Saturday, May 25 2019 | Time 04:55 Hrs(IST)
Sports Share

ಪ್ರೆಡೇಟರ್ಸ್ ಅಬ್ಬರಕ್ಕೆ ತಲೆಬಾಗಿದ ಹರಿಯಾಣಾ ಹೀರೋಸ್

ಪುಣೆ, ಮೇ 15 (ಯುಎನ್‌ಐ) ತನ್ನ ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿನಿಂದ ಪಾಠ ಕಲಿತಿದ್ದ ಪಾಂಡಿಚೆರಿ ಪ್ರೆಡೇಟರ್ಸ್ ತಂಡ ಇಲ್ಲಿ ನಡೆಯುತ್ತಿರುವ ಇಂಡೊ ಇಂಟರ್ ನ್ಯಾಷನಲ್ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬುಧವಾರ ಹರಿಯಾಣ ಹೀರೋಸ್ ವಿರುದ್ಧ ಜಯ ದಾಖಲಿಸಿ ಗೆಲುವಿನ ಹಾದಿ ಹಿಡಿಯಿತು.
ಇಲ್ಲಿನ ಬಾಳೆವಾಡಿಯಲ್ಲಿರುವ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ‘ಎ’ ಝೋನ್‍ನ ಮೊದಲ ಪಂದ್ಯದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪಾಂಡಿಚೆರಿ ಪ್ರೆಡೇಟರ್ಸ್ ತಂಡ, ಹರಿಯಾಣ ಹೀರೋಸ್ ಎದುರು 52-28 ಅಂಕಗಳ ಭರ್ಜರಿ ಗೆಲುವು ಸಂಪಾದಿಸಿತು.
ಇದಕ್ಕೂ ಮೊದಲು ಪುಣೆ ಪ್ರೈಡ್ ತಂಡದ ಎದುರು 43-34 ಅಂಕಗಳಿಂದ ಹೀನಾಯ ಸೋಲುಂಡಿದ್ದ ಹರಿಯಾಣ ಹೀರೋಸ್ ತಂಡ ಇದೀಗ ಸತತ ಸೋಲಿನ ಆಘಾತಕ್ಕೊಳಗಾಗಿದೆ. ಮತ್ತೊಂದೆಡೆ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ರೈನೋಸ್ ಎದುರು 39-32 ಅಂಕಗಳಿಂದ ಸೋತಿದ್ದ ಪಾಂಡಿಚೆರಿ ಪ್ರೆಡೇಟರ್ಸ್ ಇದೀಗ ಅಂಕಪಟ್ಟಿಯಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಮೊದಲೆರಡು ಕ್ವಾರ್ಟರ್‌ ಗಳಲ್ಲಿ ಪ್ರೆಡೇಟರ್ಸ್ ಪ್ರಾಬಲ್ಯ:
ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿರುವ ಪ್ರೆಡೇಟರ್ಸ್ ಪಡೆ, ಹರಿಯಾಣ ವಿರುದ್ಧದ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡುವ ತಂತ್ರಕ್ಕೆ ಮೊರೆ ಹೋಯಿತು. ಪರಿಣಾಮ ಪ್ರೆಡೇಟರ್ಸ್ ತಂಡಕ್ಕೆ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಯಿತು. ಎರಡೂ ಕ್ವಾರ್ಟರ್‌ಗಳಲ್ಲಿ ರೇಡರ್ ಗಳ ಮಿಂಚಿನ ಆಟ ಮತ್ತು ಡಿಫೆನ್ಸ್ ವಿಭಾಗದ ಸಂಘಟಿತ ಪ್ರದರ್ಶನದಿಂದ ಪ್ರಾಬಲ್ಯ ಮೆರೆದ ಪಾಂಡಿಚೆರಿ ಪಡೆ, 12-6 ಮತ್ತು 18-4 ಅಂಕಗಳನ್ನು ಗಿಟ್ಟಿಸುವ ಮೂಲಕ ಒಟ್ಟಾರೆ 30-10 ಅಂಕಗಳ ಭಾರಿ ಮುನ್ನಡೆಯನ್ನು ತನ್ನದಾಗಿಸಿಕೊಂಡಿತು.
ಹರಿಯಾಣ ಹೀರೋಸ್ ಹೋರಾಟ:
ಎರಡು ಕ್ವಾರ್ಟರ್ ಗಳ ಮುಕ್ತಾಯಕ್ಕೆ ಬರೋಬ್ಬರಿ 20 ಅಂಕಗಳ ಮುನ್ನಡೆ ಗಳಿಸಿದ ಪಾಂಡಿಚರಿ ತಂಡ ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಡಿಫೆನ್ಸ್‌ಗೆ ಹೆಚ್ಚಿನ ಆದ್ಯತೆ ನೀಡಿ ಎದುರಾಳಿಗೆ ಅಂಕ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಿತು. ಈ ಹಂತದಲಿ ಪುಟಿದೆದ್ದ ಹೀರೋಸ್ ತಂಡ ಮೂರನೇ ಕ್ವಾರ್ಟರರ್‌ನಲ್ಲಿ 13-8 ಅಂಕಗಳನ್ನು ಗಳಿಸಿ ಹೋರಾಡಿತು. ಆದರೆ, ನಾಲ್ಕನೇ ಕ್ವಾರ್ಟರ್‌ನಲ್ಲಿ ಮತ್ತದೇ ರಾಗ ಎಂಬಂತೆ ಹರಿಯಾಣ ತಂಡದ ಡಿಫೆನ್ಸ್ ಮತ್ತು ದಾಳಿ ಎರಡೂ ಹಳ್ಳ ಹಿಡಿದಿತ್ತು. ಇದರ ಪೂರ್ಣ ಲಾಭ ಪಡೆದುಕೊಂಡ ಪ್ರೆಡೇಟರ್ಸ್ ಅಂಕಗಳಿಕೆಯಲ್ಲಿ ಅರ್ಧಶತಕ ದಾಖಲಿಸಿತು. ಅಂತಿಮವಾಗಿ ನಾಲ್ಕನೇ ಕ್ವಾರ್ಟರ್‌ನಲ್ಲಿ 14-5ರ ಮೇಲುಗೈ ಸಾಧಿಸಿದ ಪ್ರೆಡೇಟರ್ಸ್ 52-28 ಅಂಕಗಳಿಂದ ಪಂದ್ಯ ಗೆದ್ದು ಬೀಗಿತು.
ಕ್ವಾರ್ಟರ್ ಗಳ ವಿವರ
1ನೇ ಕ್ವಾರ್ಟರ್: ಹರಿಯಾಣ 06 – 12 ಪಾಂಡಿಚೆರಿ
2ನೇ ಕ್ವಾರ್ಟರ್: ಹರಿಯಾಣ 04 – 18 ಪಾಂಡಿಚೆರಿ
3ನೇ ಕ್ವಾರ್ಟರ್: ಹರಿಯಾಣ 13 – 07 ಪಾಂಡಿಚೆರಿ
4ನೇ ಕ್ವಾರ್ಟರ್: ಹರಿಯಾಣ 05 – 14 ಪಾಂಡಿಚೆರಿ
ಯುಎನ್‌ಐ ಆರ್‌ಕೆ ಜಿಎಸ್‌ಆರ್‌ 2233