Sunday, Oct 24 2021 | Time 01:32 Hrs(IST)
Special Share

2024ರಲ್ಲೂ ಮೋದಿ ಯೇ ಪ್ರಧಾನಿ ಅಭ್ಯರ್ಥಿ: ಜೆಡಿ(ಯು)

ಪಾಟ್ನಾ, ಆಗಸ್ಟ್‌ 30 (ಯುಎನ್‌ ಐ) 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಜನತಾದಳ (ಸಂಯುಕ್ತ) ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ದೇಶದ ಪ್ರಧಾನ ಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೊಂದಿದ್ದಾರೆ ಎಂದು ತ್ಯಾಗಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಸಂಬಂಧ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, 2024 ರ ಚುನಾವಣೆಯಲ್ಲಿ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು.
"ನಿತೀಶ್ ಕುಮಾರ್ ಪ್ರಧಾನ ಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯಲ್ಲ, ಜೆಡಿ(ಯು) ಎನ್‌ಡಿಎ ಮೈತ್ರಿಕೂಟದ ಅತ್ಯಂತ ವಿಶ್ವಾಸಾರ್ಹ ಮೈತ್ರಿ ಪಕ್ಷ. ನಮ್ಮ ಮೈತ್ರಿಕೂಟದ ನಾಯಕ ನರೇಂದ್ರ ಮೋದಿ. ಆದರೆ, ಅವರು (ನಿತೀಶ್) ಖಂಡಿತವಾಗಿಯೂ ದೇಶದ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ”ಎಂದು ಪಾಟ್ನಾದಲ್ಲಿ ಇತ್ತೀಚೆಗೆ ನಡೆದ ಜೆಡಿ(ಯು) ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಹೇಳಿದ್ದರು. ತಾವು ಎನ್‌ ಡಿ ಎ ನಲ್ಲಿದ್ದೇವೆ. ಮೈತ್ರಿ ಕೂಟಕ್ಕೆ ಖಂಡಿತವಾಗಿಯೂ ನಮ್ಮ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ. ಮೈತ್ರಿಕೂಟ ಪಕ್ಷಗಳ ವಿವಿಧ ಸಮಸ್ಯೆ ಪರಿಹರಿಸಲು ರಚಿಸಲಾಗಿರುವ ಸಮನ್ವಯ ಸಮಿತಿಯನ್ನು ತಾವು ಸ್ವಾಗತಿಸುವುದಾಗಿ, ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಸಮನ್ವಯ ಸಮಿತಿಯ ರಚನೆಯ ನಂತರ ಬಹಳಷ್ಟು ಕಾರ್ಯಗಳು ಸುಗಮವಾಗಿ ನಡೆದಿದ್ದವು ಎಂದು ಹೇಳಿದರು. ಸಮನ್ವಯ ಸಮಿತಿಯನ್ನು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದರೆ ನಾವು ಸಂತಸ ವ್ಯಕ್ತಪಡಿಸುವುದಾಗಿ ಹೇಳಿದರು. 2022 ರ ಉತ್ತರ ಪ್ರದೇಶ, ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿ(ಯು ) ಸ್ಪರ್ಧಿಸಲಿದೆ. ಬಿಜೆಪಿ ಜೊತೆ ಮೈತ್ರಿಗೆ ಆದ್ಯತೆ ನೀಡಲಿದೆ. ಮೈತ್ರಿ ಸಾಧ್ಯವಾಗದಿದ್ದರೆ ಏಕಾಂಗಿಯಾಗಿ ಕಣಕ್ಕೆ ಇಳಿಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ತ್ಯಾಗಿ ಉತ್ತರಿಸಿದರು.
ಯುಎನ್‌ ಐ ಕೆವಿಆರ್‌ 1546