Monday, Sep 20 2021 | Time 07:52 Hrs(IST)
Sports Share

“ಅಭಿಮಾನಿಗಳಿಗೆ ಸಂಪೂರ್ಣ ಮನೋರಂಜನೆ”

ಟೋಕಿಯೊ, ಜು.22 (ಯುಎನ್ಐ)- ಅಭಿಮಾನಿಗಳು ಕ್ರೀಡಾಕೂಟದ ಆನಂದವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯಬಹುದು ಎಂದು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುನ್ನಾದಿನದಂದು ಸಂಘಟಕರು ತಿಳಿಸಿದ್ದಾರೆ.

ಟೋಕಿಯೊ 2020 ರ ಅಧ್ಯಕ್ಷ ಸೈಕೊ ಹಶಿಮೊಟೊ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಪ್ರತಿಯೊಬ್ಬರೂ ನಮ್ಮ ಕ್ರೀಡಾಕೂಟವನ್ನು ಆನಂದಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನಾಳೆ ರಾತ್ರಿ ನಾವು ಕ್ರೀಡಾಂಗಣಕ್ಕೆ ಪ್ರವೇಶಿಸಿದಾಗ, ಜನರನ್ನು ಸಂಪರ್ಕಿಸುವ ಕ್ರೀಡೆಯ ಶಕ್ತಿಯನ್ನು ನಾವು ಅನುಭವಿಸುತ್ತೇವೆ. ಜನರು ಆಟಗಳನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಬುಧವಾರ ನಡೆದ ಮಹಿಳಾ ಫುಟ್‌ಬಾಲ್ ಪಂದ್ಯಕ್ಕೆ ಸುಮಾರು 2,000 ಪ್ರೇಕ್ಷಕರು ಸಾಕ್ಷಿಯಾಗಿದ್ದಾರೆ ಎಂದು ಹಶಿಮೊಟೊ ಬಹಿರಂಗಪಡಿಸಿದರು. “ಕೊರೋನಾ ಸಾಂಕ್ರಾಮಿಕದಿಂದಾಗಿ ಟೋಕಿಯೋ ಕ್ರೀಡಾಕೂಟವು ಒಂದು ವರ್ಷ ವಿಳಂಬವಾಗಿದೆ. ಅದಕ್ಕೆ ನನಗೆ ಮಿಶ್ರ ಪ್ರತಿಕ್ರಿಯೆ ಇದೆ. ಈ ಆಟವು ಭರವಸೆಯಿಂದ ತುಂಬಿರುತ್ತದೆ ಮತ್ತು ಜಗತ್ತನ್ನು ಒಂದುಗೂಡಿಸುತ್ತದೆ" ಎಂದು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಟೋಕಿಯೊ 2020 ರ ಅಧ್ಯಕ್ಷರಾಗಿ ನೇಮಕಗೊಂಡ ಹಶಿಮೊಟೊ, "ನನ್ನ ಪಾತ್ರದಲ್ಲಿ ಬದಲಾವಣೆಯ ಹೊರತಾಗಿಯೂ, ಟೋಕಿಯೊ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವುದು ನನ್ನ ದೃಢ ನಿಶ್ಚಯವಾಗಿದೆ. ನಾವು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಯಶಸ್ಸನ್ನು ಸಾಧಿಸಲು ಬಯಸುತ್ತೇವೆ. ಟೋಕಿಯೊ ಕ್ರೀಡಾಕೂಟವು ವೈವಿಧ್ಯತೆ ಮತ್ತು ಸಾಮರಸ್ಯದ ಸಂದೇಶವನ್ನು ನೀಡಬಲ್ಲದು. ಅದು ಕ್ರೀಡೆಯ ಮೌಲ್ಯ ಮತ್ತು ಪಾತ್ರ ಈ ಸಂದೇಶವನ್ನು ಹರಡಲು ಬಯಸುತ್ತೇವೆ" ಎಂದು ಹೇಳಿದ್ದಾರೆ.

ಯುಎನ್ಐ ವಿಎನ್ಎಲ್ 2040