Tuesday, Jul 23 2019 | Time 00:28 Hrs(IST)
Sports Share

ತಾಯಿ ಕನಸು ಈಡೇರಿಸುವ ತುಡಿತದಲ್ಲಿ ಸಿಮೋನಾ ಹಲೆಪ್‌

ಲಂಡನ್‌, ಜು 12 (ಯುಎನ್‌ಐ) ಇಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ ಫೈನಲ್‌ ತಲುಪಿದ ರೋಮೆನಿಯಾದ ಮೊದಲ ಟೆನಿಸ್‌ ಆಟಗಾರ್ತಿ ಎಂಬ ಕೀರ್ತಿಗೆ ಭಾಜನವಾಗಿರುವ ಸಿಮೋನಾ ಹಲೆಪ್‌ ಅವರು ನಾಳೆ ತಮ್ಮ ತಾಯಿಯ ಕನಸು ನನಸು ಮಾಡುವ ತುಡಿತದಲ್ಲಿದ್ದಾರೆ.
ವಿಶ್ವ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರ ವಿರುದ್ಧ ನಾಳೆ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಸುತ್ತಿನಲ್ಲಿ ಸಿಮೋನಾ ಹಲೆಪ್‌ ಸೆಣಸಲಿದ್ದಾರೆ. ಆದರೆ, ಅಮೆರಿಕ ಆಟಗಾರ್ತಿ ವಿರುದ್ಧ ಗೆಲುವು ಸಾಧಿಸುವುದು ಅಷ್ಟೊಂದು ಸುಲಭವಲ್ಲ. ಸೆರೆನಾ 24ನೇ ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲುವ ಗುರಿ ಹೊಂದಿದ್ದಾರೆ. ಇವರಿಬ್ಬರು ಒಟ್ಟು 10 ಬಾರಿ ಮುಖಾಮುಖಿಯಾಗಿದ್ದು, ಸಿಮೋನಾ ಹಲೆಪ್‌ ಕೇವಲ ಒಂದು ಬಾರಿ ಜಯ ಸಾಧಿಸಿದ್ದಾರೆ.
ಕಳೆದ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೋನಾ ಹಲೆಪ್‌ ಅವರು 6-1, 6-3 ಸೆಮಿಫೈನಲ್‌ ನಲ್ಲಿ ಎಲಿನಾ ಸ್ವಿಟೋಲಿನಾ ವಿರುದ್ಧ ಜಯ ಸಾಧಿಸಿ ಫೈನಲ್‌ ತಲುಪಿದರು. ಈ ವೇಳೆ ತನ್ನ ತಾಯಿ ತನಿಯಾ ಅವರು ಒಂದು ದಶಕದಿಂದ ಕಂಡಿರುವ ಕನಸು ಈಡೇರಿಸುವ ಸನಿಹದಲ್ಲಿದ್ದೇನೆ ಎಂದು ಹೇಳಿದ್ದರು.
ವಿಂಬಲ್ಡನ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನಾನು ನಿನ್ನನ್ನು ನೋಡಬೇಕು. ಸೆಲೆಬ್ರೆಟಿಗಳು ದೊಡ್ಡ ಸ್ಟಾರ್‌ಗಳು ರಾಯಲ್‌ ಬಾಕ್ಸ್‌ನಿಂದ ನಿನ್ನ ಪಂದ್ಯವನ್ನು ನೋಡುವುದನ್ನು ನಾನು ಕಣ್ತುಂಬಿಸಿಕೊಳ್ಳಬೇಕು ಎಂದು ಸಿಮೋನಾ ಹಲೆಪ್‌ ತಾಯಿ ತನಿಯಾ 10, 15 ವರ್ಷಗಳ ಹಿಂದೆ ಹೇಳಿದ್ದರು.
"ವಿಂಬಲ್ಡನ್‌ ಫೈನಲ್‌ ತಲುಪಿರುವ ಕ್ಷಣ ನಂಬಲಾಗದ ಕ್ಷಣ. ನನ್ನ ತಾಯಿಯ ಕನಸು ನಿಜವಾಗಿದೆ. ಇದು ನನ್ನ ಜೀವನದ ವಿಶೇಷ ದಿನ. ವಿಶ್ವ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಎದುರು ಆಡಲು ಉತ್ಸಾಹದಿಂದ ಕಾಯುತ್ತಿದ್ದೇನೆ. ನಿಜವಾಗಲೂ ಈ ಪಂದ್ಯವನ್ನು ಖುಷಿಯಿಂದ ಆಡುತ್ತೇನೆ ಎಂದು ಹಲೆಪ್‌ ಹೇಳಿದ್ದಾರೆ.
ಯುಎನ್ಐ ಆರ್‌ಕೆ ಎಎಚ್‌ 1252