Sunday, Aug 18 2019 | Time 04:57 Hrs(IST)
Karnataka Share

ಕುಂದಗೋಳ ಗೆದ್ದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ; ಚಿಕ್ಕನಗೌಡ

ಕುಂದಗೋಳ ಗೆದ್ದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ; ಚಿಕ್ಕನಗೌಡ
ಕುಂದಗೋಳ ಗೆದ್ದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ; ಚಿಕ್ಕನಗೌಡ

ವಿಶೇಷ ಸಂದರ್ಶನ : ರಾಚಪ್ಪ ಸುತ್ತೂರು

ಹುಬ್ಬಳ್ಳಿ,ಮೇ 15(ಯುಎನ್ಐ) ಕುಂದಗೋಳ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ "ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳನ್ನು ಗೆದ್ದು ಅಧಿಕಾರ ಮುಂದುವರೆಸುವ ಉದ್ದೇಶ ಮೈತ್ರಿ ಸರ್ಕಾರದ್ದು, ಅಂತೆಯೆ ಎರಡೂ ಕ್ಷೇತ್ರಗಳನ್ನು ಗೆದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಕಮಲ ಪಕ್ಷ ತನ್ನೆಲ್ಲಾ ಶಕ್ತಿ ಸಾಮರ್ಥ್ಯವನ್ನು ಈ ಕ್ಷೇತ್ರದಲ್ಲಿ ಇನ್ನಿಲ್ಲದಂತೆ ಪ್ರಯೋಗಿಸುತ್ತಿದೆ" ಕ್ಷೇತ್ರದಲ್ಲಿನ ಚುನಾವಣಾ ರಣಕಣದ ಬಗ್ಗೆ ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ ಚಿಕ್ಕನ ಗೌಡರ್ ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದ ಸಾರ ಇಲ್ಲಿದೆ.

* ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ಹೇಗೆ ನಡೆಯುತ್ತಿದೆ. ಚುನಾವಣಾ ಹವಾ ಎತ್ತ ಸಾಗಿದೆ ?

ಕುಂದಗೋಳ ಮತ ಕ್ಷೇತ್ರದಲ್ಲಿ ಪ್ರತೀ ದಿನ 8 ರಿಂದ 10 ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಪ್ರಮುಖ ನಾಯಕರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ತಮ್ಮನ್ನು ಗೆಲ್ಲಿಸಲು ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಜನತೆಯೂ ನಮ್ಮ ಬಗ್ಗೆ ವಿಶ್ವಾವಿಟ್ಟು ಗೆಲ್ಲಿಸುತ್ತಾರೆಂಬ ಭರವಸೆ ಇದೆ.

* ಈ ಬಾರಿಯ ಚುನಾವಣೆಯಲ್ಲಿ ಅನುಕಂಪ ಮತಗಳನ್ನು ಎರಡೂ ಪಕ್ಷಗಳ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಚಿಕ್ಕನಗೌಡರು ಮತಯಾಚಿಸುತ್ತಿರುವ ಮರ್ಮವೇನು ?

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರಿಗೆ ಕ್ಷೇತ್ರದಲ್ಲಿ ಅನುಕಂಪ ಕಂಡು ಬರುತ್ತಿದೆ. ಆದರೆ ಅದಕ್ಕಿಂತಲೂ 10 ಪಟ್ಟು ಹೆಚ್ಚಿನ ಅನುಕಂಪ ಚಿಕ್ಕನಗೌಡರ ಬಗ್ಗೆ ಇದೆ. ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಯಾರನ್ನಾದರೂ ಕಳೆದುಕೊಂಡಿರುತ್ತಾರೆ. ಹೀಗಾಗಿ ಅನುಕಂಪ 5 ದಿನ, 10 ದಿನಗಳಲ್ಲಿ ಇರಬಹುದು. ಆದರೂ ಇದು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭಾವನೆ ತಮ್ಮದು. ಮೂರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದೇನೆ. ಸಿ.ಎಸ್.ಶಿವಳ್ಳಿ ಸಹ ಮೂರು ಸರ್ತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೂ ಅಭಿವೃದ್ದಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಚಿಕ್ಕನಗೌಡ ಕಳೆದ ಬಾರಿ 634 ಮತಗಳಿಂದ ಸೋತಿದ್ದಾನೆ. 2013 ರಲ್ಲಿ ಕೆಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾನೆ. ಹೀಗಾಗಿ ಕ್ಷೇತ್ರದ ಜನತೆ ಚಿಕ್ಕನಗೌಡರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ

*ಚಿಕ್ಕನಗೌಡರನ್ನು ಗೆಲ್ಲಿಸಿದರೆ ಕ್ಷೇತ್ರದಲ್ಲಿ ಮುಂದೆ ಅವರೇ ಅಭ್ಯರ್ಥಿ ಆಗಲಿದ್ದಾರೆ. ಅವರನ್ನು ಸೋಲಿಸಿದರೆ ನಮಗೆ ಟಿಕೆಟ್ ಖಚಿತ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರು ನಿಮ್ಮ ವಿರುದ್ದ ಕೆಲಸ ಮಾಡುತ್ತಿದ್ದಾರಲ್ಲ?

