Wednesday, May 27 2020 | Time 03:25 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Health -Lifestyle Share

ಯೋಗ-ಜ್ಞಾನಿಗಳು ಕಂಡಂತೆ

ಯೋಗ-ಜ್ಞಾನಿಗಳು ಕಂಡಂತೆ
ಯೋಗ-ಜ್ಞಾನಿಗಳು ಕಂಡಂತೆ

-ಎಸ್ ಆಶಾ(ಅಂಕಿತಾ ಕಶ್ಯಪ್)(ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ. ಈ ನಿಟ್ಟಿನಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಯು 11.06.2019 ರಿಂದ 21.10.19 ರವರೆಗೆ ಯೋಗ ಸಾಧಕರು, ಯೋಗಿಗಳು ಹಾಗೂ ಯೋಗದ ಮಹತ್ವದ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ)

ಬೆಂಗಳೂರು, ಜೂನ್ 14 (ಯುಎನ್ಐ) ಮಹರ್ಷಿ ಪತಂಜಲಿಯವರ ಅಷ್ಟಾಂಗ ಯೋಗಗಳಾದ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಬಗ್ಗೆ ಕಳೆದ ಕೆಲ ಸಂಚಿಕೆಗಳಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.‘ಅಷ್ಟಾಂಗ ಯೋಗ’ ಗಳಲ್ಲಿ ಯಮ, ನಿಯಮಗಳನ್ನು ಖಂಡಿತ ಅನುಸರಿಸುವ ಪ್ರಯತ್ನ ಮಾಡುತ್ತೇವೆ, ಮೊದಲು ನಮ್ಮ ದೇಹದ ಸಮಸ್ಯೆಗಳು ನಿವಾರಣೆಯಾಗಬೇಕು ಎನ್ನುವುದು ಹಲವರ ಅಂಬೋಣ. ‘ನನಗೆ ಬೆನ್ನು ನೋವಿನ ಸಮಸ್ಯೆ ಪರಿಹಾರವಾದ್ರೆ ಸಾಕು. ಅದಕ್ಕೆ ತಕ್ಕ ಆಸನ ಹೇಳಿಕೊಡಿ’ ಎಂದು ಕೆಲವರು ಯೋಗ ಗುರುಗಳಲ್ಲಿ ಕೇಳಿಕೊಳ್ಳುತ್ತಾರೆ. ಇನ್ನು ಕೆಲವರು, ಮಧುಮೇಹ, ಸೊಂಟದ ನೋವು, ಮಂಡಿನೋವು ಹೀಗೆ ಹಲವು ಸಮಸ್ಯೆಗಳನ್ನು ಹೊತ್ತು ಗುರುಗಳ ಬಳಿ ಹೋಗುತ್ತಾರೆ.ನುರಿತ ಯೋಗ ಗುರುಗಳ ಮುಖೇನ ನಮಗೆ ಸೂಕ್ತವಾದ ಆಸನಗಳನ್ನು ಕಲಿತು ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದರೆ, ದಿನೇ ದಿನೆ ಆರೋಗ್ಯ ವೃದ್ಧಿಯಾಗುತ್ತದೆ. ಮಧುಮೇಹ, ಬೆನ್ನುನೋವು, ಋತುಚಕ್ರದ ಸಮಸ್ಯೆ ಸೇರಿದಂತೆ ಯಾವುದಾದರೂ ಸಮಸ್ಯೆಗಳಿಂದ ನರಳುತ್ತಿದ್ದರೆ ಅದಕ್ಕೆ ತಕ್ಕ ಆಸನಗಳನ್ನು ಅಭ್ಯಾಸ ಮಾಡಬಹುದು. ಆಸನಗಳು ಮಾತ್ರವಲ್ಲದೆ ಅದಕ್ಕೆ ಪೂರಕವಾದ ಆಹಾರ ಸೇವನೆಯೂ ಅಗತ್ಯ.ಈ ಹಿಂದೆಯೇ ಹೇಳಿದಂತೆ ನೂರಾರು ಬಗೆಯ ಆಸನಗಳಿವೆ. ಅವುಗಳಲ್ಲಿ ಸೂರ್ಯ ನಮಸ್ಕಾರ, ಶೀರ್ಷಾಸನ, ಭುಜಂಗಾಸನ, ವೃಕ್ಷಾಸನ, ಉಷ್ಟ್ರಾಸನ, ಪವನ ಮುಕ್ತಾಸನ, ಪಶ್ಚಿಮೋತ್ತಾಸನ, ಗೋಮುಖಾಸನ ಮೊದಲಾದವುಗಳು ಚಿಕಿತ್ಸಕ ಗುಣದಿಂದಾಗಿ ಜನಪ್ರಿಯವಾಗಿವೆ.ಯಾವುದೇ ಖರ್ಚಿಲ್ಲದೆ ಕೇವಲ ದೇಹವನ್ನು ದಂಡಿಸುವ ಮೂಲಕ ನಾವು ನಮ್ಮ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆರೋಗ್ಯವಂತರು ರೋಗ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದು.