅನಿವಾರ್ಯತೆ. ಹೀಗಿದ್ದರೂ ಬೆಳೆದಿದ್ದೀರಿ. ನಿಮ್ಮೊಂದಿಗೆ ನಿಮ್ಮ ಬದುಕು ಕಟ್ಟಿಕೊಟ್ಟ ದೇಶದ ಬೆಳವಣಿಗೆಗೂ ಕೊಡುಗೆ ನೀಡಿದ್ದೀರಿ. ನಿಮ್ಮದೇ ಆದ ರೀತಿಯಲ್ಲಿ ಎಂದು ಎನ್ಆರ್ ಐಗಳ ಸೇವೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಮರಿಸಿದರು.
ಯುಎನ್ಐ ಎಸ್ಎಂಆರ್ ವಿಎನ್ 2325