ಇದು ಸತ್ಯಕ್ಕೆ ದೂರವಾದ ಮಾತು ಇದು. ಇದು ನನ್ನ ರಾಜಕೀಯ ಜೀವನದಲ್ಲಿ ಕೊನೆಯ ಚುನಾವಣೆ. ಮಧ್ಯಂತರ ಚುನಾವಣೆ ಬಂದಿರುವುದರಿಂದಾಗಿ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಅದಕ್ಕಾಗಿ ಟಿಕೆಟ್ ಕೊಟ್ಟಿದ್ದಾರೆ. ಒಂದು ವೇಳೆ ಉಪ ಚುನಾವಣೆ ನಡೆಯದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ದಿಸುವುದಿಲ್ಲ. ತಮಗೀಗ 67 ವರ್ಷ ತುಂಬಿದೆ. ಉಳಿದ ಅವಧಿ ಸೇರಿದರೆ ತಮಗೆ 72-73 ವರ್ಷ ವಯಸ್ಸಾಗಲಿದೆ. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಅದಕ್ಕಾಗಿ ಬೇರೆಯವರಿಗೆ ಟಿಕೆಟ್ ನೀಡಿ ಎಂದು ನಾನೇ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದೇನೆ. ನಮ್ಮ ಕುಟುಂಬದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರಿಗಾದರೂ ಅಥವಾ ಯಾರಿಗಾದರೂ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ತಮ್ಮದು.

* ಈ ಚುನಾವಣೆಯಲ್ಲಿ ಅಭಿವೃದ್ದಿ ವಿಚಾರ ಚರ್ಚೆಯಾಗದೆ ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅದ್ಯತೆ ಸಿಕ್ಕಿದೆ ಏಕೆ.?

ಚಿಕ್ಕನಗೌಡರ ಅಂತಲ್ಲಾ ರಾಜಕೀಯ ಕ್ಷೇತ್ರದಲ್ಲಿದ್ದಾಗ ಟೀಕೆ, ಟಿಪ್ಪಣಿಗಳು ಸಹಜ. ಸಹಿಸಲಾರದವರು ಟೀಕೆಗಳನ್ನು ಮಾಡುತ್ತಾರೆ. ಆದರೆ ವೈಯಕ್ತಿಕ ಇರಲಿ, ಪಕ್ಷದ ಬಗ್ಗೆ ಇರಲಿ ವಿಪಕ್ಷದವರು, ಸ್ವಪಕ್ಷದವರು ಟೀಕೆ ವ್ಯಕ್ತಪಡಿಸಿದಾಗ ಸ್ವಾಗತಿಸಬೇಕು. ಆಗ ಮಾತ್ರ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಲು ಅನುಕೂಲವಾಗಲಿದೆ.

* ಹೊಂದಾಣಿಕೆ ರಾಜಕಾರಣ ಮಾಡಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿದೆ. ಹಿಂದೆ ಸಿ.ಎಸ್.ಶಿವಳ್ಳಿ ಹೊಂದಾಣಿಕೆ ರಾಜಕಾರಣದ ಮೂಲಕವೇ ಆಯ್ಕೆಯಾಗುತ್ತಿದ್ದರು. ನಿಮ್ಮಲ್ಲಿ ಯಾಕೆ ಹೊಂದಾಣಿಕೆ ಗುಣವಿಲ್ಲ ?

ಕ್ಷೇತ್ರದಲ್ಲಿ 6 ಚುನಾವಣೆಯನ್ನು ನಾನು ನಡೆಸಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 3 ಭಾರಿ ಸೋತಿದ್ದೇನೆ. ಆದರೆ ಎಂದೂ ಹೊಂದಾಣಿಕೆ ರಾಜಕಾರಣ ಮಾಡಿದವನಲ್ಲ. ಮುಂದೆ ಹೊಂದಾಣಿಕೆ ರಾಜಕಾರಣ ಮಾಡುವ ಅಗತ್ಯವೂ ತಮಗಿಲ್ಲ

* ಚಿಕ್ಕನಗೌಡರಿಗೆ ಮತ ನೀಡಿ ಎನ್ನುವ ಬದಲ ಯಡಿಯೂರಪ್ಪ ಅವರ ಮುಖ ನೋಡಿ ಮತ ನೀಡಿ ಎನ್ನುತ್ತಿದ್ದೀರಿ. ಸೋಲಿನ ಭೀತಿಯಿಂದಲೋ ಅಥವಾ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಈ ಚುನಾವಣೆ ಅನಿವಾರ್ಯ ಎಂಬ ಕಾರಣಕ್ಕೋ?