ರೋಗಗಳ ಚಿಕಿತ್ಸೆಗೆ ವೈದ್ಯರು ನೀಡುವ ಔಷಧಿಗಳನ್ನು ನಾವು ಹೇಗೆ ತಪ್ಪಿಸದೇ ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿ ಯೋಗಾಭ್ಯಾಸವನ್ನು ಚಿಕಿತ್ಸೆ ಎಂದೇ ತಿಳಿದು, ನಿರಂತರ ಅಭ್ಯಾಸ ಮಾಡುತ್ತಿದ್ದರೆ ದೇಹ ಸ್ವಸ್ಥವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಗಮನವಿಡಿ, ಯಾವುದೇ ಆನ್ ಲೈನ್ ಮೂಲಕ ಸ್ವತಃ ಅಭ್ಯಾಸ ಮಾಡಿ ಅಪಾಯಕ್ಕೆ ಸಿಲುಕಿಕೊಳ್ಳದೆ, ನುರಿತ ಯೋಗ ಗುರುಗಳಿಂದ ಕಲಿತು, ಅಭ್ಯಾಸ ಆರಂಭಿಸಿ.ಇತ್ತೀಚಿನ ವರ್ಷಗಳಲ್ಲಿ ಫಾಸ್ಟ್ ಫುಡ, ಜಂಕ್ ಫುಡ್ ಸೇವನೆಯ ಕಾರಣ, ಪ್ರತಿಯೊಬ್ಬರಲ್ಲೂ ಬೊಜ್ಜು ಬೆಳೆಯುತ್ತಿದೆ, ಹೆಚ್ಚಿನ ಸಮಯ ಕುಳಿತೇ ಕೆಲಸ ಮಾಡುವ ಕಾರಣ, ಬೆನ್ನುನೋವು, ಮಂಡಿನೋವು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಸಮಸ್ಯೆಗಳಿಗೆ ಸೂರ್ಯ ನಮಸ್ಕಾರ, ಪವನ ಮುಕ್ತಾಸನ, ಶಿತಲೀಕರಣ ಸಹಾಯಕವಾಗಬಲ್ಲವು.ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುವ ಸೂರ್ಯ ನಮಸ್ಕಾರದಲ್ಲಿ 'ಪ್ರಣಮಾಸನ', 'ಹಸ್ತ ಉತ್ಥನಾಸನ', 'ಹಸ್ತಪಾದಾಸನ', 'ಅಶ್ವ ಸಂಚಲನಾಸನ', 'ದಂಡಾಸನ', 'ಅಷ್ಟಾಂಗ ನಮಸ್ಕಾರ', 'ಭುಜಂಗಾಸನ', 'ಆಧೋಮುಖ ಶ್ವಾನಾಸನ', 'ಅಶ್ವ ಸಂಚಲನಾಸನ, ಹಸ್ತಪಾದಾಸನ', 'ಹಸ್ತ ಉತ್ಥನಾಸನ' ಹಾಗೂ 'ತಾಡಾಸನ' ಮಿಳಿತವಾಗಿದ್ದು ಈ ಹನ್ನೆರಡೂ ಆಸನಗಳನ್ನು ಇವುಗಳಿಗೆ ನೀಡಲಾದ ಕ್ರಮದಲ್ಲಿಯೇ ಒಂದಾದ ಬಳಿಕ ಒಂದರಂತೆ ಅನುಸರಿಸಬೇಕು. ಇಷ್ಟೂ ಆಸನಗಳನ್ನು ಕ್ರಮಬದ್ದವಾಗಿ ಅನುಸರಿಸಿದಾಗ ಒಂದು ಸೂರ್ಯ ನಮಸ್ಕಾರ ಹಾಕಿದಂತಾಗುತ್ತದೆ. 'ಸೂರ್ಯ ನಮಸ್ಕಾರ' ಅನುಸರಿಸುವ ಮೂಲಕ ದೇಹದ ಪ್ರತಿಯೊಂದು ಸ್ನಾಯುವಿಗೂ ಕೆಲಸ ನೀಡಿದಂತಾಗುತ್ತದೆ ಹಾಗೂ ಇದೇ ದೇಹದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ದಹಿಸಲ್ಪಡಲು ಮತ್ತು ತೂಕ ಇಳಿಸಲು ನೆರವಾಗುತ್ತದೆ.ಶೀರ್ಷಾಸನ, ಮಯೂರಾಸನ, ಧನುರಾಸನ, ಶಲಭಾಸನ, ಭುಜಂಗಾಸನ, ಉತ್ಥಿತ ತ್ರಿಕೋಣಾಸನ, ಉತ್ಥಿತ ಏಕಪಾದಾಸನ, ಉತ್ಥಿತ ದ್ವಿಪಾದಾಸನ, ಉತ್ತೀತ ತ್ರಿಕೋಣಾಸನ, ಪಶ್ಚಿಮೋತ್ಥಾಸನ, ಹಲಾಸನ, ಮೇರು ದಂಡಾಸನ, ಪಾದಸ್ಪರ್ಶ ಹಸ್ತಮೇರು ದಂಡಾಸನ, ಸರ್ವಾಂಗಾಸನ, ಮೇರು ದಂಡಾಸನಗಳೂ ಉಪಯುಕ್ತ.ಯೋಗಾಸನಗಳ ಉಪಯೋಗದ ಕುರಿತು ನಾಳಿನ ಸಂಚಿಕೆಯಲ್ಲಿ ಮತ್ತಷ್ಟು ಮಾಹಿತಿ ಪಡೆಯೋಣ.

ಯುಎನ್ಐ ಎಸ್ಎ ವಿಎನ್ 1605