Saturday, May 25 2019 | Time 05:21 Hrs(IST)
Karnataka Share

ಮೈತ್ರಿ ಆಡಳಿತ ಉರುಳಿದರೆ ಬಿಜೆಪಿಯಿಂದ ಸರ್ಕಾರ ರಚನೆಗೆ ಹೆಜ್ಜೆ: ಯಡಿಯೂರಪ್ಪ

ಮೈತ್ರಿ ಆಡಳಿತ ಉರುಳಿದರೆ ಬಿಜೆಪಿಯಿಂದ ಸರ್ಕಾರ ರಚನೆಗೆ ಹೆಜ್ಜೆ: ಯಡಿಯೂರಪ್ಪ
ಮೈತ್ರಿ ಆಡಳಿತ ಉರುಳಿದರೆ ಬಿಜೆಪಿಯಿಂದ ಸರ್ಕಾರ ರಚನೆಗೆ ಹೆಜ್ಜೆ: ಯಡಿಯೂರಪ್ಪ

ತಾಂಡೂರು(ತೆಲಂಗಾಣ)/ಚಿಂಚೋಳಿ, ಮೇ 15 [ಯುಎನ್ಐ] ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದರೆ ಹೊಸ ಸರ್ಕಾರ ರಚನೆಗೆ ನಾವು ಮುಂದಡಿ ಇಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ

ಕುಮಾರ ಸ್ವಾಮಿ ಅವರಿವರ ಮೂಗಿಗೆ ತುಪ್ಪ ಸವರುವುದನ್ನು ಬಿಟ್ಟು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರಿಗೆ ದಲಿತ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸಹ ಸವಾಲು ಹಾಕಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಕಾಂಗ್ರೆಸ್ ನ ಬಹುತೇಕ ಎಲ್ಲಾ ಮುಖಂಡರು ಸೋಲನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಮಲ್ಲಿಕಾರ್ಜುನ ಖರ್ಗೆ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಇದು ಕೇವಲ ಮೂಗಿಗೆ ತುಪ್ಪ ಸುರಿಯುವಂತಹ ಹೇಳಿಕೆ. ಒಂದು ವೇಳೆ ಖರ್ಗೆ ಅವರ ಬಗ್ಗೆ ಕಳಕಳಿ ಇದ್ದಿದ್ದೇ ಆದಲ್ಲಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ. ಇದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಕನಸು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೆಂದು ನಾವೇನೂ ಸನ್ಯಾಸಿಗಳಲ್ಲ. ಒಂದು ವೇಳೆ ಸರ್ಕಾರ ಬಿದ್ದರೆ ಹೊಸ ಸರ್ಕಾರ ರಚನೆಯ ಕೆಲಸಕ್ಕೆ ಹೆಜ್ಜೆ ಇಡುತ್ತೇವೆ. ಆದರೆ, ಸರ್ಕಾರದ ಪತನಕ್ಕೆ ನಾವು ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದು, ತಾಂಡೂರಿಗೆ ವಲಸೆ ಬಂದಿರುವ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗಳಿಗೆ ಯಾವುದೇ ಕಿಮ್ಮತ್ತಿಲ್ಲ. ಗಡಿಭಾಗದ ಜನರ ಸಮಸ್ಯೆ ಪರಿಹಾರಕ್ಕೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಚುನಾವಣೆ ನಂತರ ವೀರಶೈವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ತೆಲಂಗಾಣ ಲಿಂಗಾಯತ ಸಮುದಾಯದಿಂದ ಪೂರ್ಣಕುಂಭ ಸ್ವಾಗತವನ್ನು ಯಡಿಯೂರಪ್ಪ ಅವರಿಗೆ ಕೋರಲಾಯಿತು ಮತ್ತು ಸಮುದಾಯದ ಸಭೆಯಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಬಿ.ಜಿ.ಪಾಟೀಲ್, ಶಶಿಲ್ ಜಿ.ನಮೋಶಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಮತ್ತೊಂದೆಡೆ, ಬಿ.ಎಸ್.ಯಡಿಯೂರಪ್ಪ ಅವರು ಚಿಂಚೋಳಿಯಲ್ಲಿ ಬಿಜೆಪಿ ಅಧ್ಯರ್ಥಿ ಅವಿನಾಶ್ ಪರ ಮಿಂಚಿನ ಪ್ರಚಾರ ನಡೆಸಿದರು.ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಜಾರಿಗೆ ತರಲಾಗಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಹಾಲಿ ಇರುವ ಸಮ್ಮಿಶ್ರ ಸರ್ಕಾರ ಕೈಬಿಟ್ಟಿದೆ ಎಂದು ಕಿಡಿಕಾರಿದರು.