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತಿಕ್ಕಾಟದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ನನ್ನಂತಹ ಕೆಲ ಅಭ್ಯರ್ಥಿಗಳು 500 ರಿಂದ 1000 ಮತಗಳ ಅಂತರದಿಂದ 15 ರಿಂದ 20 ಜನ ಕಳೆದ ಚುನಾವಣೆಯಲ್ಲಿ ಸೋತಿದ್ದೇವೆ. ಹೀಗಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆರಿಸಿ ಬಂದು ಯಡಿಯೂರಪ್ಪ ಅವರ ಕೈ ಬಲಪಡಿಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಕ್ಷೇತ್ರದಲ್ಲಿನ ಜನರು ಸ್ವಯಂ ಪ್ರೇರಿತರಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಚಿಕ್ಕನಗೌಡರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ.

* ಚಿಕ್ಕನಗೌಡರನ್ನು ಗೆಲ್ಲಿಸುವ ಅನಿವಾರ್ಯತೆ ಎಂಬುದೇ ನಿಮ್ಮೆಲ್ಲಾ ನಾಯಕರ ಗುರಿಯಾಗಿದೆ ಏಕೆ. ಬಿಜೆಪಿ ಸರ್ಕಾರ ರಚನೆಗೆ ಚಿಕ್ಕನಗೌಡ ಆಯ್ಕೆಯಿಂದ ಮಾತ್ರ ಸಾಧ್ಯವೆ?.

ಚಿಕ್ಕನಗೌಡರು ಮಾಡಿರುವ ಅಭಿವೃದ್ದಿ ಕೆಲಸದ ಬಗ್ಗೆ ಕ್ಷೇತ್ರದ ಮತದಾರರು, ಯುವಕರು,ಮಹಿಳೆಯರು , ಹಿಂದುಳಿದ ವರ್ಗಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಇಡೀ ದೇಶವೇ ಮೆಚ್ಚುವಂತಹ ನಾಯಕರಾಗಿದ್ದಾರೆ. ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ನೀಡಿರುವ ಅಭಿವೃದ್ದಿ ಕೆಲಸಗಳು, ರೈತರು, ಶ್ರಮಿಕರು, ಮಹಿಳೆಯರು ಎಲ್ಲಾ ಸಮುದಾಯಗಳಿಗೆ ನೀಡಿದ ಕೊಡುಗೆ ಗಮನಿಸಿ ಚಿಕ್ಕನಗೌಡರನ್ನು ಆಯ್ಕೆ ಮಾಡಲು ಜನ ತೀರ್ಮಾನಿಸಿದ್ದಾರೆ. ನಾನೂ ಸಹ ರೈತನ ಮಗನಾಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ಬಿಜೆಪಿ ಸರ್ಕಾರ ರಚನೆ ಅನಿವಾರ್ಯ ಎಂಬುದು ಜನರ ತೀರ್ಮಾನವಾಗಿದೆ. ನಾನು ಗೆದ್ದೇ ಗೆಲ್ಲುತ್ತೇನೆ.

* ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿ ಹಾಗು ಕುಂದಗೋಳ ಎರಡೂ ಕ್ಷೇತ್ರಗಳು ಮೂಲತಃ ಕಾಂಗ್ರೆಸ್ ಕ್ಷೇತ್ರಗಳು. ನಿಮ್ಮ ಪ್ರಕಾರ ಮತದಾರರು ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಏಕೆ ಆಯ್ಕೆಮಾಡಬೇಕು.?

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಜನಪರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ದೇಶದಕ್ಕೆ ಮೋದಿ ರಾಜ್ಯಕ್ಕೆ ಯಡಿಯೂರಪ್ಪ ಎಂಬುದು ಜನಜನಿತವಾಗಿದೆ. ಮೂಲತಃ ಹುಬ್ಬಳ್ಳಿ ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ವೇಳೆ ನಡೆದಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಸಹಕಾರಿಯಾಗಲಿವೆ. ರಾಜ್ಯದಲ್ಲಿ ಸಮ್ರಿಶ್ರ ಸರ್ಕಾರದ ನಡವಳಿಕೆಗಳು,ಮೈತ್ರಿ ನಾಯಕರ ಕಿತ್ತಾಟದಿಂದಾಗಿ ಬೇಸತ್ತಿರುವ ಜನ ಬದಲಾವಣೆ ಬಯಸಿದ್ದಾರೆ.

