Wednesday, May 27 2020 | Time 03:04 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Health -Lifestyle Share

ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ
ಯೋಗ-ಜ್ಞಾನಿಗಳು ಕಂಡಂತೆ

-ಎಸ್ ಆಶಾ(ಅಂಕಿತಾ ಕಶ್ಯಪ್)

(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಯು 11.06.2019 ರಿಂದ 21.10.19 ರವರೆಗೆ ಯೋಗ ಸಾಧಕರು, ಯೋಗಿಗಳು ಹಾಗೂ ಯೋಗದ ಮಹತ್ವದ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ)

ಬೆಂಗಳೂರು, ಜೂನ್ 13 (ಯುಎನ್ಐ) ಯೋಗ ಎಂಬುದು ಯಾವುದೋ ಒಂದು ದಿನಕ್ಕೆ ಸೀಮಿತವಾದ ಆಚರಣೆಯಲ್ಲ. ಆದಾಗ್ಯೂ, ಅತ್ಯಂತ ಪ್ರಯೋಜನಕಾರಿಯಾದ, ಖರ್ಚು ವೆಚ್ಚಗಳಿಲ್ಲದೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಲಾಭ ಪಡೆದುಕೊಳ್ಳಬಹುದಾದ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಒತ್ತು ನೀಡಲಾಗುತ್ತಿದೆ.ಯೋಗವು ಜೀವನ ಧರ್ಮವಾದ ಕಾರಣ ಪ್ರತಿನಿತ್ಯ ಪಾಲಾನಾ ಯೋಗ್ಯ. ನಮ್ಮ ಚಿತ್ತ ಶುದ್ಧಿಗಾಗಿ ಪತಂಜಲಿ ಮಹರ್ಷಿಯು ಅಷ್ಟಾಂಗ ಯೋಗ ರೂಪಿಸಿದ್ದಾರೆ. ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಇವೇ ಅಷ್ಟಾಂಗಗಳು.ಈ ಅಷ್ಟಾಂಗಗಳ ಬಗ್ಗೆ ಪ್ರತಿನಿತ್ಯ ಒಂದಿಷ್ಟು ತಿಳಿದುಕೊಳ್ಳುತ್ತಾ ಹೋಗೋಣ. ಮೊದಲಿಗೆ ಯಮ. ‘ಯಮ’ ಎಂದರೆ ಕಪ್ಪು ಕೋಣನ ಮೇಲೆ ಪಾಶ ಹಿಡಿದು ಕಳಿತ ವ್ಯಕ್ತಿಯಲ್ಲ. ಸಾಮಾಜಿಕ ಶಿಸ್ತು ಹಾಗೂ ಅವುಗಳ ಅನುಶಾಸನಕ್ಕಾಗಿ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಸಾರ್ವತ್ರಿಕ ನಿಯಮಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಮೇಲ್ನೋಟಕ್ಕೆ ಇವುಗಳ ಪಾಲನೆ ಸುಲಭವೆನಿಸಿದರೂ, ಅನುಷ್ಠಾನಕ್ಕೆ ಮುಂದಾದಾಗ ಕಠಿಣವೆನಿಸುತ್ತದೆ.ಅಲ್ಲದೆ ಇವು ಒಂದಕ್ಕೊಂದು ಪೂರಕ ಹಾಗೂ ಪ್ರೇರಕವಾಗಿವೆ. ನಾವು ಯಾರನ್ನೂ ಹಿಂಸಿಸುವುದಿಲ್ಲ ಎಂದಾದರೆ, ಸತ್ಯವನ್ನು ಪಾಲಿಸುತ್ತಿರಬೇಕು. ಸತ್ಯ ಹೇಳಬೇಕಿದ್ದಲ್ಲಿ ಕಳ್ಳತನ, ಪರರ ವಸ್ತುಗಳ ಬಗ್ಗೆ ಅಪೇಕ್ಷೆ, ಇಟ್ಟುಕೊಳ್ಳುವಂತಿಲ್ಲ. ಈ ನಿಮಯ ಪಾಲನೆ ಮಾಡಬೇಕಿದ್ದಲ್ಲಿ ಬ್ರಹ್ಮಚರ್ಯ ಅಂದರೆ, ಪಂಚೇಂದ್ರಿಯಗಳ ನಿಗ್ರಹ, ಜ್ಞಾನಸಂಪಾದನೆ ಅಗತ್ಯ. ಕೊನೆಯದಾಗಿ ಅಪರಿಗ್ರಹದ ವಿಷಯಕ್ಕೆ ಬರುವುದಾದರೆ, ಬೇಕು, ಬೇಕು ಎಂಬ ಮನಃಸ್ಥಿತಿಯಿಂದ ನಮ್ಮ ದುಡಿಮೆಗೆ ತಕ್ಕ ಸಂಪಾದನೆಯಲ್ಲಿ ಸಾಕೆನಿಸುವ ಮನಃಸ್ಥಿತಿಗೆ ತಲುಪುವುದು.