ಮತ್ತೆ ನಮ್ಮ ಸರ್ಕಾರ ಬಂದರೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಹಿಂದೆ ನಮ್ಮ ಸರ್ಕಾರ ರೈತರಿಗೆಂದೇ ಪ್ರತ್ಯೇಕ ಬಜೆಟ್ ಮಾಡಿತ್ತು. ಬಂಜಾರ ನಿಗಮವನ್ನು ಸ್ಥಾಪಿಸುವ ಮೂಲಕ ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಂಡಿತ್ತು. ಆದರೆ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಹೆಸರಲ್ಲಿ ಈ ಸಮುದಾಯಕ್ಕೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಸರ್ಕಾರ ಸತ್ತು ಹೋಗಿದೆ. ಈ ಸರ್ಕಾರಕ್ಕೆ ಬಡವರ, ದೀನ ದಲಿತರ, ಬರಪೀಡಿತ ಪ್ರದೇಶಗಳ ಜನರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅವಧಿಯಲ್ಲಿ ಆಡಳಿತ ನೆಲ ಕಚ್ಚಿದೆ ಎಂದು ಆರೋಪಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಸದ್ಯದಲ್ಲೇ ರಾಜಕೀಯ ಧೃವೀಕರಣವಾಗಲಿದೆ ಎಂದು ಭವಿಷ್ಯ ನುಡಿದರು.

ಈಗಿರುವ ಸರ್ಕಾರ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಭಾಗದಲ್ಲಿ ಒಂದು ವರ್ಷದೊಳಗೆ ಸಕ್ಕರೆ ಕಾರ್ಖಾನೆ ಆರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತೆಲುಗು ಖ್ಯಾತ ನಟ ಬಾಬು ಮೋಹನ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಅವಿನಾಶ್ ಅವರು ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಯುವಕರಿಗೆ ಆದ್ಯತೆ ನೀಡುವಂತಹ ವ್ಯಕ್ತಿತ್ವವುಳ್ಳ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಈ ರಾಜ್ಯಕ್ಕೆ ಯಡಿಯೂರಪ್ಪ ಮತ್ತು ದೇಶಕ್ಕೆ ಮೋದಿ ಅವರ ಅಗತ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲಾ ಕಡೆ ಮೋದಿ ಅವರ ಅಲೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮೋಹನ್ ಬಾಬು ಹೇಳಿದರು.

ಪಾಕಿಸ್ತಾನವು ಯಾವಾಗಲೂ ಭಾರತಕ್ಕೆ ಅಡ್ಡಿ ಮಾಡುತ್ತಲೇ ಇದೆ. ಕಳ್ಳತನದಿಂದ ನುಸುಳಿ ನಮ್ಮ 40 ಸೈನಿಕರನ್ನು ಕೊಂದಿದೆ. ಇದಕ್ಕೆ ಪ್ರತಿಕಾರವಾಗಿ ನಮ್ಮ ಮೋದಿಯವರ ಸೈನ್ಯ ಪಾಕಿಸ್ತಾನದೊಳಕ್ಕೇ ನುಗ್ಗಿ 400 ಜನರನ್ನು ಕೊಂದು ಹಾಕುವ ಧೈರ್ಯ ತೋರಿದೆ ಎಂದರು.