* ಕಾಂಗ್ರೆಸ್ ಕುಂದಗೋಳಕ್ಕೆ ಉಸ್ತುವಾರಿ ನೀಡಿ ಕ್ಷೇತ್ರವನ್ನು ಗೆಲ್ಲಲು ತಂತ್ರ ರೂಪಿಸಿದೆ. ಕಾರ್ಯಕರ್ತರನ್ನು ,ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯತಂತ್ರ ಇಲ್ಲಿ ಫಲಿಸಲಿದೆಯಾ..?



ಡಿ.ಕೆ.ಶಿವಕುಮಾರ್ ಉಸ್ತುವಾರಿಯಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಪಕ್ಷದ ಸ್ಥಳೀಯ ನಾಯಕರು ಉಸ್ತುವಾರಿ ಬಗ್ಗೆ ಬೇಸರ ಹೊಂದಿದ್ದಾರೆ. ಹೊರಗಿನವರನ್ನು ಉಸ್ತುವಾರಿ ನೀಡುವ ಮೂಲಕ ಸ್ಥಳೀಯರಿಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ಮಾಡುತ್ತಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಆಟ ಗಂಡುಮೆಟ್ಟಿದ ನಾಡಿನಲ್ಲಿ ನಡೆಯುವುದಿಲ್ಲ. ಅವರ ಪ್ರಯತ್ನ, ತಂತ್ರಗಾರಿಕೆ ಮೈಸೂರು - ಬೆಂಗಳೂರಿಗೆ ಸೀಮಿತವಾಗಿದೆ. ಡಿ.ಕೆ ಶಿವಕುಮಾರ್ ಗೆ ಸ್ಥಳೀಯವಾಗಿ ವಿನಯ್ ಕುಲಕರ್ಣಿ ಹೊರತು ಪಡಿಸಿ ಉಳಿದೆಲ್ಲ ನಾಯಕರು ಹೊರಗಿನವರು. ಹಣವನ್ನು ಹಂಚಿ ಅಧಿಕಾರವನ್ನು ಪಡೆಯುವ ಪ್ರಯತ್ನ ನಡೆಸಬಹುದು.ಆದರೆ ಜನರು ಹಣಕ್ಕೆ ಮಾರು ಹೋಗುವುದಿಲ್ಲ.

* ಈ ಚುನಾವಣೆಯಲ್ಲಿ ಹಣ ಮತ್ತು ಜಾತಿ ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿದೆಯೇ ?

ಮೈತ್ರಿ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಖರ್ಚು ಮಾಡಿ, ಸರ್ಕಾರಿ ಯಂತ್ರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸುವುದರಲ್ಲಿ ನಿಸ್ಸೀಮರು. ಆದರೆ ಕ್ಷೇತ್ರದ ಜನತೆ ಅದಕ್ಕೆ ಮನ್ನಣೆ ನೀಡುವುದಿಲ್ಲ.

* ಬಿಜೆಪಿ ಜಾತಿ ಮತ್ತು ಸಮುದಾಯದ ಮೇಲೆ ರಾಜಕೀಯ ನಡೆಸುತ್ತಿದ್ದಾರೆ ಎಂಬ ಆರೋಪ ಇದೆಯಲ್ಲ ?

ಕ್ಷೇತ್ರದಲ್ಲಿ ಅಹಿಂದ ಮತಗಳಂತೆಯೆ ಇತರ ಸಮುದಾಯಗಳ ಮತದಾರರು ಇದ್ದಾರೆ.ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ತಮಗೆ 60 ಸಾವಿರ ಮತಗಳು ಬಂದಿದೆ., ಸಿ.ಎಸ್.ಶಿವಳ್ಳಿ ಅವರಿಗೆ 60 ಸಾವಿರ ಮತಗಳು ಬಂದಿದೆ. ಹೀಗಾಗಿ ರಾಜಕೀಯಕ್ಕಾಗಿ ಜಾತಿ ರಾಜಕಾರಣ ತಂದರೂ ಕ್ಷೇತ್ರದಲ್ಲಿ ನಡೆಯುವುದಿಲ್ಲ.

* ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗುತ್ತವೆಯೋ ಅಥವಾ ಅದು ನಷ್ಟವಾಗುತ್ತವೆಯೋ?

ಕ್ಷೇತ್ರದಲ್ಲಿ ಜುಟ್ಟಲ್, ಪಿಸಿ ಸಿದ್ದನಗೌಡರು, ಶಿವಾನಂದ ಬೆಂತೂರು ಸೇರಿದಂತೆ ಹತ್ತಾರು ಪ್ರಮುಖ ನಾಯಕರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೆಲ್ಲರೂ ಪಕ್ಷದ ನಾಯಕರ ವಿರುದ್ದ ನಿಂತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದವಾಗಿ ಕಾಂಗ್ರೆಸ್ ನಾಯಕರೇ ನಮಗೆ ಅನುಕೂಲವಾಗಲಿದ್ದಾರೆ.

ಯುಎನ್ಐ ಎಂಎಸ್ಆರ್ ವಿಎನ್ 2106