Sunday, Sep 19 2021 | Time 23:25 Hrs(IST)
Sports Share

ಒಲಿಂಪಿಕ್ಸ್ ಹಾಕಿ: ಭಾರತಕ್ಕೆ 3-2 ಗೋಲುಗಳ ಜಯ, ಶುಭಾರಂಭ

ಒಲಿಂಪಿಕ್ಸ್ ಹಾಕಿ: ಭಾರತಕ್ಕೆ 3-2 ಗೋಲುಗಳ ಜಯ, ಶುಭಾರಂಭ
ಒಲಿಂಪಿಕ್ಸ್ ಹಾಕಿ: ಭಾರತಕ್ಕೆ 3-2 ಗೋಲುಗಳ ಜಯ, ಶುಭಾರಂಭ

ಟೋಕಿಯೊ, ಜು.24 (ಯುಎನ್ಐ) ಭರವಸೆಯ ಆಟಗಾರ ಹರ್ಮನ್ ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ಪುರುಷರ ಹಾಕಿ ತಂಡ ‘ಎ’ ಗುಂಪಿನಲ್ಲಿ 3-2 ರಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಒಲಿಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದೆ.



ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿತು. ಕೊನೆಯ ಕ್ಷಣದಲ್ಲಿ ಸಿಕ್ಕ ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಗೋಲು ಬಾರಿಸಿ ಅಂಕವನ್ನು ಸಮನಾಗಿಸುವ ನ್ಯೂಜಿಲೆಂಡ್ ತಂಡದ ಆಸೆ ಫಲಿಸಲಿಲ್ಲ. ಪರಿಣಾಮ ಮನ್ ಪ್ರೀತ್ ಸಿಂಗ್ ಪಡೆ ಅರ್ಹ ಗೆಲುವು ದಾಖಲಿಸಿ, ಪೂರ್ಣ ಅಂಕ ಕಲೆ ಹಾಕಿದೆ.

ಭಾರತದ ಪರ ರೂಪೇಂದ್ರ ಪಾಲ್ ಸಿಂಗ್ (10ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (26, 33ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಕಿವೀಸ್ ತಂಡದ ಪರ ರಸೆಲ್ ಕೇನ್ (6ನೇ ನಿಮಿಷ), ಜೆನ್ನೆಸ್ ಸ್ಟೀಫನ್ (43ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.



ಮೊದಲಾವಧಿಯಲ್ಲಿ ಉಭಯ ತಂಡಗಳು ಅಬ್ಬರದ ಆಟವನ್ನು ಆಡಿದವು. ಈ ಅವಧಿಯಲ್ಲಿ ಭಾರತ ಮುನ್ನಡೆಯ ಕನಸು ಕಂಡಿತು. ಆದರೆ, ನ್ಯೂಜಿಲೆಂಡ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಬಾರಿಸಿ ಖಾತೆ ತೆರೆಯುವಲ್ಲಿ ಸಫಲವಾಯಿತು. ಇದೇ ಅವಧಿಯಲ್ಲಿ ರುಪೇಂದ್ರ ಪಾಲ್ ಸಿಂಗ್ ಸಿಕ್ಕ ಅವಕಾಶದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯಲ್ಲಿ ನೂಕುವಲ್ಲಿ ಸಫಲರಾದರು. ಪರಿಣಾಮ ಮೊದಲಾವಧಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು.



ಎರಡನೇ ಅವಧಿಯಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು ಹೆಚ್ಚಿಸಿಕೊಂಡಿತು.



ಮೂರನೇ ಅವಧಿಯ ಆರಂಭದಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಹರ್ಮನ್ ಗೋಲಿನ ನಗೆ ಬೀರಿದರು. ಪರಿಣಾಮ ಗೋಲಿನ ಅಂತರ ವೃದ್ಧಿಸಿತು. ಇದೇ ಅವಧಿಯ ಕೊನೆಯಲ್ಲಿ ನ್ಯೂಜಿಲೆಂಡ್ ತಂಡದ ಜೆನ್ನೆಸ್ ಸ್ಟೀಫನ್ ಮತ್ತೊಂದು ಗೋಲು ಬಾರಿಸಿ ಅಬ್ಬರಿಸಿದರು. ಈ ಅವಧಿಯ ಮುಕ್ತಾಯದಲ್ಲಿ ಭಾರತ 3-2 ಮುನ್ನಡೆ ಸಾಧಿಸಿತ್ತು.



ಕೊನೆಯ ಅವಧಿಯಲ್ಲಿ ಗೋಲು ಬಾರಿಸಿ, ಅಂಕ ಗಳಿಸುವ ಇರಾದೆಯೊಂದಿಗೆ ಅಂಗಳಕ್ಕೆ ಇಳಿದ ನ್ಯೂಜಿಲೆಂಡ್ ಆರ್ಭಟಿಸಿತು. ಆದರೆ ಭಾರತದ ಗೋಲ್ ಕೀಪರ್ ಶ್ರೀಜೇಶ್ ಹಾಗೂ ರಕ್ಷಣಾ ಆಟಗಾರರ ಸಮಯೋಚಿತ ಆಟದ ನೆರವಿನಿಂದ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಭಾರತ ಒಲಿಂಪಿಕ್ಸ್ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.



ಯುಎನ್ಐ ವಿಎನ್ಎಲ್ 0910