ಈ ಹಿಂದೆ ಟಿಡಿಪಿಯಲ್ಲಿದ್ದ ತಾವು ಇದೀಗ ಬಿಜೆಪಿ ಸೇರಿದ್ದು, ಟಿಡಿಪಿ ಮತ್ತು ಟಿಆರ್ಎಡಸ್ ಪಕ್ಷಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿವೆಯೇ ಹೊರತು ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಭವಿಷ್ಯ ನುಡಿದರು.

ಬಾಬು ಮೋಹನ್ ಅವರು ಭಾಷಣದ ಮಧ್ಯೆ ಮಧ್ಯೆ ಸಿನಿಮಾ ಡೈಲಾಗ್ ಗಳನ್ನು ಹೇಳುವ ಮೂಲಕ ಜನರನ್ನು ರಂಜಿಸಿದರು. ಯಡಿಯೂರಪ್ಪ ಮಾಜಿ ಅಲ್ಲ, ಅವರು ಯಾವಾಗಲೂ ಮುಖ್ಯಮಂತ್ರಿಯೇ ಎಂದು ಸಿನಿಮಾ ಸ್ಟೈಲ್ ನಲ್ಲಿಯೇ ಹೇಳುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಬಡತನದ ಬೇಗೆಯಿಂದ ಬೇಯುತ್ತಿರುವ ಚಿಂಚೋಳಿ ತಾಲೂಕನ್ನು ಮಾದರಿಯನ್ನಾಗಿ ಮಾಡಲು ಇದನ್ನು ನಾವು ದತ್ತು ಪಡೆಯುತ್ತೇವೆ. ಇದೊಂದು ಯುದ್ಧ. ವಿಧಿಯ ನಿಯಮದಂತೆ ಬದಲಾವಣೆ ಪರ್ವ ನಡೆಯುತ್ತಿದೆ ಎಂದು ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾರ್ಮಿಕವಾಗಿ ನುಡಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಾಪದ ಹಣ ಹಂಚುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಈ ಚಿಂಚೋಳಿಯ ಒಂದೊಂದು ಮತದ ಮೌಲ್ಯ ಕೋಟಿ ರೂಪಾಯಿಗೂ ಮಿಗಿಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧತೆಯನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ಸೋಮಣ್ಣ ಮನವಿ ಮಾಡಿದರು.

ಉಮೇಶ್ ಜಾಧವ್ ಮಾತನಾಡಿ, ಇದೊಂದು ಐತಿಹಾಸಿಕ ಚುನಾವಣೆಯಾಗಿದೆ. ಇಷ್ಟು ದಿನ ಮತದಾರರ ಮನೆ ಬಾಗಿಲಿಗೆ ಬಾರದ ಕಾಂಗ್ರೆಸ್ ಪಕ್ಷ ಈ ಬಾರಿ ಸೋಲಿನ ಭೀತಿಯಿಂದ ಮನೆ ಬಾಗಿಲಿಗೆ ಎಡತಾಕುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಲ್ಲದ ಸರದಾರ ಎನ್ನುತ್ತಾರೆ. ಆದರೆ, ಅವರು ಈ ಹಣೆಪಟ್ಟಿ ಹೊತ್ತು ತಿರುಗಾಡಿದ್ದಾರೆಯೇ ಹೊರತು ಮಾಡಿರುವ ಅಭಿವೃದ್ಧಿ ಕೆಲಸವಾದರೂ ಏನು? ಈ ಹಿನ್ನೆಲೆಯಲ್ಲಿ ಸೋಲಿಲ್ಲದ ಸರದಾರ ಎಂಬ ಮಾತನ್ನು ಈ ಬಾರಿ ಸುಳ್ಳು ಮಾಡುತ್ತೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಇಷ್ಟು ದಿನ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆಲ್ಲುತ್ತಾ ಬಂದಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿನ ಚುನಾವಣೆಯನ್ನು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದ ಜಾಧವ್, ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆಯವರು ಇದುವರೆಗೆ ಕುಂಚಾವರಂ ಗ್ರಾಮವನ್ನೇ ನೋಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹೆಚ್ಚು ಅನುದಾನವನ್ನು ಈ ಭಾಗಕ್ಕೆ ನೀಡಿದ್ದರು. ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ಬಿಜೆಪಿಯಿಂದ ಮಾತ್ರ ರಾಜ್ಯದ ಪ್ರಗತಿ ಸಾಧ್ಯ ಎಂದು ಹೇಳಿದರು.

