Tuesday, Jul 23 2019 | Time 00:11 Hrs(IST)
business economy Share

ಅರ್ಥಶಾಸ್ತ್ರಜ್ಞರು, ತಜ್ಞರೊಂದಿಗೆ ಪ್ರಧಾನಿಯಿಂದ ಬಜೆಟ್ ಪೂರ್ವ ಸಮಾಲೋಚನೆ

ನವದೆಹಲಿ, ಜೂನ್ 22 (ಯುಎನ್‌ಐ) ಕೇಂದ್ರ ಬಜೆಟ್‌ಗೆ ಕೆಲವು ದಿನಗಳಿದ್ದು ಮತ್ತು ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಶನಿವಾರ 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರೊಂದಿಗೆ 'ಆರ್ಥಿಕ ನೀತಿ – ಮುಂದಿನ ದಾರಿ' ಎಂಬ ವಿಷಯದ ಕುರಿತು ಸಂವಾದ ನಡೆಸಿದರು.
ನೀತಿ ಆಯೋಗ ಆಯೋಜಿಸಿದ್ದ ಸಂವಾದದಲ್ಲಿ ಐದು ವಿಭಿನ್ನ ಗುಂಪುಗಳಲ್ಲಿ ತಜ್ಞರು ಸ್ಥೂಲ ಆರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ಜಲ ಸಂಪನ್ಮೂಲಗಳು, ರಫ್ತು, ಶಿಕ್ಷಣ ಮತ್ತು ಆರೋಗ್ಯದ ಆರ್ಥಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಆರ್ಥಿಕತೆಯ ವಿವಿಧ ಅಂಶಗಳ ಕುರಿತು ವಿವಿಧ ಸಲಹೆಗಳು ಮತ್ತು ಅವಲೋಕನಗಳನ್ನು ಪ್ರಸ್ತಾಪಿಸಿದ ಭಾಗಿದಾರರಿಗೆ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದರು.
ಹೊಸ ಸರ್ಕಾರದ 2019-20ರ ಮೊದಲ ಬಜೆಟ್ ಇದಾಗಿದ್ದು, ಇತ್ತೀಚಿನ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಬೃಹತ್‌ ಜನಾದೇಶ ದೊರೆತಿರುವುದರಿಂದ ಈ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ವಾಹನಗಳ ಮಾರಾಟದಲ್ಲಿ ಕುಸಿತ ಮತ್ತು ದೇಶೀಯ ತೈಲ ಬಳಕೆ ಕಡಿಮೆಯಾಗಿರುವುದು ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆ ಭಯ, ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಕುಸಿತದ ಬೆನ್ನಲ್ಲೇ ಈ ಸಂವಾದಕ್ಕೆ ಮಹತ್ವ ಬಂದಿದೆ.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಮತ್ತು ಯೋಜನಾ ರಾಜ್ಯ ಖಾತೆ ಸಚಿವ ರಾವ್ ಇಂದ್ರಜಿತ್ ಸಿಂಗ್ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಕೇಂದ್ರ ಸರ್ಕಾರದ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2020