Saturday, May 25 2019 | Time 05:13 Hrs(IST)
Sports Share

ಪುಣೆ ಪ್ರೈಡ್ ಕೋಟೆಯಲ್ಲಿ ಬಂಧಿಯಾದ ಬೆಂಗಳೂರು ರೈನೋಸ್

ಪುಣೆ, ಮೇ 15 (ಯುಎನ್‌ಐ) ಪಂದ್ಯದ ಪ್ರಥಮಾರ್ಧದಲ್ಲಿ ಸಿಕ್ಕ ಮುನ್ನಡೆಯ ಲಾಭ ಪಡೆಯುವಲ್ಲಿ ವಿಫಲಗೊಂಡ ಬೆಂಗಳೂರು ರೈನೋಸ್ ತಂಡ, ಇಲ್ಲಿ ನಡೆಯುತ್ತಿರುವ ಇಂಡೊ ಇಂಟರ್‌ ನ್ಯಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಪುಣೆ ಪ್ರೈಡ್ ತಂಡದ ಎದುರು ಸೋತು ನಿರಾಸೆ ಅನುಭವಿಸಿದೆ.
ಇಲ್ಲಿನ ಬಾಳೆವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಟೂರ್ನಿಯ ಪ್ರಥಮ ಚರಣದಲ್ಲಿ ಬುಧವಾರ ನಡೆದ ‘ಎ’ ಜೋನ್‍ನ ಎರಡನೇ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಪುಣೆ ಪ್ರೈಡ್ ತಂಡ 32-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದ ಪುಣೆ ತಂಡ ‘ಎ’ ಜೋನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಪ್ರೈಡ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಹರಿಯಾಣ ಹೀರೋಸ್ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಪಾಂಡಿಚೆರಿ ಪ್ರೆಡೇಟರ್ಸ್ ತಂಡವನ್ನು ಬಗ್ಗುಬಡಿದಿದ್ದ ಬೆಂಗಳೂರು ತಂಡ, ಸತತ ಎರಡನೇ ಜಯ ದಾಖಲಿಸುವ ಉತ್ತಮ ಅವಕಾಶವನ್ನು ಕೈಚೆಲ್ಲಿತು.

ಮೊದಲ ಕ್ವಾರ್ಟರ್‌ ನಲ್ಲಿ ರೈನೋಸ್ ದಾಳಿ
ಅಕ್ಷರಶಃ ಮಿಂಚಿನ ದಾಳಿ ನಡೆಸಿದ ಬೆಂಗಳೂರು ರೈನೋಸ್ ತಂಡ ಮೊದಲ ಕ್ವಾರ್ಟರ್ ನಲ್ಲಿ ಎದುರಾಳಿ ತಂಡದ ಭದ್ರ ಕೋಟೆಯನ್ನು ಛಿದ್ರ ಮಾಡಿತ್ತು. ಮೊದಲ ಹತ್ತು ನಿಮಿಷಗಳ ಆಟದಲ್ಲಿ ಎದುರಾಳಿ ತಂಡಕ್ಕೆ ಕೇವಲ 1 ಅಂಕವನ್ನು ಮಾತ್ರವೇ ಬಿಟ್ಟುಕೊಟ್ಟು, ಬರೋಬ್ಬರಿ 12 ಅಂಕಗಳನ್ನು ಬಾಚಿಕೊಂಡಿದ್ದ ಬೆಂಗಳೂರು ತಂಡ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸೂಚನೆ ನೀಡಿತ್ತು. ಆದರೆ, ಎರಡನೇ ಕ್ವಾರ್ಟರ್ ನಲ್ಲಿ ಪಂದ್ಯದ ದಿಕ್ಕೇ ಬದಲಾಯಿತು.
ತಿರುಗೇಟು ನೀಡಿದ ಪ್ರೈಡ್:
ಮೊದಲ ಕ್ವಾರ್ಟರ್ ನಲ್ಲಿ ಅನುಭವಿಸಿದ ಭಾರಿ ಹಿನ್ನಡೆಯನ್ನು ಬದಿಗೊತ್ತಿ ಸಂಘಟಿತ ಆಟವಾಡಿದ ಪುಣೆ ತಂಡ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಎರಡನೇ ಕ್ವಾರ್ಟರ್‌ ನಲ್ಲಿ ರೈನೋಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಈ ಅವಧಿಯಲ್ಲಿ 6 ಅಂಕಗಳನ್ನು ಬಿಟ್ಟುಕೊಟ್ಟ ಪ್ರೈಡ್ ಪಡೆ, ತನ್ನ ಖಾತೆಗೆ 13 ಅಂಕಗಳನ್ನು ಜೋಡಿಸಿ ಒಟ್ಟು ಮುನ್ನಡೆಯನ್ನು 14-18ಕ್ಕೆ ತಗ್ಗಿಸುವಲ್ಲಿ ಯಶಸ್ವಿಯಾಯಿತು. ಬಳಿಕ ತಿರುಗಿ ನೋಡದ ಪುಣೆ ತಂಡ ರೈನೋಸ್ ಏಟಿಗೆ ಎದುರೇಟು ನೀಡಿ ಸತತ ಅಂಕಗಳನ್ನು ಗಳಿಸುವ ಮೂಲಕ ಸಮಬಲ ಸಾಧಿಸಿತು.
ಪಂದ್ಯದ ಮೂರನೇ ಕ್ವಾರ್ಟರ್ ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿ 6-6 ಅಂಕಗಳ ಸಮಬಲ ಮೂಡಿಬಂದಿತು. ಆದರೆ, ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ ನಲ್ಲಿ ಸಂಪೂರ್ಣವನ್ನೂ ಪಣಕ್ಕಿಟ್ಟಿ ಆಕ್ರಮಣಕಾರಿ ಆಟವಾಡಿದ ಪ್ರೈಡ್ ತಂಡ 12-5 ಅಂಕಗಳಿಂದ ರೈನೋಸ್ ಪಡೆಯನ್ನು ಹಿಮ್ಮೆಟ್ಟಿಸಿ, 32-29 ಅಂಕಗಳ ರೋಚಕ ಜಯ ದಕ್ಕಿಸಿಕೊಂಡಿತು.
ಕ್ವಾರ್ಟರ್ ಗಳ ವಿವರ
1ನೇ ಕ್ವಾರ್ಟರ್: ಪುಣೆ 01 – 12 ಬೆಂಗಳೂರು
2ನೇ ಕ್ವಾರ್ಟರ್: ಪುಣೆ 13 – 06 ಬೆಂಗಳೂರು
3ನೇ ಕ್ವಾರ್ಟರ್: ಪುಣೆ 06 – 06 ಬೆಂಗಳೂರು
4ನೇ ಕ್ವಾರ್ಟರ್: ಪುಣೆ 12 – 05 ಬೆಂಗಳೂರು
ಯುಎನ್‌ಐ ಆರ್‌ಕೆ ಕೆಎಸ್‌ವಿ 2247