ಯುಎನ್ಐ ವಿಎನ್ 1952

More News
ಮೈತ್ರಿ ಸರ್ಕಾರ ಮುನ್ನಡೆಸಲು ದಶ ಸೂತ್ರಗಳನ್ನು ಮಂಡಿಸಿದ ಕಾಂಗ್ರೆಸ್ ಸಚಿವರು

ಮೈತ್ರಿ ಸರ್ಕಾರ ಮುನ್ನಡೆಸಲು ದಶ ಸೂತ್ರಗಳನ್ನು ಮಂಡಿಸಿದ ಕಾಂಗ್ರೆಸ್ ಸಚಿವರು

24 May 2019 | 8:36 PM

ಬೆಂಗಳೂರು,ಮೇ 24 (ಯುಎನ್ಐ) ಪತನದ ಭೀತಿ ಎದುರಿಸುತ್ತಿರುವ ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಸಚಿವರು ನಂಬಿಕೆ,ವಿಶ್ವಾಸದ ಭರವಸೆ ನೀಡಿದ್ದಾರೆ ಜೊತೆಗೆ ಸರ್ಕಾರ ಸುಸೂತ್ರವಾಗಿ ಮುನ್ನಡೆಸಲು ಹಲವಾರು ಷರತ್ತುಗಳನ್ನು ವಿ‍ಧಿಸಿದ್ದಾರೆ

 Sharesee more..

ರಕ್ತಚಂದನ ಕಳ್ಳಸಾಗಣೆ : ನಾಲ್ವರ ಬಂಧನ

24 May 2019 | 8:32 PM

 Sharesee more..
ತುಮಕೂರಿಗೆ ನಾನೇ ಮಣ್ಣಿನ ಮಗ - ಜಿ ಎಸ್ ಬಸವರಾಜು

ತುಮಕೂರಿಗೆ ನಾನೇ ಮಣ್ಣಿನ ಮಗ - ಜಿ ಎಸ್ ಬಸವರಾಜು

24 May 2019 | 7:46 PM

ಬೆಂಗಳೂರು, ಮೇ 24 (ಯುಎನ್‍ಐ) ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗನೇ ಹೊರತು ತುಮಕೂರಿಗಲ್ಲ.

 Sharesee more..
ಸರ್ಕಾರ ರಚನೆಗೆ ಕಳ್ಳ, ಸುಳ್ಳರನ್ನು ಸೇರಿಸಿಕೊಳ್ಳಬೇಡಿ - ಎಸ್  ಮುನಿಸ್ವಾಮಿ

ಸರ್ಕಾರ ರಚನೆಗೆ ಕಳ್ಳ, ಸುಳ್ಳರನ್ನು ಸೇರಿಸಿಕೊಳ್ಳಬೇಡಿ - ಎಸ್ ಮುನಿಸ್ವಾಮಿ

24 May 2019 | 7:39 PM

ಬೆಂಗಳೂರು, ಮೇ 24 (ಯುಎನ್‍ಐ) ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವಿಪಕ್ಷದಲ್ಲಿರುವ ಕಳ್ಳ, ಸುಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದು ಹೇಳಿದ್ದೇನೆಯೇ ಹೊರತು ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಕರೆದು ತರುತ್ತೇನೆ ಎಂದು ಹೇಳಿಲ್ಲ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಚುನಾಯಿತ ಬಿಜೆಪಿ ಸದಸ್ಯ ಎಸ್.

 Sharesee more..