Tuesday, Jul 23 2019 | Time 00:15 Hrs(IST)
Health -Lifestyle Share

ಯೋಗ-ಜ್ಞಾನಿಗಳು ಕಂಡಂತೆ

-ಎಸ್ ಆಶಾ(ಅಂಕಿತಾ ಕಶ್ಯಪ್)
(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಯು 11.06.2019 ರಿಂದ 21.10.19 ರವರೆಗೆ ಯೋಗ ಸಾಧಕರು, ಯೋಗಿಗಳು ಹಾಗೂ ಯೋಗದ ಮಹತ್ವದ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ)
ಬೆಂಗಳೂರು, ಜೂನ್ 13 (ಯುಎನ್ಐ) ಮಹರ್ಷಿ ಪತಂಜಲಿಯವರ ಅಷ್ಟಾಂಗ ಯೋಗಗಳಾದ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿತ್ತು.

‘ಯಮ’ ದಲ್ಲಿ ಬರುವ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, 2ನೆಯದಾದ‘ನಿಯಮ’ ದಲ್ಲಿ ಶೌಚ, ಸಂತೋಷ, ಸ್ವಾಧ್ಯಾಯ, ತಪಸ್ಸು ಹಾಗೂ ಈಶ್ವರ ಪ್ರಣಿಧಾನದ ಬಗ್ಗೆ ಚರ್ಚಿಸಿದ್ದೆವು.

ಅಷ್ಟಾಂಗ ಯೋಗಗಳಲ್ಲಿ 3 ನೆಯದು ಆಸನ. ಕಳೆದ 5 ವರ್ಷಗಳಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದ್ದು, ಎಲ್ಲೆಡೆ ಜನಪ್ರಿಯವಾಗುತ್ತಿರುವ ವಿವಿಧ ಭಂಗಿಯ ಆಸನಗಳ ಬಗ್ಗೆ ಪತಂಜಲಿಯವರು ಇದರಲ್ಲಿ ವಿವರಿಸಿದ್ದಾರೆ.

ನಾವು ಈ ಭೂಮಿಯ ಮೇಲೆ ಜನಿಸಿ, ಸಾಧನಾ ಪಥದಲ್ಲಿ ನಡೆದು ಗುರಿ ಸಾಧಿಸಬೇಕಾದರೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಿದ್ದಲ್ಲಿ ಈ ದೇಹವೊಂದು ಸಾಧನವಾಗಿ ಕೆಲಸ ಮಾಡುತ್ತದೆ. ಹೀಗಾಗಿಯೇ ‘ಮಾನವ ಜನ್ಮ ದೊಡ್ಡದು, ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಎಚ್ಚರಿಸಿದ್ದಾರೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಕ್ರಿಯಾಯೋಗದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ, ದೇಹ ಪ್ರಮುಖವಾಗುತ್ತದೆ.

ದೇಹ ಸ್ವಸ್ಥವಾಗಿದ್ದರೆ ಮಾತ್ರ ಕುಟುಂಬವನ್ನು ಸ್ವಸ್ಥವಾಗಿರಿಸಲು ತನ್ಮೂಲಕ ದೇಶವನ್ನು ಅಭಿವೃದ್ಧಿಗೊಳಿಸಲು ಪ್ರತಿಯೊ ಬ್ಬರೂ ತಮ್ಮದೇ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಆಯುಷ್ಯ ಎಷ್ಟಿದೆಯೋ, ಬರೆದವನೇ ಬಲ್ಲ. ಆದರೆ ಇರುವಷ್ಟು ದಿನ ಆರೋಗ್ಯದಿಂದಿರಲು ಹಲವು ಮಾರ್ಗಗಳು ನಮ್ಮ ಮುಂದಿದೆ. ಇವುಗಳಲ್ಲಿ ಅಷ್ಟಾಗಯೋಗಗಳಲ್ಲೊಂದಾದ ‘ಆಸನ’ವೂ ಸೇರಿದೆ.

ಎದ್ದ ಕೂಡಲೇ ನಿತ್ಯಕರ್ಮಗಳನ್ನೂ ಸರಿಯಾಗಿ ಮಾಡದೆ, ಒತ್ತಡದೊಂದಿಗೆ ಕಚೇರಿಗೆ ಹೊರಡುವ ಜನರೇ ಅಧಿಕ. ಸರಿಯಾಗಿ ಕುಳಿತು ತಿನ್ನಲೂ ಸಮಯವಿಲ್ಲದೆ, ಗಬಗಬನೆ ಒಂದಿಷ್ಟು ನುಂಗಿ, ದಿನವಿಡೀ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಲೇ ರೋಗದ ಗೂಡಾಗಿಬಿಡುತ್ತೇವೆ.

ಹೀಗಾಗಬಾರದು ಎಂದಾದರೆ ನಮ್ಮ ಜೀವನಶೈಲಿ ಬದಲಾಗಬೇಕು. ಬೆಳಗಿನ ಜಾವ 4 ರಿಂದ 6 ಗಂಟೆಯೊಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಂಡು, ಎಲ್ಲ ಕೆಲಸಗಳ ನಡುವೆ ಒಂದರ್ಧ ಗಂಟೆಯನ್ನು ನಮಗಾಗಿ ಮೀಸಲಿಟ್ಟರೆ ಮಾತ್ರ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮಗಳ ಕಡೆ ಗಮನ ಹರಿಸಲು ಸಾಧ್ಯ.

ಮಹರ್ಷಿ ಪತಂಜಲಿಯವರು ‘ಸ್ಥಿರಂಸುಖಮಾಸನಂ’ ಎನ್ನುತ್ತಾರೆ. ಆಸನ ಎಂದರೆ ದೇಹದ ಭಂಗಿ. ‘ಆಸನಾನಿ ಚ ತಾವಂತೋ ಯಾವಂತೋ ಜೀವ ಜಂತವಃ’ ಅಂದರೆ ಈ ಸೃಷ್ಟಿಯಲ್ಲಿ ಎಷ್ಟು ಬಗೆಯ ಜೀವರಾಶಿಗಳಿವೆಯೋ ಅಷ್ಟು ಆಸನಗಳಿವೆಯಂತೆ.

ಸೂಕ್ತ ಯೋಗ ಗುರುಗಳ ಮುಖೇನ ನಮಗೆ ಸೂಕ್ತವಾದ ಆಸನಗಳನ್ನು ಕಲಿತು ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದರೆ, ದಿನೇ ದಿನೆ ಆರೋಗ್ಯ ವೃದ್ಧಿಯಾಗುತ್ತದೆ. ಮಧುಮೇಹ, ಬೆನ್ನುನೋವು ಸೇರಿದಂತೆ ಯಾವುದಾದರೂ ಸಮಸ್ಯೆಗಳಿಂದ ನರಳುತ್ತಿದ್ದರೆ ಅದಕ್ಕೆ ತಕ್ಕ ಆಸನಗಳನ್ನು ಅಭ್ಯಾಸ ಮಾಡಬಹುದು. ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಯುಎನ್ಐ ಎಸ್ಎ ಆರ್ ಕೆ 1423
More News
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

15 Jul 2019 | 8:08 PM

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..
ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

14 Jul 2019 | 2:28 PM

ನವದೆಹಲಿ, ಜುಲೈ 14 (ಯುಎನ್ಐ) ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ಸಹಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

 Sharesee more..