ಅಷ್ಟಾಂಗಯೋಗದಲ್ಲಿ 2ನೆಯದಾದ‘ನಿಯಮ’ ಪ್ರತಿಯೊಬ್ಬರೂ ಪಾಲಿಸಬೇಕಾದ ವೈಯುಕ್ತಿಕ ನಿಯಮಗಳು, ಅಂದರೆ ನಡವಳಿಕೆಗಳು, ನಿಬಂಧನೆಗಳು, ಚೌಕಟ್ಟುಗಳ ಬಗ್ಗೆ ತಿಳಿಸಲಾಗಿದೆ. ಇವು ಶೌಚ (ದೇಹ-ಮನಸ್ಸುಗಳ, ಅಂತರಂಗ-ಬಹಿರಂಗಗಳ ಶುದ್ಧತೆ) ಸಂತೋಷ, ಸ್ವಾಧ್ಯಾಯ, ತಪಸ್ಸು ಹಾಗೂ ಈಶ್ವರ ಪ್ರಣೀಧಾನ. ಈ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ನಾವಿಂದು ಎದುರಿಸುತ್ತಿರುವ ಶೇ 90ರಷ್ಟು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.ಅಂತರಂಗ, ಬಹಿರಂಗ ಶುದ್ಧಿಯಿಂದ ಹಲವು ವೈರಸ್ ಗಳು ನಮ್ಮ ಬಳಿ ಸುಳಿಯಲು ಅಂಜುತ್ತವೆ. ಇನ್ನು ತೃಪ್ತ ಭಾವನೆಯಿಂದ ಸಂತೋಷವಾಗುತ್ತದೆ. ಸ್ವ ವಿಮರ್ಶೆ ಮಾಡಿಕೊಳ್ಳುವುದಿರಂದ ನಮ್ಮಲ್ಲಿನ ಹುಳುಕುಗಳು ನಮ್ಮ ಕಣ್ಣಿಗೆ ಬಿದ್ದು, ಮತ್ತೊಬ್ಬರ ಮೇಲೆ ತಪ್ಪು ಹೊರಿಸುವುದುನ್ನು ನಿಲ್ಲಿಸಿ, ತನ್ಮೂಲಕ ಸಂತೋಷದಿಂದಿರಲು ಸಾಧ್ಯವಾಗುತ್ತದೆ.ಇಷ್ಟೆಲ್ಲ ಇದ್ದಾಗ ಸಾಧನೆಯ ಮಾರ್ಗ ಗೋಚರಿಸಿ ಅತ್ತ ಮುನ್ನಡೆಯಲು ಆರಂಭಿಸುತ್ತೇವೆ. ಈ ಸಂದರ್ಭದಲ್ಲಿ ಎದುರಾಗುವ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಳ್ಳುತ್ತೇವೆ ಎಂಬುದೇ ತಪಸ್ಸು. ಇನ್ನು ಕೊನೆಯದಾಗಿ ಈಶ್ವರ ಪ್ರಣೀಧಾನ. ನಮ್ಮ ದೇಶದ ಬಹುತೇಕ ಜನರ ನೆಮ್ಮದಿಗೆ ಕಾರಣವಾಗಿರುವುದೇ ಈ ನಿಯಮ ಎನ್ನಬಹುದು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲಾಗದೆ ಸೋತಾಗ, ಎಲ್ಲವೂ ಈಶ್ವರೇಚ್ಛೆ ಎಂದು ಕಾಣದ ಶಕ್ತಿಯ ಮೇಲೆ ಭಾರ ಹಾಕಿ ಮುಂದಿನ ಮಾರ್ಗ ಕಂಡುಕೊಳ್ಳಲು ಯತ್ನಿಸುತ್ತೇವೆ.ಅಷ್ಟಾಂಗಯೋಗದಲ್ಲಿ 3ನೆಯದು ‘ಆಸನ’ ದೇಹದ ಭಂಗಿಯ ಕುರಿತು ತಿಳಿಸುತ್ತದೆ.‘ಆಸನಾನಿ ಚ ತಾವಂತೋ ಯಾವಂತೋ ಜೀವ ಜಂತವಃ’ ಅಂದರೆ ಈ ಸೃಷ್ಟಿಯಲ್ಲಿ ಎಷ್ಟು ಬಗೆಯ ಜೀವರಾಶಿಗಳಿವೆಯೊ, ಅಷ್ಟು ಬಗೆಯ ಆಸನಗಳಿವೆ ಎನ್ನುತ್ತಾರೆ ಮಹರ್ಷಿ ಪತಂಜಲಿ. ದೇಹ ಮತ್ತು ಮನಸ್ಸುಗಳ ಸಾಮರಸ್ಯ ಏರ್ಪಡಿಸಲು ಆಸನಗಳ ಕಲಿಕೆ ಆರೋಗ್ಯ ದೃಷ್ಟಿಯಿಂದ ಅನಿವಾರ್ಯ.ವಿವಿಧ ಬಗೆಯ ಆಸನಗಳು ಹಾಗೂ ಉಪಯೋಗಗಳ ಕುರಿತು ನಾಳಿನ ಸಂಚಿಕೆಯಲ್ಲಿ ತಿಳಿಯೋಣ.ಯುಎನ್ಐ ಎಸ್ಎ ವಿಎನ್ 1504